'CEC ಜ್ಞಾನೇಶ್ ಕುಮಾರ್ ದೇಶದ್ರೋಹಿ': ಮುಂಬೈನಲ್ಲಿ Cockroach Janata Party ಪ್ರತಿಭಟನೆ ತೀವ್ರ; ರಾಜೀನಾಮೆಗೆ ಬಿಗಿಪಟ್ಟು..!
ಮುಖ್ಯ ಚುನಾವಣಾ ಆಯುಕ್ತರು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಅವರನ್ನು "ದೇಶದ್ರೋಹಿ" ಎಂದು ಕರೆದಿದ್ದಲ್ಲದೆ, ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಗಿಪಟ್ಟು ಹಿಡಿದಿದ್ದಾರೆ.

ಮುಂಬೈ: ಚುನಾವಣಾ ಆಯೋಗ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರು ಮತ್ತು ವಿವಿಧ ನಾಗರಿಕ ಸಂಘಟನೆಗಳ ಸದಸ್ಯರು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶುಕ್ರವಾರ ಪ್ರತಿಭಟನೆಗಿಳಿದಿದ್ದು, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಅವರನ್ನು "ದೇಶದ್ರೋಹಿ" ಎಂದು ಕರೆದಿದ್ದಲ್ಲದೆ, ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಗಿಪಟ್ಟು ಹಿಡಿದಿದ್ದಾರೆ.
ಇಂದು ನಾವು ಮುಂಬೈನಿಂದ ಆರಂಭಿಸುತ್ತಿದ್ದೇವೆ. ಇದು ಬಹುದೊಡ್ಡ ಪ್ರತಿಭಟನೆಯಾಗಲಿದೆ. ಕಳೆದ ಬಾರಿ ಮುಂಬೈ ತನ್ನ ಶಕ್ತಿಯನ್ನು ತೋರಿಸಿತ್ತು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೇಶದಾದ್ಯಂತ ಯುವಕರು ಹಾಗೂ ಹೊಸ ಪೀಳಿಗೆಯವರು ಬೀದಿಗಿಳಿದಿದ್ದರು. ಈ ಬಾರಿಯೂ ಜ್ಞಾನೇಶ್ ಕುಮಾರ್ ವಿರುದ್ಧ ಅದೇ ರೀತಿ ನಡೆಯಲಿದೆ. ಮುಂಬೈನ ಯುವಕರು ಮತ್ತೊಮ್ಮೆ ಬೀದಿಗಿಳಿದಿದ್ದಾರೆ.
ಇಂದು ಶಿವಾಜಿ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಎಲ್ಲಾ ಮುಂಬೈ ನಿವಾಸಿಗಳು ಹಾಗೂ ನಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಶಿವಾಜಿ ಪಾರ್ಕ್‌ನ ಕೆಲ ನಿವಾಸಿಗಳು ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ವಸತಿ ಪ್ರದೇಶದಲ್ಲಿರುವ ಉದ್ಯಾನವನ್ನು ಪ್ರತಿಭಟನಾ ಸ್ಥಳವಾಗಿ ಬಳಸುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಸ್ಥಳೀಯ ನಿವಾಸಿ ಸುನಿಲ್ ಭಗವತ್ ಮಾತನಾಡಿ, ಜನರು ಪ್ರತಿನಿತ್ಯ ವಾಯುವಿಹಾರಕ್ಕಾಗಿ ಶಿವಾಜಿ ಪಾರ್ಕ್‌ಗೆ ಬರುತ್ತಾರೆ. ಆದರೆ, ಇತ್ತೀಚೆಗೆ ಇಲ್ಲಿ ಪದೇಪದೆ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಈ ಉದ್ಯಾನದಲ್ಲಿ ವಾಯುವಿಹಾರಕ್ಕೆ ಬರುತ್ತೇವೆ. ಆದರೆ, ಇತ್ತೀಚೆಗೆ ಇಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಸಾಮಾನ್ಯ ಜನರಿಗೆ ಉಂಟಾಗುತ್ತಿರುವ ತೊಂದರೆಗೆ ಯಾರು ಹೊಣೆ? ಸಂವಿಧಾನವು ಇತರ ಜನರ ಮೇಲಿನ ನಿಮ್ಮ ಕರ್ತವ್ಯಗಳ ಬಗ್ಗೆ ತಿಳಿಸಿಲ್ಲವೇ? ಇಲ್ಲಿನ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾರು ಜವಾಬ್ದಾರರು?” ಎಂದು ಅವರು ಪ್ರಶ್ನಿಸಿದರು.
