ದೇಶ

ಜಂತರ್ ಮಂತರ್‌ನಲ್ಲಿ ಹೈಡ್ರಾಮಾ: ನಿಷೇಧಾಜ್ಞೆ ನಡುವೆಯೂ AAP ಪ್ರತಿಭಟನೆ; ಸೌರಭ್ ಭಾರದ್ವಾಜ್ ಸೇರಿ ಹಲವರು ಪೊಲೀಸ್ ವಶಕ್ಕೆ..!

ವಶಕ್ಕೆ ಪಡೆಯುವ ಕೆಲವೇ ನಿಮಿಷಗಳ ಮೊದಲು ಎಎನ್‌ಐ ಜೊತೆ ಮಾತನಾಡಿದ ಭಾರದ್ವಾಜ್, ತಮ್ಮ ನಿವಾಸದ ಹೊರಗೆ ಪೊಲೀಸರು ನಿಯೋಜನೆಗೊಂಡಿದ್ದರು ಹಾಗೂ ಠಾಣಾಧಿಕಾರಿ ಇಡೀ ರಾತ್ರಿ ಅಲ್ಲೇ ಇದ್ದರು.

ಜಂತರ್ ಮಂತರ್‌ನಲ್ಲಿ ಹೈಡ್ರಾಮಾ: ನಿಷೇಧಾಜ್ಞೆ ನಡುವೆಯೂ AAP ಪ್ರತಿಭಟನೆ; ಸೌರಭ್ ಭಾರದ್ವಾಜ್ ಸೇರಿ ಹಲವರು ಪೊಲೀಸ್ ವಶಕ್ಕೆ..!
ಸೌರಭ್ ಭಾರದ್ವಾಜ್ ವಶಕ್ಕೆ ಪಡೆದ ಪೊಲೀಸರು.
Published On :

ನವದೆಹಲಿ: ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಭಾರಿ ರಾಜಕೀಯ ಹೈಡ್ರಾಮಾ ನಡೆದಿದೆ. ನಿಷೇಧಾಜ್ಞೆ ನಡುವಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ (AAP) ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರು ಆಪ್ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆಯುವ ವೇಳೆ ಮಾತನಾಡಿದ ಸೌರಭ್ ಭಾರದ್ವಾಜ್, ಪ್ರತಿಭಟನಾ ಸ್ಥಳದಲ್ಲಿ ಮಹಿಳಾ ಪ್ರತಿಭಟನಾಕಾರರೊಂದಿಗೆ ಪುರುಷ ಪೊಲೀಸ್ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ತಮ್ಮನ್ನೂ ಗಾಯಗೊಳಿಸಿದ್ದು, ತಮ್ಮನ್ನು ಪರಚಿದ್ದಾರೆ ಎಂದು ದೂರಿದ್ದಾರೆ.

ಸರ್ಕಾರದ ಸೂಚನೆಯ ಮೇರೆಗೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಸ್ಥಳದಲ್ಲಿನ ಪೊಲೀಸರ ವರ್ತನೆಯಲ್ಲೂ ಇದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಂತರ್ ಮಂತರ್‌ಗೆ ಆಗಮಿಸುವಂತೆ ಕರೆ ನೀಡಿದ ಅವರು, ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ವಶಕ್ಕೆ ಪಡೆಯುವ ಕೆಲವೇ ನಿಮಿಷಗಳ ಮೊದಲು ಎಎನ್‌ಐ ಜೊತೆ ಮಾತನಾಡಿದ ಭಾರದ್ವಾಜ್, ತಮ್ಮ ನಿವಾಸದ ಹೊರಗೆ ಪೊಲೀಸರು ನಿಯೋಜನೆಗೊಂಡಿದ್ದರು ಹಾಗೂ ಠಾಣಾಧಿಕಾರಿ ಇಡೀ ರಾತ್ರಿ ಅಲ್ಲೇ ಇದ್ದರು. ತಾವು ಮನೆಯಲ್ಲಿ ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರೂ ಸಿಬ್ಬಂದಿ ಮನೆಯ ಹೊರಗೆ ಮುಂದುವರಿದಿದ್ದರು ಎಂದು ಅವರು ಹೇಳಿದ್ದಾರೆ.

