ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ: ನವೆಂಬರ್ 12ಕ್ಕೆ ಮತದಾನ; ಡಿಸೆಂಬರ್ 8ಕ್ಕೆ ಮತಎಣಿಕೆ
ಚುನಾವಣಾ ಆಯೋಗ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಬಿಡುಗಡೆ ಬಿಡುಗಡೆ ಮಾಡಿದ್ದು, ನವೆಂಬರ್ 12ರಂದು ಮತದಾನ ನಡೆಯಲಿದೆ.

ನವದೆಹಲಿ: ಚುನಾವಣಾ ಆಯೋಗ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಬಿಡುಗಡೆ ಬಿಡುಗಡೆ ಮಾಡಿದ್ದು, ನವೆಂಬರ್ 12ರಂದು ಮತದಾನ ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದು, ನವೆಂಬರ್ 12ಕ್ಕೆ ಮತದಾನ ನಡೆಯಲಿದ್ದು, 68 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಹಿಮಾಚಲ ಸದನದ ಅವಧಿಯು ಜನವರಿ 8, 2023 ರಂದು ಕೊನೆಗೊಳ್ಳುತ್ತದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ನಾವು ಬದ್ಧರಾಗಿದ್ದೇವೆ. ಯಾವುದೇ ತೊಡಕಿಲ್ಲದೆ ಚುನಾವಣೆ ಆಯೋಜನೆಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಚುನಾವಣೆಯಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ನಾವು ಚುನಾವಣೆಗಳ ಮೂಲಕ ಮಹಿಳಾ ಸಬಲೀಕರಣವನ್ನು ತೋರಿಸಲು ಪ್ರಯತ್ನಿಸುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಅಂತೆಯೇ ರಾಜಕೀಯ ಪಕ್ಷಗಳು, ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಪೊಲೀಸ್ ಇಲಾಖೆ ಮತ್ತು ಪೊಲೀಸ್ ನೋಡಲ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಲ್ಲಿ 55 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಈ ಪೈಕಿ 1.86 ಲಕ್ಷ ಮತದಾರರು ಮೊದಲ ಬಾರಿಗೆ ಮತದಾನ ಮಾಡುತ್ತಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟ 1.22 ಲಕ್ಷ ಮತ್ತು 100 ವರ್ಷಕ್ಕಿಂತ ಮೇಲ್ಪಟ್ಟ 1,184 ಮತದಾರರಿದ್ದಾರೆ ಎಂದು ಆಯೋಗ ಹೇಳಿದೆ.
ಇನ್ನು ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕವನ್ನು ನಂತರ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ. ಗುಜರಾತ್ ಅಸೆಂಬ್ಲಿಯ ಅವಧಿಯು ಫೆಬ್ರವರಿ 18, 2023 ರಂದು ಕೊನೆಗೊಳ್ಳುತ್ತದೆ. 182 ಸ್ಥಾನಗಳ ಗುಜರಾತ್ ವಿಧಾನಸಭೆಯಲ್ಲಿ 111 ಬಿಜೆಪಿ ಮತ್ತು 62 ಕಾಂಗ್ರೆಸ್ ಶಾಸಕರಿದ್ದಾರೆ.
68 ಸದಸ್ಯರ ಹಿಮಾಚಲ ಪ್ರದೇಶ ವಿಧಾನಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಪಕ್ಷವನ್ನು ಸೋಲಿಸಿ 44 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು 2017 ರಲ್ಲಿ ಕಾಂಗ್ರೆಸ್ ಕೇವಲ 21 ಸ್ಥಾನಗಳನ್ನು ಗಳಿಸಿತ್ತು. ಪ್ರಸ್ತುತ, ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 45 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 22 ಮತ್ತು ಸಿಪಿಎಂ 1 ಶಾಸಕರನ್ನು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


