ಬ್ರಿಕ್ಸ್ ಶೃಂಗಸಭೆ ಬೆನ್ನಲ್ಲೇ ಸಂಸತ್ತಿನ ವಿಶೇಷ ಅಧಿವೇಶನ? ನವರಾತ್ರಿಯಲ್ಲೇ ಮಹಿಳಾ ಮಸೂದೆಗೆ ಒಪ್ಪಿಗೆ ಸಾಧ್ಯತೆ; ಕ್ಷೇತ್ರ ಮರುವಿಂಗಡಣೆ ಅಂಗೀಕಾರಕ್ಕೂ ಮೋದಿ ಸರ್ಕಾರ ಸಿದ್ಧತೆ!
ಸರಕಾರ ಬ್ರಿಕ್ಸ್ ಶೃಂಗಸಭೆ ಮುಗಿದ ಬಳಿಕ, ಶೀಘ್ರದಲ್ಲೇ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸದ್ದಿಲ್ಲದೆ ಕಾರ್ಯತಂತ್ರ ರೂಪಿಸುತ್ತಿದ್ದು, ಈ ವೇಳೆ, ಮಹಿಳಾ ಮೀಸಲಾತಿ ಜಾರಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಪ್ರಮುಖ ಮಸೂದೆಗಳನ್ನು ಅಂಗೀಕರಿಸುವ ಸಾಧ್ಯತೆಯಿದೆ! ಆ ಕುರಿತ ಮಾಹಿತಿ ಇಲ್ಲಿದೆ:

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಭಾರತ್ ಮಂಟಪವು 18ನೇ ಬ್ರಿಕ್ಸ್ (BRICS) ಶೃಂಗಸಭೆಗಾಗಿ ರೆಡಿಯಾಗಿದೆ. ಇದರ ನಡುವೆಯೇ, ಕೇಂದ್ರ ಸರಕಾರ ಬ್ರಿಕ್ಸ್ ಶೃಂಗಸಭೆ ಮುಗಿದ ಬಳಿಕ, ಶೀಘ್ರದಲ್ಲೇ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸದ್ದಿಲ್ಲದೆ ಕಾರ್ಯತಂತ್ರ ರೂಪಿಸುತ್ತಿದ್ದು, ಈ ವೇಳೆ, ಮಹಿಳಾ ಮೀಸಲಾತಿ ಜಾರಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಪ್ರಮುಖ ಮಸೂದೆಗಳನ್ನು ಅಂಗೀಕರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ:
ವಿಶೇಷ ಅಧಿವೇಶನದ ಮುಖ್ಯ ಉದ್ದೇಶಗಳೇನು?
ಕೇಂದ್ರ ಸರ್ಕಾರವು ವಿಶೇಷ ಅಧಿವೇಶನದಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಸೀಟುಗಳನ್ನು ಮೀಸಲಿಡುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಹಾಗೂ ದೇಶದ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಗಡಿಯನ್ನು ಮರುನಿರ್ಧಾರ ಮಾಡುವ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸಲು ಈ ಅಧಿವೇಶನವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿಯೇ, ಕಳೆದ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನವನ್ನು ಸರ್ಕಾರ ಈವರೆಗೂ ಅಧಿಕೃತವಾಗಿ ಅನಿರ್ದಿಷ್ಟಾವಧಿ ಮುಂದೂಡಿಕೆ ಮಾಡಿಲ್ಲ ಎನ್ನಲಾಗಿದ್ದು, ಕೇವಲ ಕಲಾಪವನ್ನು ಮುಂದೂಡಲಾಗಿದೆ. ಇದರರ್ಥ, ರಾಷ್ಟ್ರಪತಿಗಳ ಹೊಸ ಆದೇಶವಿಲ್ಲದೆಯೂ ಸರ್ಕಾರ ಅಲ್ಪಾವಧಿಯ ನೋಟಿಸ್ ನೀಡಿ ಸಂಸದರನ್ನು ಮತ್ತೆ ಕರೆಯಬಹುದು.
ಯಾವಾಗ ವಿಶೇಷ ಅಧಿವೇಶನ?
ಒಂದು ವೇಳೆ ಸರ್ಕಾರ ವಿಶೇಷ ಅಧಿವೇಶನಕ್ಕೆ ದಿನಾಂಕ ನಿಗದಿಪಡಿಸಿದರೆ, ಅದು ಮುಂಬರುವ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಇರುವ ಸಾಧ್ಯತೆ ಇದೆ. ಈ ವೇಳೆಯೇ ಮಹಿಳಾ ಸಬಲೀಕರಣದ ಸಂಕೇತವಾಗಿ ನವರಾತ್ರಿಯಂದೇ ಮಹಿಳಾ ಮೀಸಲಾತಿ ಬಿಲ್ ಅಂಗೀಕರಿಸುವುದು ಸರ್ಕಾರದ ಲೆಕ್ಕಾಚಾರವಾಗಿದೆ. ಆದರೆ, ಪ್ರಸ್ತುತ ದೆಹಲಿಯ ಭಾರತ್ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾಗತಿಕ ನಾಯಕರ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದೆ. ಈ ಬೃಹತ್ ಜಾಗತಿಕ ಕಾರ್ಯಕ್ರಮ ಮುಗಿದ ತಕ್ಷಣವೇ ವಿಶೇಷ ಅಧಿವೇಶನ ಕರೆಯುವ ಕುರಿತು ಅಧಿಕೃತ ತೀರ್ಮಾನ ಹೊರಬೀಳಲಿದೆ ಎನ್ನಲಾಗಿದೆ. ಅಕಸ್ಮಾತ್, ಸರ್ಕಾರವು ವಿಶೇಷ ಅಧಿವೇಶನ ಕರೆಯದಿರಲು ತೀರ್ಮಾನಿಸಿದರೆ ಮಾತ್ರ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ರದ್ದುಗೊಳಿಸುವ ಸಾಧ್ಯತೆಯಿದೆ.
ಇರುವ ಸವಾಲುಗಳೇನು?
ಈ ಎರಡೂ ಮಸೂದೆಗಳು ದೇಶದ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರುವುದರಿಂದ ಇವುಗಳನ್ನು ಸಂವಿಧಾನ ತಿದ್ದುಪಡಿ ಮೂಲಕವೇ ತರಬೇಕಾಗುತ್ತದೆ. ಅದರಲ್ಲೂ, ಸಂವಿಧಾನ ತಿದ್ದುಪಡಿಗೆ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮೂರನೇ ಎರಡರಷ್ಟು (2/3rd) ಬಹುಮತ ಅಗತ್ಯವಿದೆ. ಇದಕ್ಕಾಗಿ ಸರ್ಕಾರವು ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಾತುಕತೆ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