ಮತ್ತೊಬ್ಬ ನಿವಾಸಿ ರವೀಂದ್ರ ಎಂಬುವವರು ಮಾತನಾಡಿ, ಈ ಹಿಂದೆ ಇದೇ ಸ್ಥಳದಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ, ಪ್ರತಿಭಟನಾಕಾರರ ಸಂಖ್ಯೆ ದಾದರ್-ಶಿವಾಜಿ ಪಾರ್ಕ್ ರೈಲು ನಿಲ್ದಾಣದವರೆಗೂ ತಲುಪಿತ್ತು ಮತ್ತು ಮದ್ಯದ ಬಾಟಲಿಗಳನ್ನು ಎಸೆಯಲಾಗಿತ್ತು ಎಂದು ಆರೋಪಿಸಿದರು.
ಹಿಂದಿನ ಬಾರಿ ಈ ಜನರು ಪ್ರತಿಭಟನೆ ನಡೆಸಿದಾಗ ಅದನ್ನು ಸ್ವಯಂಪ್ರೇರಿತ ಪ್ರತಿಭಟನೆ ಎಂದು ಹೇಳಿದ್ದರು. ಅಂದು ಭಾರೀ ಜನಸಂದಣಿ ಉಂಟಾಗಿ ದಾದರ್-ಶಿವಾಜಿ ಪಾರ್ಕ್ ನಿಲ್ದಾಣದವರೆಗೂ ತಲುಪಿತ್ತು. ಇಲ್ಲಿಗೆ ಬಂದವರ ಮೇಲೆ ಮದ್ಯದ ಬಾಟಲಿಗಳನ್ನು ಎಸೆಯಲಾಗಿತ್ತು. ‘Jengi’ ಎಂದು ಕರೆಯುವವರನ್ನು ಸುಳ್ಳು ಹೇಳಿ ಇಲ್ಲಿಗೆ ಕರೆತರುತ್ತಾರೆ” ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳದ ಸಮೀಪ ಶಾಲೆಗಳು ಮತ್ತು ಆಸ್ಪತ್ರೆ ಇರುವ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದರು. ಹಿಂದಿನ ಪ್ರತಿಭಟನೆ ವೇಳೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು ಎಂದು ಹೇಳಿದರು.
