ಮತಯಂತ್ರದ ಯಡವಟ್ಟು, ಯಾವುದೇ ಬಟನ್ ಒತ್ತಿದರೂ ಬಿಜೆಪಿಗೆ ಮತ?
ಮಧ್ಯ ಪ್ರದೇಶದಲ್ಲಿ ಮತಯಂತ್ರದ ಯಾವುದೇ ಬಟನ್ ಒತ್ತಿದರೂ ಬಿಜೆಪಿ ಮತ ಬೀಳುತ್ತಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಭೋಪಾಲ್: ವಿಶ್ವದಲ್ಲೇ ಭಾರತದ ಮತಯಂತ್ರಗಳು ತಿರುಚಲಾಗದ ಅತ್ಯಂತ ಸುರಕ್ಷಿತ ಮತ ಯಂತ್ರಗಳಾಗಿವೆ ಎಂದು ಈ ಹಿಂದೆ ಚುನಾವಣಾ ಆಯೋಗ ಹೇಳಿಕೊಂಡ ಬೆನ್ನಲ್ಲೇ ಇದಕ್ಕೆ ತದ್ವಿರುದ್ಧ ಸುದ್ದಿಯೊಂದು ಸುದ್ದಿಯಾಗುತ್ತಿದ್ದು, ಮಧ್ಯ ಪ್ರದೇಶದಲ್ಲಿ ಮತಯಂತ್ರದ ಯಾವುದೇ ಬಟನ್ ಒತ್ತಿದರೂ ಬಿಜೆಪಿ ಮತ ಬೀಳುತ್ತಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಧ್ಯಪ್ರದೇಶದ ಭಿಂಡ್‌ನಲ್ಲಿ ಶನಿವಾರ ವಿದ್ಯುನ್ಮಾನ ಮತಯಂತ್ರ ಮತ್ತು ಮತ ದೃಢೀಕರಣ ಯಂತ್ರದ ಪ್ರಾತ್ಯಕ್ಷಿಕೆ ವೇಳೆ ಯಾವುದೇ ಗುಂಡಿ ಒತ್ತಿದರೂ ಯಂತ್ರವು ಬಿಜೆಪಿಗೇ ಮತ ಬಿದ್ದಂತೆ ತೋರಿಸಿದೆ. ಬೇರೆ ಬೇರೆ ಗುಂಡಿ ಒತ್ತಿದಾಗಲೂ ವಿವಿಪ್ಯಾಟ್ ನಲ್ಲಿ ಮುದ್ರಣವಾಗುವ ಚೀಟಿಯಲ್ಲಿ ಕಮಲದ ಚಿಹ್ನೆಯೇ ಮೂಡಿಬಂದಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದಷ್ಟೇ ನಡೆದ ಉತ್ತರ ಪ್ರದೇಶ ಉತ್ತರಾಖಂಡ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವ ಸಾಧಿಸಿದ ಬಳಿಕ ಬಿಎಸ್ ಪಿ ಮುಖಂಡೆ ಮಾಯಾವತಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ರಾಜಕೀಯ ನಾಯಕರು ಇಂತಹುದೇ ಆರೋಪ ಮಾಡಿದ್ದರು.
ಆದರೆ ಇದೀಗ ಮಧ್ಯ ಪ್ರದೇಶದಲ್ಲಿ ಇಂತಹುದೇ ಘಟನೆ ವರದಿಯಾಗಿದ್ದು, ಆರೋಪದ ಹಿನ್ನೆಲೆಯಲ್ಲಿ ಈ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.
ಭಿಂಡ್‌ನಲ್ಲಿ ಮುಂದಿನ ವಾರ ವಿಧಾನಸಭೆ ಉಪಚುನಾವಣೆ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಶನಿವಾರ ಪತ್ರಕರ್ತರ ಮುಂದೆ ಇವಿಎಂ ಮತ್ತು ವಿವಿಪ್ಯಾಟ್ ಗಳ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಚುನಾವಣಾ ಅಧಿಕಾರಿ ಸಲೀನಾ ಸಿಂಗ್ ಅವರು ಇವಿಎಂನಲ್ಲಿ 4ನೇ ಸಂಖ್ಯೆಯ ಗುಂಡಿ ಒತ್ತಿದಾಗ, ವಿವಿಪ್ಯಾಟ್ ಯಂತ್ರದಲ್ಲಿ ಮಾತ್ರ ಸಮಾಜವಾದಿ ಪಕ್ಷದ ಬದಲು ಬಿಜೆಪಿಗೆ ಮತ ಬಿದ್ದಿದೆಯೆಂದು ತೋರಿಸಿತು. ಇದರಿಂದ ಗಲಿಬಿಲಿಗೊಂಡ ಅವರು, ಮತ್ತೊಂದು ಗುಂಡಿ ಒತ್ತಿದರು. ಆಗಲೂ ಕಮಲದ ಚಿಹ್ನೆಗೇ ಮತ ಎಂದು ಬಂತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪತ್ರಕರ್ತರಿಗೆ ಬೆದರಿಕೆ ಹಾಕಿದ ಚುನಾವಣಾ ಅಧಿಕಾರಿ
ಇನ್ನು ಮತ ಯಂತ್ರದಲ್ಲಿನ ದೋಷದ ಕುರಿತು ಸ್ಥಳೀಯ ಚುನಾವಣಾ ಅಧಿಕಾರಿ ಸಲೀನಾ ಸಿಂಗ್ ಅವರು, "ಈ ವಿಚಾರವನ್ನು ಪ್ರಸಾರ ಮಾಡಬೇಡಿ. ಮಾಡಿದರೆ, ನಿಮ್ಮನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಬೇಕಾಗುತ್ತದೆ,' ಎಂದು ಬೆದರಿಕೆ ಹಾಕಿದರು ಎಂದೂ ವರದಿಯಲ್ಲಿ ಆರೋಪಿಸಲಾಗಿದೆ. ಅಂತೆಯೇ ಈ ಕುರಿತ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಇದೀಗ ವೈರಲ್ ಆಗಿದೆ.