ಯುವಕರು ಹಾಗೂ ಜೆನ್‌-ಝಡ್‌ ಪೀಳಿಗೆಯನ್ನು ಉದ್ದೇಶಿಸಿ ಮಾತನಾಡಿದ ಭಾರದ್ವಾಜ್ ಅವರು, ತಾವು ಯಾವುದೇ ವಾಹನ ಬಳಸದೆ ಪ್ರತಿಭಟನಾ ಸ್ಥಳಕ್ಕೆ ಬಂದಿರುವುದಾಗಿ ಹೇಳಿದರು.

ಮೆಟ್ರೋ ಬಳಿಕ ಆಟೋದಲ್ಲಿ ಪ್ರಯಾಣಿಸಿದ್ದು, ಮೆಟ್ರೋಗೆ ರೂ.11 ಹಾಗೂ ಆಟೋಗೆ ರೂ.80 ಖರ್ಚಾಗಿದೆ. ಒಟ್ಟು ರೂ.91ರಲ್ಲಿ ಜಂತರ್ ಮಂತರ್‌ಗೆ ತಲುಪಿದ್ದೇನೆ, ಹಾಗಿದ್ದರೆ ಇತರರೂ ಪ್ರತಿಭಟನಾ ಸ್ಥಳಕ್ಕೆ ಬರಬಹುದು ಎಂದು ತಿಳಿಸಿದರು.

ಭಾರೀ ಪೊಲೀಸ್ ಬಂದೋಬಸ್ತ್ ಹಾಗೂ ಕೆಲವು ಮೆಟ್ರೋ ನಿಲ್ದಾಣಗಳನ್ನು ಮುಚ್ಚಿರುವ ಕುರಿತು ಮಾತನಾಡಿದ ಅವರು, ಜಂತರ್ ಮಂತರ್‌ಗೆ ಬರಲು ಇನ್ನೂ ಸಾಧ್ಯವಿದೆ ಎಂದು ಹೇಳಿದರು. ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಭಾರದ್ವಾಜ್ ಅವರು, ಪ್ರತಿಭಟನೆ ಶಾಂತಿಯುತವಾಗಿದ್ದರೂ ತಮ್ಮನ್ನು ಹಾಗೂ ಝಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.

ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದ ಅವರು, ಬೆಂಬಲಿಗರು ಜಂತರ್ ಮಂತರ್‌ಗೆ ಆಗಮಿಸಿ ಶಾಂತಿಯುತವಾಗಿ ಪ್ರತಿಭಟಿಸುವಂತೆ ಕರೆ ನೀಡಿದರು. ಈ ವಿಚಾರವನ್ನು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಹೋರಾಟ ಎಂದು ಭಾರದ್ವಾಜ್ ಬಣ್ಣಿಸಿದರು.

ಈಗ ಹೋರಾಡದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಅಪಾಯ ಎದುರಾಗಬಹುದು ಎಂದು ಅವರು ಹೇಳಿದರು. ಸಂವಿಧಾನಬದ್ಧ ಹಾಗೂ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ಮುಂದುವರಿಸುವಂತೆ ಅವರು ಕರೆ ನೀಡಿದರು.

ಜಂತರ್ ಮಂತರ್‌ನಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮುಂದುವರಿದಿರುವ ಸಂದರ್ಭದಲ್ಲೇ ಈ ವಶಕ್ಕೆ ಪಡೆಯುವ ಘಟನೆ ನಡೆದಿದೆ.

ದೆಹಲಿ ಪೊಲೀಸರು ಪ್ರದೇಶದ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಜಂತರ್ ಮಂತರ್ ರಸ್ತೆಯನ್ನು ಬಂದ್ ಮಾಡಿದ್ದಾರೆ. ಅಲ್ಲದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ಜಾರಿಗೊಳಿಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಜಂತರ್ ಮಂತರ್‌ನಲ್ಲೂ ಧರಣಿ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.