CEC ಜ್ಞಾನೇಶ್ ಕುಮಾರ್ ಅಮಾನತಿಗೆ ಆದೇಶಿಸಲು ಸುಪ್ರೀಂ ನಕಾರ: ಚುನಾವಣಾ ಆಯೋಗ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ!
ಇತರ ಇಬ್ಬರು ಚುನಾವಣಾ ಆಯುಕ್ತರ ಅನುಮೋದನೆಯಿಲ್ಲದೆ ಮುಖ್ಯ ಆಯುಕ್ತರು ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು, ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತಿಗೆ ಮಧ್ಯಂತರ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಇತರ ಇಬ್ಬರು ಚುನಾವಣಾ ಆಯುಕ್ತರ ಅನುಮೋದನೆಯಿಲ್ಲದೆ ಮುಖ್ಯ ಆಯುಕ್ತರು ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು, ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಹಿರಿಯ ವಕೀಲ ವಿಕಾಸ್ ಸಿಂಗ್ ಅವರ ವಾದಗಳನ್ನು ಪರಿಗಣಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ನ್ಯಾಯಪೀಠ, ಈ ನೋಟಿಸ್‌ಗಳನ್ನು ಜಾರಿಗೊಳಿಸಿತು.
ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ಇರಬೇಕು ಎಂದು ಹೇಳಿದ ನ್ಯಾಯಪೀಠ, ಎಲ್ಲಾ ನಿರ್ಧಾರಗಳನ್ನು ಈ ರೀತಿಯಾಗಿಯೇ ಕೈಗೊಳ್ಳಲಾಗಿದೆ ಎಂದು ತಾವು ಭಾವಿಸುವುದಾಗಿ ತಿಳಿಸಿತು. ಜ್ಞಾನೇಶ್ ಕುಮಾರ್ ಅಮಾನತಿಗೆ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು.
ಕಾನೂನುಬದ್ಧವಾಗಿ ಸಂಪೂರ್ಣ ಚುನಾವಣಾ ಆಯೋಗಕ್ಕೆ ಸೇರಿರುವ ಅಧಿಕಾರವನ್ನು ಮುಖ್ಯ ಚುನಾವಣಾ ಆಯುಕ್ತ ಕುಮಾರ್ ಅವರು ವೈಯಕ್ತಿಕವಾಗಿ ಚಲಾಯಿಸಿದ್ದಾರೆಯೇ ಎಂಬುದನ್ನು ನಿರ್ಧರಿಸಬೇಕು. ಒಂದು ವೇಳೆ ಹಾಗೆ ಮಾಡಿದ್ದರೆ, ಅಂತಹ ಕ್ರಮಗಳನ್ನು ಅನಧಿಕೃತವೆಂದು ಘೋಷಿಸಬೇಕು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಾಟ್ನಾ ನಿವಾಸಿ ರಾಕೇಶ್ ಕುಮಾರ್ ಸಿಂಗ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯಲ್ಲಿ ಕೋರಲಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐ ತಿಳಿಸಿದೆ.
ಅರ್ಜಿಯ ಅಂತಿಮ ಇತ್ಯರ್ಥವಾಗುವವರೆಗೆ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರ ಕಾರ್ಯಗಳನ್ನು ನಿರ್ವಹಿಸದಂತೆ ನಿರ್ದೇಶನ ನೀಡಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ, ಈ ಅವಧಿಯಲ್ಲಿ ಆಯೋಗದ ಕಾರ್ಯಕಲಾಪಗಳನ್ನು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಸರ್ವಾನುಮತದ ನಿರ್ಧಾರದ ಮೂಲಕ ನಡೆಸಬೇಕು ಹಾಗೂ ತೆರವಾದ ಸ್ಥಾನಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಶಿಫಾರಸಿನ ಮೇರೆಗೆ ನೇಮಕಾತಿ ನಡೆಯಬೇಕು ಎಂದು ಮನವಿ ಮಾಡಲಾಗಿದೆ.
ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದೊಳಗೆ ಉಂಟಾಗಿರುವ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗೆ ಈ ಅರ್ಜಿ ಸಲ್ಲಿಕೆಯಾಗಿದೆ.
ತಮ್ಮ ಗಮನಕ್ಕೆ ಬಾರದೆ ಅಥವಾ ಶಿಫಾರಸು ಇಲ್ಲದೆ ಹೊರಡಿಸಲಾದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಲಿಖಿತವಾಗಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾಗಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ತಿಳಿಸಿದ್ದರು ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಸೆಪ್ಟೆಂಬರ್ 25 ರಂದು ವರದಿ ಮಾಡಿತ್ತು.
ಇಬ್ಬರು ಆಯುಕ್ತರು ವ್ಯಕ್ತಪಡಿಸಿದ ಆಕ್ಷೇಪಣೆಗಳ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ಯಾವುದೇ ಸಂಸ್ಥೆಯಲ್ಲಿನ ಚರ್ಚೆಗಳ ಸಂದರ್ಭದಲ್ಲಿ ಭಿನ್ನ ಅಭಿಪ್ರಾಯಗಳು ಮತ್ತು ಅವಲೋಕನಗಳು ಸಹಜವಾದ ಭಾಗವಾಗಿರುತ್ತವೆ. ತನ್ನ ಎಲ್ಲಾ ಆದೇಶಗಳು ಸಂಪೂರ್ಣ ಕಾನೂನು ಮಾನ್ಯತೆಯನ್ನು ಹೊಂದಿವೆ ಮತ್ತು ಸ್ಥಾಪಿತ ಶಾಸನಬದ್ಧ ಕಾರ್ಯವಿಧಾನಗಳಿಗೆ ಅನುಗುಣವಾಗಿಯೇ ಹೊರಡಿಸಲಾಗಿದೆ ಎಂದು ಪ್ರತಿಪಾದಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



