ರಾಜಕೀಯ

ಚುನಾವಣೆ ಭ್ರಷ್ಟಾಚಾರ: ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರ ವಿರುದ್ಧ ಬಿಜೆಪಿ ದೂರು

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ವಿರುದ್ಧ ಬಿಜೆಪಿ ಶುಕ್ರವಾರ ದೂರು ನೀಡಿದೆ.

ಚುನಾವಣೆ ಭ್ರಷ್ಟಾಚಾರ: ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರ ವಿರುದ್ಧ ಬಿಜೆಪಿ ದೂರು
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ವಿರುದ್ಧ ಬಿಜೆಪಿ ಶುಕ್ರವಾರ ದೂರು ನೀಡಿದೆ.

ಕರ್ನಾಟಕ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಬಿಜೆಪಿ ದೂರು ಸಲ್ಲಿಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲು ನಿರ್ದೇಶಿಸುವಂತೆ ಆಗ್ರಹಿಸಿದೆ.

ಮತದಾರರಿಗೆ ಆಸೆ, ಆಮಿಷ ಒಡ್ಡಬಾರದೆಂದು ಕಾನೂನಿದೆ. ಆದರೆ, ಬಟ್ಟೆ ತೊಳೆಯುವ ಮತ್ತು ಇಸ್ತ್ರಿ ಹಾಕುವ ಮಡಿವಾಳ ಸಮುದಾಯಕ್ಕೆ ಇಸ್ತ್ರಿ ಪೆಟ್ಟಿಗೆ ಮತ್ತು ಮನೆ ಮನೆಗೆ ಕುಕ್ಕರ್‌, ಹಣ ಹಂಚಿದ ಬಗ್ಗೆ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಭಾಷಣದಲ್ಲಿ ತಿಳಿಸಿದ್ದಾರೆ.

ಈ ಕುರಿತ ವಿಡಿಯೊ ತುಣುಕು, ಸುದ್ದಿ ನಾಡಿನಾದ್ಯಂತ ಹರಡಿದೆ. ಆಮಿಷ ಒಡ್ಡಿದ ಪರಿಣಾಮವಾಗಿ ಸಿದ್ದರಾಮಯ್ಯ ಗೆದ್ದಿದ್ದಾಗಿ ಅವರ ಮಗನೇ ಹೇಳಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರು ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಿರ್ದೇಶಿಸಬೇಕೆಂದು ಆಗ್ರಹಿಸಿದರು.

ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಸಂಘಟನೆಗಾಗಿ ಚುನಾವಣೆಗೂ ಮುನ್ನ ಸಾವಿರಾರು ಜನರಿಗೆ ಕುಕ್ಕರ್‌ ಮತ್ತು ಐರನ್‌ ಬಾಕ್ಸ್‌ ಹಂಚಲಾಗಿತ್ತು ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇತ್ತೀಚೆಗೆ ನಂಜನಗೂಡಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಸೆ. 15 ರಂದು ನಗರದ ಬೈಪಾಸ್‌ ರಸ್ತೆಯಲ್ಲಿನಿರ್ಮಾಣ ಹಂತದಲ್ಲಿರುವ ಮಡಿವಾಳ ಸಮುದಾಯ ಭವನದ ಆವರಣದಲ್ಲಿ ನೂತನ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ‘‘ಕಳೆದ ಚುನಾವಣೆ ಸಂದರ್ಭ ವರುಣಾ ಕ್ಷೇತ್ರದ ಮಡಿವಾಳ ಸಮುದಾಯವನ್ನು ಸಂಘಟನೆ ಮಾಡಲು ಸಾವಿರಾರು ಜನರನ್ನು ಸೇರಿಸಿ ಕುಕ್ಕರ್‌ ಹಾಗೂ ಐರನ್‌ ಬಾಕ್ಸ್‌ ನೀಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ತಂದೆಯವರು ಬ್ಯುಸಿ ಇದ್ದರು. ಆದರೂ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಪಟ್ಟುಬಿಡದೆ ಎರಡು-ಮೂರು ಸಾರಿ ಬಂದು, ಒತ್ತಡ ಹಾಕಿ ದಿನಾಂಕ ನಿಗಪಡಿಸಿ ಸಿದ್ದರಾಮಯ್ಯ ಅವರ ಕಾರ್ಯಕ್ರಮವನ್ನು ಮಾಡಿದರು. ಈ ವೇಳೆ ನನಗೆ ಬೇರೆ ಕಾರ್ಯಕ್ರಮವಿದ್ದುದರಿಂದ ನಾನು ಬಂದಿರಲಿಲ್ಲ. ಆದರೆ, ತಂದೆಯವರೇ ಬಂದಿದ್ದರು. ಅವರ ಕೈಯಲ್ಲೇ ಕುಕ್ಕರ್‌ ಹಾಗೂ ಐರನ್‌ ಬಾಕ್ಸ್‌ ಕೊಡಿಸಲಾಗಿತ್ತು. ಇದು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಗೆಲುವಿಗೆ ಸಹಕಾರಿಯಾಯಿತು’’ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.