ರಾಜಕೀಯ

'ರಾಮ ಮಂದಿರದ ಹಣ ಲೂಟಿ ಮಾಡಿದ್ದು ಬಡವರು, ದಲಿತರು ಅಲ್ಲ; RSS-BJP ಬೆಂಬಲಿಗರು': ಮಲ್ಲಿಕಾರ್ಜುನ ಖರ್ಗೆ ಆರೋಪ

ರಾಮ ಮಂದಿರದ ಹೆಸರಿನಲ್ಲಿ ನಡೆದ ಲೂಟಿಯನ್ನು ಯಾರು ಮಾಡಿದ್ದಾರೆ? ಬಡವರು ಹೋಗಿ ಕಳ್ಳತನ ಮಾಡಿದರಾ? ದಲಿತರು ಮಾಡಿದರಾ? ರೈತರು ಮಾಡಿದರಾ? ಇಲ್ಲ. ಸಮಾಜದಲ್ಲಿ ಪ್ರಭಾವ ಹೊಂದಿರುವ ಆರ್‌ಎಸ್‌ಎಸ್, ಬಿಜೆಪಿ ಮತ್ತು ಅವರ ಬೆಂಬಲಿಗರೇ ಈ ಲೂಟಿ ಮಾಡಿದ್ದಾರೆ.

'ರಾಮ ಮಂದಿರದ ಹಣ ಲೂಟಿ ಮಾಡಿದ್ದು ಬಡವರು, ದಲಿತರು ಅಲ್ಲ; RSS-BJP ಬೆಂಬಲಿಗರು': ಮಲ್ಲಿಕಾರ್ಜುನ ಖರ್ಗೆ ಆರೋಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ — (ANI Photo/Jitender Gupta)
Published On :

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದ ಹೆಸರಿನಲ್ಲಿ 20 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹಣ ಮತ್ತು ಆಸ್ತಿಯನ್ನು ಲೂಟಿ ಮಾಡಲಾಗಿದ್ದು, ಈ ಲೂಟಿಯಲ್ಲಿ ಬಡವರು, ದಲಿತರು ಅಥವಾ ರೈತರು ಭಾಗಿಯಾಗಿಲ್ಲ, ಆರ್‌ಎಸ್‌ಎಸ್, ಬಿಜೆಪಿ ಮತ್ತು ಅವರ ಬೆಂಬಲಿಗರೇ ಇದಕ್ಕೆ ಕಾರಣ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಭಾರತದ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 14 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ಖರ್ಗೆ, ರಾಮ ಮಂದಿರದ ದೇಣಿಗೆ ದುರ್ಬಳಕೆ ಕುರಿತು ಪ್ರಶ್ನೆ ಎತ್ತಿದರು.

"ರಾಮ ಮಂದಿರದ ಹೆಸರಿನಲ್ಲಿ ನಡೆದ ಲೂಟಿಯನ್ನು ಯಾರು ಮಾಡಿದ್ದಾರೆ? ಬಡವರು ಹೋಗಿ ಕಳ್ಳತನ ಮಾಡಿದರಾ? ದಲಿತರು ಮಾಡಿದರಾ? ರೈತರು ಮಾಡಿದರಾ? ಇಲ್ಲ. ಸಮಾಜದಲ್ಲಿ ಪ್ರಭಾವ ಹೊಂದಿರುವ ಆರ್‌ಎಸ್‌ಎಸ್, ಬಿಜೆಪಿ ಮತ್ತು ಅವರ ಬೆಂಬಲಿಗರೇ ಈ ಲೂಟಿ ಮಾಡಿದ್ದಾರೆ" ಎಂದು ಆರೋಪಿಸಿದರು.

ಧರ್ಮದ ಹೆಸರನ್ನು ಬಳಸಿಕೊಂಡು ಭ್ರಷ್ಟಾಚಾರ ನಡೆಸಲಾಗುತ್ತಿದೆ, "ಪ್ರತಿದಿನ ದೇವರ ಹೆಸರನ್ನು ಜಪಿಸುತ್ತಾರೆ. ಆದರೆ ಅದೇ ದೇವರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಾರೆ. ಇದು ಜನರನ್ನು ಮೋಸಗೊಳಿಸುವ ಕೆಲಸ" ಎಂದು ವಾಗ್ದಾಳಿ ನಡೆಸಿದರು.

