'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್
ಚೆನ್ನೈನಿಂದ ಕಿಲಂಬಾಕ್ಕಂ ಕಡೆಗೆ ತೆರಳುತ್ತಿದ್ದ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (MTC) ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಚೆನ್ನೈ: ಕುಡಿದ ಮತ್ತಿನಲ್ಲಿದ್ದಾಳೆ ಎನ್ನಲಾದ ಯುವತಿಯೊಬ್ಬಳು ಚಲಿಸುತ್ತಿದ್ದ ಸರ್ಕಾರಿ ಬಸ್‌ನಲ್ಲೇ ಪ್ರಯಾಣಿಕರೊಂದಿಗೆ ಜಗಳವಾಡಿ, ದೊಡ್ಡ ಹೈಡ್ರಾಮಾವನ್ನೇ ನಡೆಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನಿಂದ ಕಿಲಂಬಾಕ್ಕಂ ಕಡೆಗೆ ತೆರಳುತ್ತಿದ್ದ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (MTC) ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಬಸ್ ಹತ್ತಿದ ಮಹಿಳೆ ಟಿಕೆಟ್ ಕೂಡ ಪಡೆಯದೇ ಪ್ರಶ್ನಿಸಿದ ಕಂಡಕ್ಟರ್ ಮೇಲೆ ಕಿರುಚಾಡಿದ್ದಾಳೆ. ಅಲ್ಲದೆ
ಪುರುಷ ಪ್ರಯಾಣಿಕನಿಗೆ ಹಲ್ಲೆ ನಡೆಸಿ, ಮತ್ತೋರ್ವ ಮಹಿಳೆಯ ಕೂದಲು ಎಳೆದಿದ್ದಾರೆ.
ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ಸಂಬಂಧಿಸಿದಂತೆ ಭಾರೀ ಚರ್ಚೆ ನಡೆಯುತ್ತಿದೆ.
ಬಸ್‌ನ ಮುಂಭಾಗದಲ್ಲಿ ಕುಳಿತು ರಂಪಾಟ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಯುವತಿ ಬಸ್‌ನ ಮುಂಭಾಗದ ವಿಂಡ್‌ಶೀಲ್ಡ್ ಕೆಳಭಾಗದಲ್ಲಿರುವ ಡ್ಯಾಶ್‌ಬೋರ್ಡ್ ಮೇಲಿನ ಜಾಗದಲ್ಲಿ ಕುಳಿತಿರುವುದು ಕಂಡುಬಂದಿದೆ. ಈ ವೇಳೆ ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿದ ಯುವತಿ, "ನಾನು ಕ್ಯಾಬ್‌ನಲ್ಲಿ ಓಡಾಡುವ ಹುಡುಗಿ, ಬಸ್ ಯಾಕೆ ಬಳಸಲಿ?" ಎಂದು ಹೇಳಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ ಎನ್ನಲಾಗಿದೆ.
ಪ್ರಯಾಣಿಕರು ಆಕೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿ, ಆಕೆಯ ಮೊಬೈಲ್ ಸಂಖ್ಯೆ ಅಥವಾ ಆಕೆಯ ಪರಿಚಯಸ್ಥರ ಸಂಪರ್ಕ ವಿವರ ನೀಡುವಂತೆ ಕೇಳಿದ್ದಾರೆ. ಆದರೆ ಆಕೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾಳೆ ಎನ್ನಲಾಗಿದೆ. ಮತ್ತೊಬ್ಬ ಪ್ರಯಾಣಿಕ ಆಕೆಯ ವರ್ತನೆ ಸರಿಯೇ ಎಂದು ಪ್ರಶ್ನಿಸಿದಾಗ, ಆಕೆ ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಈ ವೇಳೆ ವ್ಯಕ್ತಿಯೊಬ್ಬರು ಯುವತಿ ಮದ್ಯದ ಅಮಲಿನಲ್ಲಿರುವಂತೆ ಕಾಣುತ್ತಿದ್ದಾರೆ ಎಂದು ಆರೋಪಿಸಿದ್ದು, ಪ್ರಯಾಣದ ಟಿಕೆಟ್ ಪಡೆಯಲೂ ಆಕೆ ನಿರಾಕರಿಸಿದ್ದಳು ಎಂದು ಹೇಳಿದ್ದಾರೆ.
ಪುರುಷ ಪ್ರಯಾಣಿಕನಿಗೆ ಹೊಡೆದು, ಮಹಿಳೆಯ ಕೂದಲು ಎಳೆದು ರಂಪಾಟ!
ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಓರ್ವ ಪುರುಷ ಪ್ರಯಾಣಿಕ ಯುವತಿಯೊಂದಿಗೆ ಮಾತನಾಡಲು ಮುಂದಾದಾಗ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಯುವತಿ ಆತನ ತಲೆಗೆ ಹೊಡೆದಿದ್ದಾಳೆ ಎಂದು ಆರೋಪಿಸಲಾಗಿದೆ. ಇದರಿಂದ ಇತರ ಪ್ರಯಾಣಿಕರು ಆಕೆಯ ಸುತ್ತಲೂ ಸೇರಿ ಆಕೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ.
ಈ ವೇಳೆ ಸೀರೆ ಧರಿಸಿದ್ದ ಮತ್ತೊಬ್ಬ ಮಹಿಳೆ ಯುವತಿಯ ವರ್ತನೆಯನ್ನು ಪ್ರಶ್ನಿಸಿದ್ದು, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ತಾರಕಕ್ಕೇರಿದಾಗ ಯುವತಿ ಆ ಮಹಿಳೆಯ ಕೂದಲು ಹಿಡಿದು ಎಳೆದಿದ್ದಾಳೆ ಎನ್ನಲಾಗಿದೆ. ಇದರಿಂದ ಚಲಿಸುತ್ತಿದ್ದ ಬಸ್‌ನೊಳಗೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಬಸ್ ನಿಲ್ಲಿಸಿ ಮಹಿಳೆಯನ್ನು ಕೆಳಗಿಳಿಸಿದ ಚಾಲಕ-ನಿರ್ವಾಹಕ
ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರು ವಾಹನವನ್ನು ನಿಲ್ಲಿಸಿ, ಯುವತಿಯನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಯುವತಿಯ ವರ್ತನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಮಹಿಳೆಯ ಗುರುತಿಗಾಗಿ ಪೊಲೀಸರ ಹುಡುಕಾಟ
ಘಟನೆಗೆ ಸಂಬಂಧಿಸಿದಂತೆ ಕುಮಾರನ್ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಸ್‌ನಲ್ಲಿದ್ದ ಮಹಿಳೆ ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದರ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೊ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುವ ಸಾಧ್ಯತೆಯಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ MTC ಸಿಬ್ಬಂದಿಯಿಂದ ಹೇಳಿಕೆಗಳನ್ನು ಪಡೆಯಲಿದ್ದಾರೆ. ಯುವತಿಯ ಗುರುತು ಹಾಗೂ ಘಟನೆಯ ಸಂಪೂರ್ಣ ವಿವರ ತನಿಖೆಯಿಂದ ಹೊರಬರಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