ಆರೋಪ ತಳ್ಳಿ ಹಾಕಿದ ಚುನಾವಣಾಧಿಕಾರಿ
ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಭೋಪಾಲ್‌ನಲ್ಲಿ ತುರ್ತು ಸುದ್ದಿಗೋಷ್ಠಿ ಕರೆದ ಚುನಾವಣಾ ಅಧಿಕಾರಿ ಸಲೀನಾ ಸಿಂಗ್, ಮತಯಂತ್ರದಲ್ಲಿ ಲೋಪವಿದೆ ಎಂಬ ಆರೋಪವನ್ನು ತಿರಸ್ಕರಿಸಿದ್ದಾರೆ. "ನಾನು ಮೊದಲು 4ನೇ ಗುಂಡಿ ಒತ್ತಿದಾಗ ಬಿಜೆಪಿಗೆ ಮತ ಎಂದು ಬಂತು. ನಂತರ ಒಂದನೇ ಗುಂಡಿ ಒತ್ತಿದಾಗ ಕಾಂಗ್ರೆಸ್ ಎಂದು ತೋರಿಸಿತು. ಇವಿಎಂನಲ್ಲಿ ಲೋಪವಿದೆ ಎನ್ನುವುದು ಸುಳ್ಳು' ಎಂದಿದ್ದಾರೆ. ಜತೆಗೆ, ಒಂದು ವೇಳೆ ಯಾರಾದರೂ ಮತ ಹಾಕಿದ ಬಳಿಕ ವಿವಿಪ್ಯಾಟ್ ಯಂತ್ರದಲ್ಲಿ ಸರಿಯಾದದ್ದನ್ನು ತೋರಿಸದೇ ಇದ್ದರೆ, ಅವರು ಅಧಿಕಾರಿಗಳಿಗೆ ದೂರು ನೀಡಬಹುದು. ನಂತರ ಅದನ್ನು ದೃಢಪಡಿಸಿಕೊಂಡು, ಆರೋಪ ನಿಜವೆಂದಾದರೆ ಮತದಾನ ಸ್ಥಗಿತಗೊಳಿಧಿಸಲಾಗುವುದು. ಆರೋಪ ಸುಳ್ಳಾಗಿದ್ದರೆ ಮತದಾರನ ವಿರುದ್ಧ ಕೇಸು ದಾಖಲಿಸಿ, 6 ತಿಂಗಳ ಜೈಲು ಶಿಕ್ಷೆ ಅಥವಾ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ತಾವು ಯಾವ ಪತ್ರಕರ್ತರಿಗೂ ಬೆದರಿಕೆ ಹಾಕಿಲ್ಲ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸಲೀನಾ ಸಿಂಗ್ ಸ್ಪಷ್ಟನೆ ನೀಡಿದರು.
ಏತನ್ಮಧ್ಯೆ ಮಾಧ್ಯಮಗಳಲ್ಲಿ ಇವಿಎಂ ಟ್ಯಾಂಪರಿಂಗ್ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಅತ್ತ ಚುನಾವಣಾ ಆಯೋಗದ ಕಚೇರಿಗೆ ಧಾವಿಸಿದ ಕಾಂಗ್ರೆಸ್ ಮತ್ತು ಆಪ್ ನಾಯಕರು, ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಭಿಂಡ್‌ನ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್ ಲೋಡ್ ಮಾಡಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, "ಉತ್ತರಪ್ರದೇಶದಲ್ಲಿ ಬಳಸಲಾದ ಯಂತ್ರಗಳ ಮ್ಯಾಜಿಕ್ ನೋಡಿ. ಚುನಾವಣಾ ಅಧಿಕಾರಿಯ ಮುಂದೆಯೇ ಯಾವ ಬಟನ್ ಒತ್ತಿದರೂ ಬಿಜೆಪಿಗೆ ವೋಟು ಬೀಳುತ್ತಿದೆ,' ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