ಗ್ರಾಮದಿಂದ ಗ್ರಾಮಕ್ಕೆ ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುವವರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. "ರಾಮನ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರ ಬಳಿ ಹೋಗುವವರೇ ಈ ರೀತಿಯ ಲೂಟಿಯಲ್ಲಿ ತೊಡಗಿದ್ದಾರೆ. ಆದ್ದರಿಂದ ಜನರು ಜಾಗರೂಕರಾಗಿರಬೇಕು" ಎಂದು ತಿಳಿಸಿದರು.

ಇದೇ ವೇಳೆ ಉತ್ತರ ಪ್ರದೇಶದಿಂದ ಬಂದಿರುವ ಮಾಹಿತಿಯನ್ನು ಉಲ್ಲೇಖಿಸಿದ ಖರ್ಗೆ, "ರಾಮ ಮಂದಿರದ ಹೆಸರಿನಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಬೆಳ್ಳಿ ಇಟ್ಟಿಗೆಗಳನ್ನು ಲೂಟಿ ಮಾಡಲಾಗಿದೆ ಎಂಬ ಸುದ್ದಿಗಳು ಬರುತ್ತಿವೆ" ಎಂದು ಆರೋಪಿಸಿದರು.

ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದ ಅವರು, ಕೇವಲ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕುವುದರಿಂದ ಅಥವಾ ಅವರ ಫೋಟೋ ಇಡುವುದರಿಂದ ಪರಿಶಿಷ್ಟ ಜಾತಿಯ ಜನರ ಅಭಿವೃದ್ಧಿಯಾಗುವುದಿಲ್ಲ.

"ಸ್ವಾಭಿಮಾನದಿಂದ ಬದುಕುವುದು, ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ಎಂಬ ಚೈತನ್ಯವನ್ನು ಡಾ. ಅಂಬೇಡ್ಕರ್ ನಮಗೆ ನೀಡಿದ್ದಾರೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದ ನಿಜವಾದ ಅಭಿವೃದ್ಧಿ ಸಾಧ್ಯ.

ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. "ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮುಂಚೂಣಿ ಸಮುದಾಯದವರು ಎಲ್ಲರೂ ಒಂದಾಗಿ ಸಂವಿಧಾನವನ್ನು ಕಾಪಾಡಬೇಕು. ಈ ದೇಶದಲ್ಲಿ ಸಂವಿಧಾನಕ್ಕೆ ರಕ್ಷಣೆ ಇಲ್ಲದಿದ್ದರೆ ಯಾರಿಗೂ ಭದ್ರತೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಚುನಾವಣೆಯಲ್ಲಿ ಅಧಿಕಾರ ಪಡೆಯುವುದಷ್ಟೇ ಸಾಕಾಗುವುದಿಲ್ಲ, "ರಾಜಕೀಯ ಅಧಿಕಾರ ಸಿಕ್ಕರೂ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ನ್ಯಾಯ ಸಿಗದಿದ್ದರೆ ಅದರ ಪ್ರಯೋಜನವೇ ಇಲ್ಲ. ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯ ದೊರಕಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ.

ಇದೇ ವೇಳೆ ತಾವು ಬೌದ್ಧ ಧರ್ಮವನ್ನು ಅನುಸರಿಸುತ್ತಿರುವುದನ್ನು ಉಲ್ಲೇಖಿಸಿದ ಖರ್ಗೆ, ಡಾ. ಅಂಬೇಡ್ಕರ್ ಅವರ ಮಾತುಗಳನ್ನು ನೆನಪಿಸಿಕೊಂಡರು. "ಧರ್ಮ ಮನುಷ್ಯನಿಗೆ ಅಗತ್ಯ. ಆದರೆ, ಮನುಷ್ಯ ಧರ್ಮಕ್ಕಾಗಿ ಹುಟ್ಟಿಲ್ಲ" ಎಂಬ ಅಂಬೇಡ್ಕರ್ ಅವರ ಸಂದೇಶವನ್ನು ಉಲ್ಲೇಖಿಸಿ, ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸಬಾರದು ಎಂದು ಹೇಳಿದರು.

ಇದೇ ವೇಳೆ, 30 ದಿನಗಳ ಕಾಲ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರು ಅನರ್ಹರಾಗುವ ಪ್ರಸ್ತಾವಿತ ಕಾನೂನಿನ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಅದರ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕವೇ ಕಾಂಗ್ರೆಸ್ ತನ್ನ ಅಧಿಕೃತ ನಿಲುವು ಪ್ರಕಟಿಸಲಿದೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.