'ಎಲ್ಲರೂ ಕಾನೂನಿನ ಚೌಕಟ್ಟಿನಲ್ಲಿಯೇ ವರ್ತಿಸಬೇಕು': CJP ಪ್ರತಿಭಟನಾ ಮೆರವಣಿಗೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್!
ಪರೀಕ್ಷಾ ಅಕ್ರಮಗಳ ವಿರುದ್ಧದ ತಮ್ಮ 36 ದಿನಗಳ ಪ್ರತಿಭಟನೆ ಹಿಂಪಡೆಯಲು ಕಾರಣವಾಗಿದ್ದ ಜುಲೈ 25ರ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿರುವ ಸಿಜೆಪಿ ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.

ನವದೆಹಲಿ: ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಮೆರವಣಿಗೆಯನ್ನು ತಡೆಯುವ ಯಾವುದೇ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದ್ದು, ಸಂಘಟಕರು ಹಾಗೂ ಅಧಿಕಾರಿಗಳು ಶಾಂತಿಯುತವಾಗಿ ಮತ್ತು ಕಾನೂನಿಗೆ ಅನುಗುಣವಾಗಿ ವರ್ತಿಸುತ್ತಾರೆ ಎಂದು ತಾವು ನಿರೀಕ್ಷಿಸುವುದಾಗಿ ನ್ಯಾಯಾಲಯ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಲ್ಯಾ ಬಾಗ್ಚಿ ಮತ್ತು ವಿ ಮೋಹನಾ ಅವರಿದ್ದ ಪೀಠವು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ನಡೆದ ಪೊಲೀಸ್ ದೌರ್ಜನ್ಯದ ಆರೋಪಗಳನ್ನು ಪರಿಶೀಲಿಸಲು ನ್ಯಾಯಾಲಯ ರಚಿಸಿರುವ ಉನ್ನತ ಮಟ್ಟದ ತನಿಖಾ ಸಮಿತಿ ಮುಂದೆ ತಮ್ಮ ಆಕ್ಷೇಪಣೆಗಳನ್ನು ಮಂಡಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿತು.
'ಈ ವಿಷಯವನ್ನು ಬಾಕಿ ಇರುವ ಅರ್ಜಿಗಳೊಂದಿಗೆ ಪಟ್ಟಿಗೆ ಸೇರಿಸಲು ಮತ್ತು ಸೆಪ್ಟೆಂಬರ್ 10ರಂದು ಇದರ ವಿಚಾರಣೆ ನಡೆಯಲಿ' ಎಂದ ನ್ಯಾಯಾಲಯ, ಈ ಸಂಬಂಧ ನೋಟಿಸ್ ಜಾರಿ ಮಾಡಿತು.
ಆಯೋಜಕರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿರೀಕ್ಷೆಯಿದೆ. ಯಾವುದು ಅನುಮೋದಿತ ಮತ್ತು ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಪೊಲೀಸ್ ಹಾಗೂ ಇತರ ಜಾರಿ ಸಂಸ್ಥೆಗಳ ಮೇಲಿದೆ ಎಂದು ತಿಳಿಸಿತು.
'ಅವರು ಆ ಚೌಕಟ್ಟಿನೊಳಗೆಯೇ ಕಾರ್ಯನಿರ್ವಹಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಪರಸ್ಪರ ಗೌರವ ಕಾಪಾಡಿಕೊಳ್ಳುವುದು, ಸೂಕ್ತವಾಗಿ ವರ್ತಿಸುವುದು ಹಾಗೂ ದೇಶದ ಕಾನೂನನ್ನು ಪಾಲಿಸುವುದು - ಇವೆಲ್ಲವನ್ನೂ ನಾವು ಎರಡೂ ಕಡೆಯವರಿಂದ ನಿರೀಕ್ಷಿಸುತ್ತೇವೆ' ಎಂದು ನ್ಯಾಯಪೀಠ ಹೇಳಿದೆ.
ಪರೀಕ್ಷಾ ಅಕ್ರಮಗಳ ವಿರುದ್ಧದ ತಮ್ಮ 36 ದಿನಗಳ ಪ್ರತಿಭಟನೆಯನ್ನು ಹಿಂಪಡೆಯಲು ಕಾರಣವಾಗಿದ್ದ ಜುಲೈ 25ರ ಭರವಸೆಗಳನ್ನು ಕೇಂದ್ರ ಸರ್ಕಾರವು ಈಡೇರಿಸಿಲ್ಲ ಎಂದು ಆರೋಪಿಸಿರುವ ಸಿಜೆಪಿ (CJP), ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸುವುದಾಗಿ ಘೋಷಿಸಿದೆ.
ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಮೆರವಣಿಗೆ ನಡೆಸುವ ಯೋಜನೆಗಳನ್ನು ಸಿಜೆಪಿ ಘೋಷಿಸಿದ್ದರೂ, ಆ ಗುಂಪಿನಿಂದ ಯಾವುದೇ ಮನವಿ ಸ್ವೀಕರಿಸಿಲ್ಲ ಎಂದು ದೆಹಲಿ ಪೊಲೀಸರು ಈ ಹಿಂದೆ ತಿಳಿಸಿದ್ದರು.
ನಿವೃತ್ತ ದೆಹಲಿ ಪೊಲೀಸ್ ಅಧಿಕಾರಿ ರಾಜೇಂದ್ರ ಸಿಂಗ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂಡಿಯಾ ಗೇಟ್, ಸೆಂಟ್ರಲ್ ವಿಸ್ಟಾ ಮತ್ತು ಅವುಗಳ ಪಕ್ಕದ ಪ್ರದೇಶಗಳಂತಹ ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮವಾದ ವಲಯಗಳಲ್ಲಿ, ಪೂರ್ವಾನುಮತಿ ಪಡೆಯದೆ ಬೃಹತ್ ಪ್ರಮಾಣದ ಜನಸೇರುವಿಕೆ, ಮೆರವಣಿಗೆಗಳು ಅಥವಾ ಸಂಘಟಿತ ಪ್ರತಿಭಟನೆಗಳನ್ನು ನಡೆಸದಂತೆ ನಿರ್ದೇಶನ ನೀಡಬೇಕೆಂದು ಈ ಅರ್ಜಿಯಲ್ಲಿ ಕೋರಲಾಗಿತ್ತು.
ಶಿಕ್ಷಕರ ದಿನವಾದ ಸೆಪ್ಟೆಂಬರ್ 5ರಂದು ನಡೆಯಲಿರುವ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು, ನೀಟ್ ಪರೀಕ್ಷೆ ರದ್ದು ಮತ್ತು ನಂತರದ ಮರುಪರೀಕ್ಷೆಯ ಪರಿಣಾಮವಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳು ಹಾಗೂ ಜುಲೈ ತಿಂಗಳ ಪ್ರತಿಭಟನೆಗಳ ವೇಳೆ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ವಹಿಸುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


