'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!
ಚುನಾವಣಾ ಆಯೋಗದ ಮೇಲೆ ಇಡೀ ದೇಶ ನಂಬಿಕೆ ಇಟ್ಟಿತ್ತು. ಆ ಸಂಸ್ಥೆಯ ಬಗ್ಗೆ ದೇಶ ಹೆಮ್ಮೆಪಡುತ್ತಿತ್ತು. ಅದರ ನಿಷ್ಪಕ್ಷಪಾತದ ಬಗ್ಗೆ ಹಿಂದೆಂದೂ ಪ್ರಶ್ನೆಗಳು ಎದ್ದಿರಲಿಲ್ಲ. ಆದರೆ, ಒಬ್ಬ ವ್ಯಕ್ತಿ ಆ ವಿಶ್ವಾಸವನ್ನು ಮುರಿದಿದ್ದಾರೆ.

ನವದೆಹಲಿ: ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಬಣದ ಸಂಸದರು ಮಂಗಳವಾರ ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಯತ್ತ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭಿಸಿದ್ದಾರೆ.
ಪಾದಯಾತ್ರೆಯ ಹಿನ್ನೆಲೆಯಲ್ಲಿ ಸಂಸತ್ ಭವನ ಹಾಗೂ ಚುನಾವಣಾ ಆಯೋಗದ ಕೇಂದ್ರ ಕಚೇರಿ ಇರುವ ಪ್ರದೇಶಗಳಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಸಂಸದರು ಆಗಮಿಸುವುದಕ್ಕೂ ಮುನ್ನವೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ರಾಜ್ಯಸಭೆ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಸಂಸದರು ಸಂಸತ್ತಿನ ಮಕರ ದ್ವಾರದಲ್ಲಿ ಜಮಾಯಿಸಿದ ಬಳಿಕ ಬೆಳಗ್ಗೆ 11 ಗಂಟೆಗೆ ಚುನಾವಣಾ ಆಯೋಗದ ಕಚೇರಿಯಾಗಿರುವ ನಿರ್ವಚನ ಸದನ್‌ನತ್ತ ಪಾದಯಾತ್ರೆ ಆರಂಭಿಸಿದರು.
ಪಾದಯಾತ್ರೆಗೂ ಮುನ್ನ ಪ್ರತಿಪಕ್ಷ ಸಂಸದರು ಭದ್ರತಾ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಎತ್ತಿದರು. ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಬಳಸುವ ಕಾನೂನುಬದ್ಧ ಅರ್ಜಿ ನಮೂನೆ ಫಾರ್ಮ್-6ರಲ್ಲಿ ಮಾಡಲಾದ ಬದಲಾವಣೆಗಳ ಕುರಿತು ಸುಪ್ರೀಂ ಕೋರ್ಟ್ ನೀಡಿದ ಅಭಿಪ್ರಾಯಗಳನ್ನು ಉಲ್ಲೇಖಿಸಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯವನ್ನು ಮತ್ತಷ್ಟು ತೀವ್ರಗೊಳಿಸಿದರು.
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು, ಜ್ಞಾನೇಶ್ ಕುಮಾರ್ ಚುನಾವಣಾ ಆಯೋಗದ ಮೇಲಿನ ಜನರ ವಿಶ್ವಾಸವನ್ನು ಕುಗ್ಗಿಸಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಆಯೋಗದ ಮೇಲೆ ಇಡೀ ದೇಶ ನಂಬಿಕೆ ಇಟ್ಟಿತ್ತು. ಆ ಸಂಸ್ಥೆಯ ಬಗ್ಗೆ ದೇಶ ಹೆಮ್ಮೆಪಡುತ್ತಿತ್ತು. ಅದರ ನಿಷ್ಪಕ್ಷಪಾತದ ಬಗ್ಗೆ ಹಿಂದೆಂದೂ ಪ್ರಶ್ನೆಗಳು ಎದ್ದಿರಲಿಲ್ಲ. ಆದರೆ, ಒಬ್ಬ ವ್ಯಕ್ತಿ ಆ ವಿಶ್ವಾಸವನ್ನು ಮುರಿದಿದ್ದಾರೆ ಎಂದು ತಿಳಿಸಿದರು.
ಒಂದು ಸಂಪೂರ್ಣ ಜಾಲ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಜ್ಞಾನೇಶ್ ಕುಮಾರ್ ಅವರನ್ನು ಪ್ರಶ್ನಿಸುತ್ತೇವೆ. ಬಿಜೆಪಿ ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಆಗ್ರಹಿಸಿದರು.
ಸಿಪಿಐ ಸಂಸದ ಪಿ. ಸಂತೋಷ್ ಕುಮಾರ್ ಮಾತನಾಡಿ, ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಫಾರ್ಮ್-6ಕ್ಕೆ ಸೇರಿಸಲಾಗಿರುವ ಹೆಚ್ಚುವರಿ ಘೋಷಣೆಯ ಕುರಿತು ಪ್ರತಿಪಕ್ಷಗಳು ಎತ್ತಿದ್ದ ಆಕ್ಷೇಪಗಳಿಗೆ ಸೋಮವಾರ ಸುಪ್ರೀಂ ಕೋರ್ಟ್ ನೀಡಿದ ಅಭಿಪ್ರಾಯಗಳು ಮತ್ತಷ್ಟು ಬಲ ನೀಡಿವೆ ಎಂದು ಹೇಳಿದರು.
