ಅರುಣಾಚಲ ಪ್ರದೇಶ: ಭೂಕುಸಿತ, ಹಠಾತ್ ಪ್ರವಾಹಕ್ಕೆ 4 ಸಾವು; 5 ಯೋಧರು ನಾಪತ್ತೆ
ದಿಬಾಂಗ್ ವ್ಯಾಲಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹಕ್ಕೆ ಸೇನೆಯ ಎರಡು ಶೆಲ್ಟರ್‌ಗಳು ಕೊಚ್ಚಿಹೋದ ಪರಿಣಾಮ ಐವರು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಇಲ್ಲಿನ ಬಾಂಗ್ ವ್ಯಾಲಿ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಉಂಟಾಗಿ ಕನಿಷ್ಠ 4 ಮಂದಿ ಸಾವನ್ನಪ್ಪಿ, 5 ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ದಿಬಾಂಗ್ ವ್ಯಾಲಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹಕ್ಕೆ ಸೇನೆಯ ಎರಡು ಶೆಲ್ಟರ್‌ಗಳು ಕೊಚ್ಚಿಹೋದ ಪರಿಣಾಮ ಐವರು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇದೇ ವೇಳೆ, ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಸ್ಥಳದಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಎರಡೂ ಘಟನೆಗಳು ಶುಕ್ರವಾರ ಸಂಜೆ ಸಂಭವಿಸಿವೆ. ಅಪ್ಪರ್ ಸುಬನ್ಸಿರಿ ಜಿಲ್ಲೆಯ ಕಿಯೋಜರಿಂಗ್-ಬ್ಯಾಚಿಂಗ್ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದ ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದು, ಟಾಡು ಬಾಕಿ, ತಾಜಿ ರೈ, ಮಾರ್ಕೋಶ್ ಬಸೂಮತಾರಿ ಮತ್ತು ಬಾಬುಲ್ ಅಲಿ ಎಂಬ ನಾಲ್ವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಬಾಬುಲ್ ಅಲಿ ಅವರ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆಯಲಾಗಿದೆ ಎಂದು ಅಪ್ಪರ್ ಸುಬನ್ಸಿರಿ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ತಿಳಿಸಿದ್ದಾರೆ. ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆಗಾಗಿ ನಾಚೋ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಪೋರಿಜೋದಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯನ್ನೂ ಸ್ಥಳಕ್ಕೆ ಕಳುಹಿಸಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF)ಯ ತಂಡವೂ ಕಾರ್ಯಾಚರಣೆಗೆ ನೆರವಾಗಲಿದೆ.
ಇನ್ನು ದಿಬಾಂಗ್ ವ್ಯಾಲಿ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹವು ಪಾಸು ಪಾನಿ ಸೇನಾ ಶಿಬಿರದಲ್ಲಿದ್ದ 5ನೇ ಗ್ರೆನೇಡಿಯರ್ ಘಟಕದ ಎರಡು ಶೆಲ್ಟರ್‌ಗಳನ್ನು ಕೊಚ್ಚಿಕೊಂಡು ಹೋಗಿದೆ. ಪ್ರವಾಹದ ರಭಸಕ್ಕೆ ಏಳು ಸೇನಾ ಸಿಬ್ಬಂದಿ ಕೊಚ್ಚಿಹೋಗಿದ್ದು, ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಉಳಿದ ಐವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾಗಿರುವವರನ್ನು ಹವಾಲ್ದಾರ್ ಉಪೇಂದರ್ ಹಾಗೂ ಸೇನಾ ಸಿಬ್ಬಂದಿ ಕುಂದನ್, ವಿನೋದ್, ಆದಿತ್ಯ ಮತ್ತು ಸಮುಂದಾ ಎಂದು ಗುರುತಿಸಲಾಗಿದೆ. 5ನೇ ಗ್ರೆನೇಡಿಯರ್ ಘಟಕದ ಎರಡು ಶೋಧ ಮತ್ತು ರಕ್ಷಣಾ ತಂಡಗಳನ್ನು ಈಗಾಗಲೇ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ITBPಯ 58ನೇ ಬೆಟಾಲಿಯನ್, ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್‌ನ 62 RCC, ಸ್ಥಳೀಯ ಸ್ವಯಂಸೇವಕರು ಹಾಗೂ ಅರುಣಾಚಲ ಪ್ರದೇಶ ಪೊಲೀಸರು ಒಳಗೊಂಡ ತಂಡಗಳನ್ನು ಶೋಧ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಕಳುಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಪಾಸಿಘಾಟ್‌ನಿಂದ SDRF ತಂಡವೂ ಅನಿನಿ ಕಡೆಗೆ ತೆರಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