ಇಲ್ಲಿ ಎರಡು ಶಾಲೆಗಳು ಮತ್ತು ಒಂದು ಆಸ್ಪತ್ರೆ ಇದೆ. ವಾಹನಗಳು ಸಂಚರಿಸಲು ಸಾಧ್ಯವಾಗಿರಲಿಲ್ಲ. ಸಂಜೆ 5 ಗಂಟೆ ಸುಮಾರಿಗೆ ಶಾಲೆಗಳು ಬಿಡುವಾಗ ಮಕ್ಕಳು ವಾಹನಗಳಲ್ಲೇ ಸಿಲುಕಿಕೊಂಡಿದ್ದರು. ನಾವೆಲ್ಲರೂ ಸಂವಿಧಾನವನ್ನು ಗೌರವಿಸುತ್ತೇವೆ. ಆದರೆ, ಈ ಜನರಿಗೆ ಇಲ್ಲಿಗೆ ಬಂದು ಪ್ರತಿಭಟನೆ ನಡೆಸಲು ಸಂವಿಧಾನ ಅನುಮತಿ ನೀಡಿದೆಯೇ? ಕಾನೂನು ಮತ್ತು ಸಂವಿಧಾನ ಅನುಮತಿ ನೀಡದಿದ್ದರೆ, ಯಾವ ಅಧಿಕಾರದ ಆಧಾರದಲ್ಲಿ ಇವರು ಇಲ್ಲಿಗೆ ಬರುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ದೆಹಲಿಯಲ್ಲೂ ಸಿಇಸಿ ವಿರುದ್ಧ ಪ್ರತಿಭಟನೆ
ಇದೇ ವೇಳೆ ದೆಹಲಿಯಲ್ಲಿ ವಿದ್ಯಾರ್ಥಿಗಳ ಒಕ್ಕೂಟ (ಎಸ್‌ಎಫ್‌ಐ) ಮತ್ತು ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ) ಸದಸ್ಯರು ಜಂತರ್ ಮಂತರ್ ಸಮೀಪ ಚುನಾವಣಾ ಆಯೋಗ ಹಾಗೂ ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ನಡೆಸಿದರು.
ಸಿಪಿಐ(ಎಂ) ನಾಯಕರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಆಗ್ರಹಿಸಿದರು.
ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ ನಡೆಯಿತು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್), 2023ರ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾತ್ಮಕ ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಚುನಾವಣಾ ಆಯೋಗದ ಕಾರ್ಯನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಜ್ಞಾನೇಶ್ ಕುಮಾರ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿದರು.
ಜನರ ಮತಗಳನ್ನು ಕಡಿತಗೊಳಿಸುವ ಅಪರಾಧಕ್ಕಾಗಿ ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಬೇಕು” ಎಂದು ಬೇಬಿ ಹೇಳಿದರು.
ಎಸ್‌ಎಫ್‌ಐ ಮತ್ತು ಡಿವೈಎಫ್‌ಐನ ಸಾವಿರಾರು ಯುವಕರು ಹಾಗೂ ವಿದ್ಯಾರ್ಥಿ ನಾಯಕರು ದೇಶದ ವಿವಿಧ ಭಾಗಗಳಿಂದ ದೆಹಲಿಗೆ ಆಗಮಿಸಿದ್ದಾರೆ ಎಂದು ಅವರು ತಿಳಿಸಿದರು.
ಜಂತರ್ ಮಂತರ್ ಸೇರಿದಂತೆ ದೆಹಲಿಯ ಕೆಲವೆಡೆ ಎಸ್‌ಎಫ್‌ಐ ಮತ್ತು ಡಿವೈಎಫ್‌ಐನ ಸಾವಿರಾರು ಯುವಕರು ಹಾಗೂ ವಿದ್ಯಾರ್ಥಿ ನಾಯಕರು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದಾರೆ. ಇಂದು ದೆಹಲಿಯಲ್ಲಿ ನಡೆಯುತ್ತಿರುವ ಅತಿದೊಡ್ಡ ಸಮಾವೇಶ ಇದಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಚುನಾವಣಾ ಆಯೋಗದ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ನಿಯಮಗಳನ್ನು ಸಿಇಸಿ ಜ್ಞಾನೇಶ್ ಕುಮಾರ್ ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ ಬೇಬಿ, ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಆಗ್ರಹಿಸಿದರು.
ಸಿಇಸಿ ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನಾ ಚಳವಳಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಇಂಡಿಯಾ ಮೈತ್ರಿಕೂಟ ಅಕ್ಟೋಬರ್ 6ರಂದು ಬೃಹತ್ ಮೆರವಣಿಗೆ ಸೇರಿದಂತೆ ಸರಣಿ ಪ್ರತಿಭಟನೆಗಳನ್ನು ನಡೆಸಲು ಯೋಜಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