ಸೆಪ್ಟೆಂಬರ್ 26ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಫಾರ್ಮ್-6ಗೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂದು ಹೇಳಲಾಗಿತ್ತು. ಆದರೆ, ಅದು ಸಂಪೂರ್ಣವಾಗಿ ದಾರಿ ತಪ್ಪಿಸುವ ಹೇಳಿಕೆ ಎಂಬುದು ಈಗ ಸಾಬೀತಾಗಿದೆ ಎಂದು ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತರನ್ನು “ಮೋಸಗಾರ ಚುನಾವಣಾ ಆಯುಕ್ತ” ಎಂದು ಕರೆದ ಸಿಪಿಐ ನಾಯಕ, 2025ರಿಂದಲೇ ಪ್ರತಿಪಕ್ಷಗಳು ಈ ನಿಯಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹೇಳಿದರು.
ಈ ನಡುವೆ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಮಾತನಾಡಿ, ಪಾದಯಾತ್ರೆ ಹಿನ್ನೆಲೆಯಲ್ಲಿ ಮಾಡಲಾಗಿದ್ದ ಭಾರಿ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸಿದರು. ಸಂಸದರು ಶಾಂತಿಯುತವಾಗಿ ಸಾಗಲು ಉದ್ದೇಶಿಸಿದ್ದಾರೆ ಎಂದು ಹೇಳಿದರು.
ನಾವು ಸಂಸದರು. ಸಂಸತ್ತಿನ ಸದಸ್ಯರು. ಈ ದೇಶದ ನಾಗರಿಕರೂ ಹೌದು. ನಮ್ಮನ್ನು ತಡೆಯಲು ಇಷ್ಟು ದೊಡ್ಡ ಪ್ರಮಾಣದ ಭದ್ರತಾ ಪಡೆ ಏಕೆ ಬೇಕು? ನಾವು ನಡೆದುಕೊಂಡೇ ಹೋಗುತ್ತೇವೆ. ನಮ್ಮ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ ಎಂದು ಹೇಳಿದರು.
ಗಡಿ ಭದ್ರತಾ ಪಡೆ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಚಿವರ ನಿವಾಸಗಳ ಸುತ್ತಲಿನ ಭದ್ರತೆಯನ್ನೂ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.
ಫಾರ್ಮ್-6 ಕುರಿತು ಸುಪ್ರೀಂ ಕೋರ್ಟ್‌ನ ನಿಲುವಿನ ಬಗ್ಗೆ ಜನರನ್ನು ತಪ್ಪುದಾರಿಗೆಳೆಯಲಾಗಿದೆ ಎಂದು ಜ್ಞಾನೇಶ್ ಕುಮಾರ್ ವಿರುದ್ಧ ಆರೋಪಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತರಿಗೆ ಹುದ್ದೆಯಲ್ಲಿ ಮುಂದುವರಿಯುವ “ನೈತಿಕ ಹಕ್ಕಿಲ್ಲ” ಎಂದು ಹೇಳಿದರು.
ಸೋಮವಾರ ಸುಪ್ರೀಂ ಕೋರ್ಟ್, ಫಾರ್ಮ್-6ರ ಯಾವುದೇ ಪರಿಷ್ಕೃತ ಮಾದರಿಗೆ ತಾನು ಅನುಮೋದನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಫಾರ್ಮ್‌ನಲ್ಲಿ ಬದಲಾವಣೆ ಮಾಡಲಾಗಿದೆಯೇ ಮತ್ತು ಅದಕ್ಕೆ ಅನುಮತಿ ನೀಡಿದವರು ಯಾರು ಎಂಬುದನ್ನು ತಿಳಿಯಲು ಚುನಾವಣಾ ಆಯೋಗದ ದಾಖಲೆಗಳನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿತ್ತು. ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿತ್ತು.
ಸೆಪ್ಟೆಂಬರ್ 26ರಂದು ಚುನಾವಣಾ ಆಯೋಗ ಹೊರಡಿಸಿದ್ದ ಹೇಳಿಕೆಯಲ್ಲಿ, ವಿಶೇಷ ತೀವ್ರ ಪರಿಷ್ಕರಣೆಗಾಗಿ ಫಾರ್ಮ್-6ಗೆ ಸೇರಿಸಲಾದ ಘೋಷಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಹೇಳಲಾಗಿತ್ತು. ಆದರೆ, ವಿಶೇಷ ತೀವ್ರ ಪರಿಷ್ಕರಣೆ ಅವಧಿಯ ಹೊರಗೆ 1960ರ ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿರುವ ನಮೂನೆಗಳನ್ನೇ ಬಳಸಲಾಗುತ್ತದೆ ಎಂದು ಆಯೋಗ ತಿಳಿಸಿತ್ತು.
ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಹಾಗೂ ಮೂವರು ಸದಸ್ಯರ ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ನಡುವೆ ಈ ಪಾದಯಾತ್ರೆ ನಡೆದಿದೆ.
ಆಯೋಗದಲ್ಲಿ ಒಡಕು ಉಂಟಾಗಿದೆ ಎಂಬ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿದ್ದು, ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



