'ನ್ಯಾಯಯುತವಾಗಿದ್ದರೆ ಯಾವುದೇ ಮಸೂದೆಗೆ ನಮ್ಮ ವಿರೋಧವಿಲ್ಲ'; ಅಮಿತ್ ಶಾ ಭೇಟಿ ವಿವರ ಹಂಚಿಕೊಂಡ ಸುಪ್ರಿಯಾ ಸುಳೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷೇತ್ರ ಮರುವಿಂಗಡಣೆ ಮಸೂದೆ ಕುರಿತು ಪ್ರಮುಖ ಪ್ರತಿಪಕ್ಷಗಳೊಂದಿಗೆ ಸಮನ್ವಯ ಸಾಧಿಸುವ ಪ್ರಯತ್ನದ ಭಾಗವಾಗಿ 'ಪ್ರಾಯೋಗಿಕ ಸೂತ್ರ'ವೊಂದನ್ನು ಪ್ರಸ್ತಾಪಿಸಿದ್ದಾರೆ..

ಮುಂಬೈ: ನ್ಯಾಯಯುತವಾಗಿದ್ದರೆ ಯಾವುದೇ ಮಸೂದೆಗೆ ನಮ್ಮ ವಿರೋಧವಿಲ್ಲ ಎಂದು ಸಮಾಜವಾದಿ ಶರದ್ ಪವಾರ್ ಪಕ್ಷದ ಸುಪ್ರಿಯಾ ಸುಳೆ ಹೇಳಿದ್ದಾರೆ.
ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಸಭೆಯ ವಿವರಗಳನ್ನು ಎನ್ಸಿಪಿ (ಶರದ್ ಪವಾರ್ ಬಣ) ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಬಹಿರಂಗಪಡಿಸಿದ್ದು, ನ್ಯಾಯಯುತವಾಗಿದ್ದರೆ ಯಾವುದೇ ಮಸೂದೆಗೆ ತಮ್ಮ ಪಕ್ಷದ ವಿರೋಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷೇತ್ರ ಮರುವಿಂಗಡಣೆ ಮಸೂದೆ ಕುರಿತು ಪ್ರಮುಖ ಪ್ರತಿಪಕ್ಷಗಳೊಂದಿಗೆ ಸಮನ್ವಯ ಸಾಧಿಸುವ ಪ್ರಯತ್ನದ ಭಾಗವಾಗಿ 'ಪ್ರಾಯೋಗಿಕ ಸೂತ್ರ'ವೊಂದನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ಸುಪ್ರಿಯಾ ಸುಳೆ, 'ತಮ್ಮೊಂದಿಗೆ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಂಸದ ಹಾಗೂ ಲೋಕಸಭೆಯ ಗುಂಪಿನ ನಾಯಕ ಅರವಿಂದ್ ಸಾವಂತ್ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರನ್ನು ದೆಹಲಿಗೆ ಆಹ್ವಾನಿಸಲಾಗಿತ್ತು ಎಂದು ತಿಳಿಸಿದರು. ಸಭೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯ ಕುರಿತು ವಿವರಿಸಿದರು ಎಂದು ಹೇಳಿದರು.
ಸಭೆಯಲ್ಲಿ ಅಮಿತ್ ಶಾ ಅವರು, ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು, ಪ್ರತಿ ರಾಜ್ಯದ ಈಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾಪ ಮಾಡಿದ್ದಾರೆ ಎಂದು ಸುಪ್ರಿಯಾ ಸುಳೆ ತಿಳಿಸಿದರು.
ಅಮಿತ್ ಶಾ ಅವರು ಈಗಾಗಲೇ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ನಾಯಕರೊಂದಿಗೂ ಪ್ರತ್ಯೇಕ ಸಭೆ ನಡೆಸಿದ್ದು, ಆ ಸಭೆಗಳಲ್ಲಿ ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಸಭೆಯಲ್ಲಿ ತಿಳಿಸಿದ್ದರು ಎಂದು ಅವರು ಹೇಳಿದರು.
ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡಲ್ಲ
"ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವುದಕ್ಕೆ ನಾವು ವಿರೋಧಿಯಾಗಿದ್ದೇವೆ. ಹಾಗೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡುವ ಬಗ್ಗೆ ಅಂತಿಮ ನಿರ್ಧಾರವನ್ನು ಇಂಡಿಯಾ ಮೈತ್ರಿಕೂಟದ ಸದಸ್ಯರೊಂದಿಗೆ ಚರ್ಚಿಸಿದ ಬಳಿಕವೇ ತೆಗೆದುಕೊಳ್ಳುತ್ತೇವೆ.
ಅಲ್ಲದೆ, ಮಸೂದೆಯ ಲಿಖಿತ ಪ್ರತಿಯೂ ನಮಗೆ ಸಿಗಬೇಕು. ಅದರ ಬಳಿಕವೇ ಅಧಿಕೃತ ನಿಲುವು ಪ್ರಕಟಿಸಲು ಸಾಧ್ಯವಾಗುತ್ತದೆ. ನಾವು ನೀತಿ ರೂಪಿಸುವವರಾಗಿರುವುದರಿಂದ ಯಾವುದೇ ಮಸೂದೆಗೆ ವಿರೋಧಿಸುವುದಿಲ್ಲ. ಆದರೆ ಆ ನೀತಿಗಳು ನ್ಯಾಯಯುತವಾಗಿರಬೇಕು ಮತ್ತು ಎಲ್ಲರೂ ಒಪ್ಪುವಂತಿರಬೇಕು" ಎಂದು ಸುಪ್ರಿಯಾ ಸುಳೆ ಹೇಳಿದರು.
"ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ನಿಖರ ಸೂತ್ರ ಏನು ಎಂಬುದನ್ನು ಒಳಗೊಂಡ ಕ್ಷೇತ್ರ ಮರುವಿಂಗಡಣೆ ಮಸೂದೆಯ ಲಿಖಿತ ಪ್ರತಿಯನ್ನು ಪಡೆಯುವವರೆಗೂ ನಾವು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡುವುದಿಲ್ಲ. ಸಾರ್ವಜನಿಕರ ಹಿತಾಸಕ್ತಿಗೆ ಅನುಕೂಲಕರವಾಗಿರುವ ಯಾವುದೇ ನಿರ್ಧಾರಕ್ಕೆ ತಮ್ಮ ಪಕ್ಷ ವಿರೋಧಿಸುವುದಿಲ್ಲ ಎಂದು ಅವರು ಹೇಳಿದರು.
ಇದೇ ವೇಳೆ, ತಮ್ಮ ಪಕ್ಷದ ನಾಯಕ ಜಯಂತ್ ಪಾಟೀಲ್ ಅವರು ಎನ್ಸಿಪಿ ನಾಯಕರು ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟ್ಕರೆ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ನಿವಾಸ 'ವರ್ಷಾ' ಬಂಗಲೆಯಲ್ಲಿ ಭೇಟಿ ಮಾಡಿದ್ದರು ಎಂಬ ಸುದ್ದಿಯನ್ನು ಸುಪ್ರಿಯಾ ಸುಳೆ ತಳ್ಳಿಹಾಕಿದರು.
ಜಯಂತ್ ಪಾಟೀಲ್ ಅವರು ತಮ್ಮ ಕ್ಷೇತ್ರದ ಕೆಲಸದ ನಿಮಿತ್ತ ಮೊದಲೇ ನಿಗದಿಯಾಗಿದ್ದ ಸಭೆಗೆ ವರ್ಷಾ ಬಂಗಲೆಗೆ ಹೋಗಿದ್ದರು. ಅದಕ್ಕೂ ಎನ್ಸಿಪಿ ಬಣಗಳ ವಿಲೀನ ಅಥವಾ ಬಿಜೆಪಿ ನೇತೃತ್ವದ ಎನ್ಡಿಎ ಸೇರುವ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




