ದೇಶ

ಟಿಫಿನ್‌ನಲ್ಲಿ ಮೆಂತ್ಯೆ ಪಲ್ಯ ತಂದಿದ್ದಕ್ಕೆ 50 ರೂ ದಂಡ! ಶಾಲೆಯಲ್ಲಿ ವಿವಾದ; ಏನಿದು 'ಪರ್ಯುಷಣ್ ಪರ್ವ'?

ಶಾಲೆಯ ನಿರ್ಧಾರದ ವಿರುದ್ಧ ಇದೀಗ ಪೋಷಕರು ಗರಂ ಆಗಿದ್ದು, ವಿದ್ಯಾರ್ಥಿಗಳು ಮನೆಯಿಂದ ತಂದಿದ್ದ ಊಟದಲ್ಲಿ ಮೆಂತ್ಯೆ ಹಾಗೂ ಇದೇ ರೀತಿಯ ಕೆಲವು ತರಕಾರಿಗಳನ್ನು ಸೇವಿಸುವುದಕ್ಕೂ ನಿರ್ಬಂಧ ಹೇರಲಾಗಿತ್ತು..

ಟಿಫಿನ್‌ನಲ್ಲಿ ಮೆಂತ್ಯೆ ಪಲ್ಯ ತಂದಿದ್ದಕ್ಕೆ 50 ರೂ ದಂಡ! ಶಾಲೆಯಲ್ಲಿ ವಿವಾದ; ಏನಿದು 'ಪರ್ಯುಷಣ್ ಪರ್ವ'?
ಮೆಂತ್ಯ ಆಹಾರಕ್ಕೆ ಶಾಲೆ ನಿರ್ಬಂಧ ಪೋಷಕರು ಗರಂ
Published On :

ಥಾಣೆ: ಜೈನ ಧರ್ಮದ ಪ್ರಮುಖ ಹಬ್ಬವಾದ ಪರ್ಯುಷಣ್ ಸಂದರ್ಭದಲ್ಲಿ ಟಿಫಿನ್‌ನಲ್ಲಿ ಮೆಂತ್ಯೆ ಪಲ್ಯ ತಂದ ವಿದ್ಯಾರ್ಥಿಗಳಿಗೆ 50 ರೂ ದಂಡ ವಿಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದರ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಶಾಲೆಯ ನಿರ್ಧಾರದ ವಿರುದ್ಧ ಇದೀಗ ಪೋಷಕರು ಗರಂ ಆಗಿದ್ದು, ವಿದ್ಯಾರ್ಥಿಗಳು ಮನೆಯಿಂದ ತಂದಿದ್ದ ಊಟದಲ್ಲಿ ಮೆಂತ್ಯೆ ಹಾಗೂ ಇದೇ ರೀತಿಯ ಕೆಲವು ತರಕಾರಿಗಳನ್ನು ಸೇವಿಸುವುದಕ್ಕೂ ನಿರ್ಬಂಧ ಹೇರಲಾಗಿತ್ತು ಎಂದು ಆರೋಪಿಸಿದ್ದಾರೆ.

ಇದರ ಬದಲಿಗೆ ಶಾಲೆಯ ಕ್ಯಾಂಟೀನ್‌ನಲ್ಲೇ ಊಟ ಮಾಡುವಂತೆ ಸೂಚಿಸಲಾಗಿದ್ದು, ಇದಕ್ಕಾಗಿ ಪ್ರತಿ ವಿದ್ಯಾರ್ಥಿಯಿಂದ 20 ರೂ ಶುಲ್ಕ ಪಡೆಯಲಾಗುತ್ತಿತ್ತು ಎನ್ನಲಾಗಿದೆ.

ಈ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ಆಹಾರದ ಆಯ್ಕೆಯನ್ನು ಶಾಲೆ ನಿರ್ಧರಿಸಬಹುದೇ ಎಂಬ ಪ್ರಶ್ನೆಗಳನ್ನು ಹಲವರು ಎತ್ತಿದ್ದಾರೆ.

ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್

ಇನ್ನು ಪೋಷಕರು ಮಾಡಿರುವ ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಮೀರಾ-ಭಾಯಂದರ್ ಮುನ್ಸಿಪಲ್ ಕಾರ್ಪೊರೇಷನ್‌ನ ಶಿಕ್ಷಣ ಇಲಾಖೆ ಶಾಲೆಗೆ ನೋಟಿಸ್ ಜಾರಿ ಮಾಡಿದೆ. ಆದರೆ, ಈ ಆರೋಪಗಳ ಕುರಿತು ಶಾಲೆಯ ಆಡಳಿತ ಮಂಡಳಿಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ವಿಜಯ್ ಎಂಬ ಬಳಕೆದಾರರು ಹಂಚಿಕೊಂಡ ಪೋಸ್ಟ್‌ನಲ್ಲಿ, ಭಾಯಂದರ್‌ನ ಶಾಲೆಯೊಂದಕ್ಕೆ ಮನೆ ಊಟದ ಟಿಫಿನ್‌ನಲ್ಲಿ ಮೆಂತ್ಯೆ ಪಲ್ಯ ತಂದಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬನಿಗೆ 50 ರೂ ದಂಡ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿಗಳ ಮೂಲಭೂತ ಆಹಾರದ ಆಯ್ಕೆ ಮತ್ತು ಪ್ರತಿದಿನದ ಊಟದ ಅಭ್ಯಾಸಗಳನ್ನೂ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ನಿಯಂತ್ರಿಸಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ.

ಏನಿದು ಪರ್ಯುಷಣ್ ಪರ್ವ?

ಪರ್ಯುಷಣ್ ಪರ್ವ ಜೈನ ಧರ್ಮದ ಪ್ರಮುಖ ವಾರ್ಷಿಕ ಆಚರಣೆಗಳಲ್ಲಿ ಒಂದಾಗಿದೆ. ಈ ಅವಧಿಯಲ್ಲಿ ಉಪವಾಸ, ಆತ್ಮಾವಲೋಕನ ಹಾಗೂ ಆಧ್ಯಾತ್ಮಿಕ ಚಿಂತನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.

ಪರ್ಯುಷಣ್ ಸಂದರ್ಭದಲ್ಲಿ ಅನೇಕ ಜೈನರು ಕಠಿಣ ಆಹಾರ ನಿಯಮಗಳನ್ನು ಪಾಲಿಸುತ್ತಾರೆ. ಅದರ ಭಾಗವಾಗಿ ಸೊಪ್ಪು-ತರಕಾರಿ ಹಾಗೂ ಬೇರು ತರಕಾರಿಗಳನ್ನು ಸೇವಿಸುವುದನ್ನು ಕೆಲವರು ತಪ್ಪಿಸುತ್ತಾರೆ.

ಆದರೆ, ಈ ಧಾರ್ಮಿಕ ಆಹಾರ ಪದ್ಧತಿಯನ್ನು ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹೇಗೆ ಅನ್ವಯಿಸಲಾಯಿತು ಎಂಬುದರ ಕುರಿತು ಇದೀಗ ವಿವಾದ ಉಂಟಾಗಿದ್ದು, ಶಿಕ್ಷಣ ಇಲಾಖೆ ನೀಡಿರುವ ನೋಟಿಸ್‌ಗೆ ಶಾಲೆ ನೀಡುವ ಸ್ಪಷ್ಟನೆ ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.