ದಸರಾ ಮುನ್ನ ದಿಢೀರ್ ಅಧಿವೇಶನಕ್ಕೆ ಸರ್ಕಾರ ತಯಾರಿ? ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆಗೆ ಕೇಂದ್ರದ ರಹಸ್ಯ ಪ್ಲಾನ್! ಖರ್ಗೆಗೆ ಸಚಿವ ರಿಜಿಜು ಕರೆ
ದಸರಾಗೂ ಮುನ್ನ ಸಂಸತ್ತಿನ ವಿಶೇಷ ಅಧಿವೇಶನ ನಡೆಸಿ, ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಮರು-ವಿಂಗಡಣೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಈ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ದಸರಾ ಹಬ್ಬಕ್ಕೂ ಮುನ್ನ ಸಂಸತ್ತಿನ ವಿಶೇಷ ಅಧಿವೇಶನ ನಡೆಸಿ, ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಮರು-ವಿಂಗಡಣೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿದ್ದು, ಈ ಸಂಬಂಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಕಳೆದ ಆಗಸ್ಟ್ 13 ರಂದು ಸಂಸತ್ತಿನ ಮುಂಗಾರು ಅಧಿವೇಶನವು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದರೂ, ರಾಷ್ಟ್ರಪತಿಗಳಿಂದ ಅಧಿಕೃತವಾಗಿ ಅಧಿವೇಶನ ಸಮಾಪ್ತಿ ಘೋಷಣೆಯಾಗಿಲ್ಲ. ಈ ಅಸಾಮಾನ್ಯ ವಿಳಂಬದ ಬೆನ್ನಲ್ಲೇ, ಬ್ರಿಕ್ಸ್ ಶೃಂಗಸಭೆ ಮುಗಿದ ಬಳಿಕ, ಶೀಘ್ರದಲ್ಲೇ ಸರ್ಕಾರವು ವಿಶೇಷ ಅಧಿವೇಶನ ನಡೆಸಲು ಮುಂದಾಗಿದೆ ಎನ್ನಲಾಗಿತು. ಅದರಂತೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಕಚೇರಿಯು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಸಂಪರ್ಕಿಸಿದೆ. ಅದರಲ್ಲೂ, 2026ರ ಅಕ್ಟೋಬರ್ 11 ರಂದು ನವರಾತ್ರಿ ಹಬ್ಬ ಆರಂಭವಾಗುವ ಮುನ್ನವೇ ಈ ಅಧಿವೇಶನವನ್ನು ನಡೆಸಲು ಸರ್ಕಾರ ಪ್ರಸ್ತಾಪಿಸಿದೆ ಎನ್ನಲಾಗಿದ್ದು, ಸದ್ಯಕ್ಕೆ ಖರ್ಗೆ ಅವರ ಕಚೇರಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ.
ವಿಶೇಷ ಅಧಿವೇಶನ ಯಾಕೆ?
ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಕಳೆದ ಆಗಸ್ಟ್ 13, 2026 ರಂದು ಮಳೆಗಾಲದ ಅಧಿವೇಶನದ ಮುಕ್ತಾಯದ ನಂತರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ, ಒಂದು ತಿಂಗಳು ಕಳೆದರೂ ರಾಷ್ಟ್ರಪತಿಗಳು ಈ ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿಲ್ಲ. ಜೊತೆಗೆ, ಭಾರತದ ಸಂಸದೀಯ ಇತಿಹಾಸದಲ್ಲೇ ಅಧಿವೇಶನ ಮುಂದೂಡಿಕೆ ಮತ್ತು ಅದರ ಸಂಪೂರ್ಣ ಮುಕ್ತಾಯದ ನಡುವೆ ಇಷ್ಟೊಂದು ದೀರ್ಘಾವಧಿಯ ವಿಳಂಬವಾಗಿರುವುದು ಇದೇ ಮೊದಲು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಬೆಟ್ಟು ಮಾಡಿದ್ದಾರೆ.
ಈ ಮೂಲಕ ಅಧಿವೇಶನವನ್ನು ತಾಂತ್ರಿಕವಾಗಿ ಮುಕ್ತಾಯಗೊಳಿಸದ ಕಾರಣ, ಸರ್ಕಾರವು ಹೊಸದಾಗಿ ಸಂಸತ್ತನ್ನು ಕರೆಯುವ ಅಗತ್ಯವಿಲ್ಲದೆ ಯಾವುದೇ ಕ್ಷಣದಲ್ಲೂ ಸಭೆಯನ್ನು ಪುನರಾರಂಭಿಸಬಹುದು. ಹಾಗಾಗಿ, ಸರಕಾರವು ಸಭಯನ್ನು ಪುನರ್ ಆರಂಭಿಸಿ, ಈ ವರ್ಷದ ಆರಂಭದಲ್ಲಿ ಅಂಗೀಕಾರವಾಗದ ಈ ಕ್ಷೇತ್ರ ಮರುವಿಂಗಡಣೆ ಮಸೂದೆ ಹಾಗೂ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಅಗತ್ಯವಿರುವ ಮರಡನೇ ಎರಡರಷ್ಟು (2/3rd) ಬಹುಮತವನ್ನು ಪಡೆದುಕೊಳ್ಳಲು ಸರ್ಕಾರ ಪ್ಲಾನ್ ಮಾಡಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



