ದೇಶ

ಜಾಮೀನು ಪಡೆಯಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆ ನಟನೆ; ಸುಕೇಶ್ ಚಂದ್ರಶೇಖರ್ ಅಪರಾಧಿ ಎಂದ ನ್ಯಾಯಾಲಯ!

ಇದು ನ್ಯಾಯಾಂಗ ಪ್ರಕ್ರಿಯೆಯ ಸ್ವಾತಂತ್ರ್ಯ ಮತ್ತು ಪಾವಿತ್ರ್ಯತೆಗೆ ಮಾಡಿದ "ನೇರ ಅವಮಾನ" ಎಂದು ನ್ಯಾಯಾಲಯ ಹೇಳಿದೆ.

ಜಾಮೀನು ಪಡೆಯಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆ ನಟನೆ; ಸುಕೇಶ್ ಚಂದ್ರಶೇಖರ್ ಅಪರಾಧಿ ಎಂದ ನ್ಯಾಯಾಲಯ!
ಸುಕೇಶ್ ಚಂದ್ರಶೇಖರ್
Published On :

ನವದೆಹಲಿ: 2017ರ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜಾಮೀನು ಪಡೆಯುವ ಸಲುವಾಗಿ ವಿಶೇಷ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು, ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರಂತೆ ನಟಿಸಿದ ಆರೋಪದ ಮೇಲೆ ದೆಹಲಿ ನ್ಯಾಯಾಲಯವೊಂದು ವಂಚಕ ಸುಕೇಶ್ ಚಂದ್ರಶೇಖರ್‌ನನ್ನು ಅಪರಾಧಿ ಎಂದು ಘೋಷಿಸಿದೆ.

ಇದು ನ್ಯಾಯಾಂಗ ಪ್ರಕ್ರಿಯೆಯ ಸ್ವಾತಂತ್ರ್ಯ ಮತ್ತು ಪಾವಿತ್ರ್ಯತೆಗೆ ಮಾಡಿದ "ನೇರ ಅವಮಾನ" ಎಂದು ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಹರ್ಷಿತಾ ಮಿಶ್ರಾ ಅವರು, ಐಪಿಸಿ (IPC) ಸೆಕ್ಷನ್ 170 (ಸಾರ್ವಜನಿಕ ಸೇವಕರಂತೆ ನಟಿಸುವುದು), 189 (ಸಾರ್ವಜನಿಕ ಸೇವಕನಿಗೆ ಹಾನಿ ಮಾಡುವ ಬೆದರಿಕೆ) ಮತ್ತು 507 (ಅನಾಮಧೇಯ ಸಂವಹನದ ಮೂಲಕ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಚಂದ್ರಶೇಖರ್‌ನನ್ನು ಅಪರಾಧಿ ಎಂದು ತೀರ್ಮಾನಿಸಿದ್ದಾರೆ. ಶಿಕ್ಷೆಯ ಪ್ರಮಾಣ ಕುರಿತು ಆಗಸ್ಟ್ 27 ರಂದು ನ್ಯಾಯಾಲಯವು ಆತನ ವಾದವನ್ನು ಆಲಿಸಲಿದೆ.

ಕಾನೂನಿನ ಘನತೆಯು ವ್ಯಕ್ತಿಯೊಬ್ಬನ ಧ್ವನಿಯಲ್ಲಿ (ಅದು ದೂರವಾಣಿಯಲ್ಲಿ ಎಷ್ಟೇ ಅಧಿಕಾರಯುತವಾಗಿ ಕೇಳಿಸಿದರೂ) ಅಡಗಿರುವುದಿಲ್ಲ, ಬದಲಾಗಿ ಅದು ನ್ಯಾಯಾಂಗ ಪ್ರಕ್ರಿಯೆಯ ಸಮಗ್ರತೆಯಲ್ಲಿಯೇ ಅಡಗಿರುತ್ತದೆ ಎಂಬುದಕ್ಕೆ ಈ ಪ್ರಕರಣವು ಮುಂದಿನ ಪೀಳಿಗೆಗೆ ಒಂದು ನೆನಪಾಗಿ ಉಳಿಯುತ್ತದೆ ಎಂದು ಆಗಸ್ಟ್ 20 ರಂದು ಹೊರಡಿಸಿದ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿದ್ದಾಗ, ಏಪ್ರಿಲ್ 28, 2017 ರಂದು ಮಾಡಿದ ದೂರವಾಣಿ ಕರೆಯಿಂದ ಈ ಪ್ರಕರಣ ದಾಖಲಾಗಿತ್ತು.

ಆತ ಪೊಲೀಸ್ ಕಾನ್ಸ್‌ಟೇಬಲ್ ಮಂಜೀತ್ ಅವರ ಮೊಬೈಲ್ ಫೋನ್ ಅನ್ನು ಪಡೆದುಕೊಂಡು, ಭ್ರಷ್ಟಾಚಾರ ತಡೆ ಕಾಯ್ದೆ'ಯ ಪ್ರಕರಣಗಳನ್ನು ನಿರ್ವಹಿಸುತ್ತಿದ್ದ ಅಂದಿನ ವಿಶೇಷ ನ್ಯಾಯಾಧೀಶೆ ಪೂನಮ್ ಚೌಧರಿ ಅವರ ಅಧಿಕೃತ ಲ್ಯಾಂಡ್‌ಲೈನ್ ಮತ್ತು ಮೊಬೈಲ್ ಫೋನ್‌ಗೆ ಕರೆ ಮಾಡಲು ಅದನ್ನು ಬಳಸಿದ್ದನು ಎಂದು ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.