ಮದುವೆಯಾದ ಎರಡು ದಿನಕ್ಕೇ ಕುಟುಂಬಸ್ಥರಿಂದಲೇ ನವವಿವಾಹಿತೆ ಕಿಡ್ನಾಪ್; Video ವೈರಲ್
ಅಂತರ್ಜಾತಿ ವಿವಾಹವಾದ ಕೇವಲ ಎರಡು ದಿನಗಳಲ್ಲೇ ನವವಿವಾಹಿತೆಯನ್ನು ಪತಿಯ ಮನೆಯಿಂದ ಆಕೆಯ ಸಂಬಂಧಿಕರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಕೇಳಿಬಂದಿದೆ.

ಮೇದಕ್: ವಿವಾಹವಾದ ಎರಡು ದಿನಗಳಲ್ಲೇ ನವವಿವಾಹಿತೆ ತನ್ನದೇ ಕುಟುಂಬಸ್ಥರಿಂದಲೇ ಅಪಹರಣವಾಗಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.
ಹೌದು.. ಅಂತರ್ಜಾತಿ ವಿವಾಹವಾದ ಕೇವಲ ಎರಡು ದಿನಗಳಲ್ಲೇ ನವವಿವಾಹಿತೆಯನ್ನು ಪತಿಯ ಮನೆಯಿಂದ ಆಕೆಯ ಸಂಬಂಧಿಕರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಕೇಳಿಬಂದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಾಪನ್ನಪೇಟೆ ಮಂಡಲದ ಎಲ್ಲಾಪುರ ಗ್ರಾಮದ ನಿವಾಸಿ ಪ್ರಣಯ್ ಅವರು, ಕೌಡಿಪಲ್ಲಿ ಮಂಡಲದ ಸಲಾಬತ್‌ಪುರ ಗ್ರಾಮದ ಯುವತಿಯನ್ನು ಜುಲೈ 6ರಂದು ವಿವಾಹವಾಗಿದ್ದರು. ಇಬ್ಬರೂ ವಯಸ್ಕರಾಗಿದ್ದರೂ ಬೇರೆ ಬೇರೆ ಜಾತಿಗಳಿಗೆ ಸೇರಿದವರಾಗಿದ್ದ ಕಾರಣ, ವಧುವಿನ ಕುಟುಂಬದವರು ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ದಂಪತಿ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು.
ಎರಡೂ ಕುಟುಂಬಗಳಿಗೆ ಪೊಲೀಸರು ಸಮಾಲೋಚನೆ ನಡೆಸಿದ ಬಳಿಕ, ನವವಿವಾಹಿತ ದಂಪತಿಗೆ ಒಟ್ಟಿಗೆ ವಾಸಿಸಲು ಅನುಮತಿ ನೀಡಲಾಗಿತ್ತು. ಈ ವೇಳೆ ಯುವತಿ ತಾನು ಪತಿಯೊಂದಿಗೇ ಇರಲು ಬಯಸುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ಮನೆ ಬಳಿ ಯುವತಿ ಕುಟುಂಬಸ್ಥರಿಂದ ಗಲಾಟೆ
ಪ್ರಣಯ್ ಅವರ ತಾಯಿ ಶ್ಯಾಮಲಾ ಅವರ ಪ್ರಕಾರ, ಅಂತರ್ಜಾತಿ ವಿವಾಹದ ವಿಚಾರವಾಗಿ ವಧುವಿನ ಸಂಬಂಧಿಕರು ಮೊದಲಿಗೆ ವರನ ಮನೆಯ ಬಳಿ ಬಂದು ಗಲಾಟೆ ನಡೆಸಿದ್ದರು. ಅದಾದ ಎರಡು ದಿನಗಳ ಬಳಿಕ ನಾಲ್ಕು ಕಾರುಗಳಲ್ಲಿ ಎಲ್ಲಾಪುರದಲ್ಲಿರುವ ಪ್ರಣಯ್ ಅವರ ಮನೆಗೆ ಬಂದ ಸಂಬಂಧಿಕರು, ಮನೆಯ ಹೆಚ್ಚಿನ ಸದಸ್ಯರು ಹೊರಗಿದ್ದ ಸಂದರ್ಭವನ್ನು ಬಳಸಿಕೊಂಡು, ಯುವತಿಯನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ತಾವು ತಡೆಯಲು ಮುಂದಾದರೂ ಶ್ಯಾಮಲಾ ಅವರನ್ನು ತಳ್ಳಿಹಾಕಿ, ಅಲ್ಲಿದ್ದವರಿಗೆ ಬೆದರಿಕೆ ಹಾಕಿ, ಯುವತಿಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಪೂರ್ಣ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಪ್ರಣಯ್ ಅವರ ಕುಟುಂಬ ಪಾಪನ್ನಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಯುವತಿಯನ್ನು ಪತ್ತೆಹಚ್ಚಲು ಹಾಗೂ ಆಕೆಯ ಇಚ್ಛೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಕರೆದೊಯ್ಯಲಾಗಿದೆ ಎಂಬುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



