ಭಾರತೀಯ ನೌಕಾಪಡೆಗೆ ಹೊಸ ಶಕ್ತಿ: ರಷ್ಯಾದ ಅತ್ಯಾಧುನಿಕ ಜಲಂತರ್ಗಾಮಿ ಶೋಧಕ ಕಾಪ್ಟರ್ ಖರೀದಿಗೆ ಅನುಮೋದನೆ
ಶತ್ರು ಪಾಳಯದ ಜಲಾಂತರ್ಗಾಮಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ಸೇನೆ ಮಹತ್ವದ ಹೆಜ್ಜೆ ಇರಿಸಿದ್ದು, ಜಲಾಂತರ್ಗಾಮಿಗಳ ಮೇಲೆ ನಿಗಾ ಇಡಬಲ್ಲ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ನವದೆಹಲಿ: ಯೋಧರ ಕಣ್ತಪ್ಪಿಸಿ ದೇಶದ ಕಡಲ ಗಡಿಭಾಗವನ್ನು ಅಕ್ರಮವಾಗಿ ಪ್ರವೇಶಿಸುವ ಶತ್ರು ಪಾಳಯದ ಜಲಾಂತರ್ಗಾಮಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ಸೇನೆ ಮಹತ್ವದ ಹೆಜ್ಜೆ ಇರಿಸಿದ್ದು, ಜಲಾಂತರ್ಗಾಮಿಗಳ ಮೇಲೆ ನಿಗಾ ಇಡಬಲ್ಲ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಭಾರತೀಯ ನೌಕಾಪಡೆಯ 8 ವರ್ಷಗಳ ಕನಸು ನನಸಾಗುತ್ತಿದ್ದು, ಭಾರತದ ಸಮುದ್ರಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸುವ ಶತ್ರುಪಾಳಯದ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚುವ ಅತ್ಯಾಧುನಿಕ ಹೆಲಿಕಾಪ್ಟರ್ ಗಳ ಖರೀದಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೇತೃತ್ವದ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ. ಈ ಬಗ್ಗೆ ಶನಿವಾರ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ರಷ್ಯಾ ನಿರ್ಮಿತ 10 ಜಲಾಂತರ್ಗಾಮಿ ಶೋಧಕ ಕಮೋವ್-28 (Kamov-28) ಹೆಲಿಕಾಪ್ಟರ್ ಗಳನ್ನು ನೌಕಾಪಡೆಗಾಗಿ ಖರೀದಿಸಲು ತೀರ್ಮಾನಿಸಲಾಗಿದೆ.
8 ವರ್ಷಗಳ ಹಿಂದಿಯೇ ಜಲಾಂತರ್ಗಾಮಿ ಶೋಧಕ ಹೆಲಿಕಾಪ್ಟರ್ ಖರೀದಿ ಪ್ರಸ್ತಾವನೆಯನ್ನು ನೌಕಾಪಡೆ ಕೇಂದ್ರ ಸರ್ಕಾರದ ಮುಂದಿಟ್ಟಿತ್ತಾದರೂ ವಿವಿಧ ಕಾರಣಗಳಿಂದಾಗಿ ಈ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಇದೀಗ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಈ ಮಹತ್ವದ ನಿರ್ಣಯ ಕೈಗೊಂಡಿದ್ದು, ರಷ್ಯಾ ಮೂಲದ ರೊಸೊಬೊರ್ನ್ ಎಕ್ಸ್ ಪರ್ಟ್ ಸಂಸ್ಥೆ ನಡುವೆ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಈ ಒಪ್ಪಂದದನ್ವಯ ಸುಮಾರು 2 ಸಾವಿರ ಕೋಟಿ ರು. ಮೌಲ್ಯದ 10 ಹೆಲಿಕಾಪ್ಟರ್‌ಗಳು ಮುಂದಿನ ಐದು ವರ್ಷದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ. ಅಂತೆಯೇ ಯುರೋಪಿಯನ್ ವಿವಿಧ ಸಂಸ್ಥೆಗಳಿಂದ ಸೆನ್ಸಾರ್ ಹಾಗೂ ಕಾಪ್ಟರ್ ನ ಬಿಡಿ ಉಪಕರಣಗಳನ್ನು ಬಳಸಿ ರಷ್ಯಾದ ಕುಮೆರ್‌ತವು ಘಟಕದಲ್ಲಿ ಜೋಡಿಸಲಾಗುತ್ತದೆ. ಹೆಲಿಕಾಪ್ಟರ್ ನ ಜೀವಿತಾವಧಿ ಹಾಗೂ ದಕ್ಷತೆ ಪರಿಶೀಲಿಸಿ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ನೌಕಾಕೇಂದ್ರಕ್ಕೆ ರವಾನಿಸಲಾಗುತ್ತದೆ ಎಂದು ಸೇನಾಮೂಲಗಳು ತಿಳಿಸಿವೆ.
ಚೀನಾಗೆ ಶುರುವಾಯ್ತು ತಲೆನೋವು

ಈ ಹಿಂದೆ ಅತ್ಯಾಧುನಿಕ ಜಲಾಂತರ್ಗಾಮಿ ಹೊಂದಿರುವ ಚೀನಾದ ಡ್ರ್ಯಾಗನ್ ಸೇನೆ ಭಾರತದ ನೌಕಾಪಡೆಯ ಕಣ್ಣುತಪ್ಪಿಸಿ ಭಾರತದ ಜಲಮಾರ್ಗದ ಮೂಲಕ ತನ್ನ ಜಲಾಂತರ್ಗಾಮಿ ನೌಕೆಗಳನ್ನು ರವಾನಿಸುತ್ತಿತ್ತು. ಈ ಹಿಂದೆ ಶ್ರೀಲಂಕಾದ ಕರಾವಳಿ ತೀರದಲ್ಲಿ ಚೀನಾ ಸೇನೆ ಲಂಗರು ಹಾಕಿಸಿದ್ದ 7 ಜಲಾಂತರ್ಗಾಮಿಗಳು ಕೂಡ ಭಾರತದ ಜಲ ಮಾರ್ಗವಾಗಿಯೇ ಶ್ರೀಲಂಕಾ ತಲುಪಿದ್ದವು ಎಂದೂ ಕೂಡ ಸುದ್ದಿಗಳು ಹಬ್ಬಿದ್ದವು. ಇದೀಗ ಜಲಾಂತರ್ಗಾಮಿ ಶೋಧಕ ಹೆಲಿಕಾಪ್ಟರ್ ಖರೀದಿ ಮಾಡುವ ಭಾರತದ ಕ್ರಮದಿಂದಾಗಿ ಚೀನಾ ನೌಕಾಪಡೆಗೆ ತೀವ್ರ ಹಿನ್ನಡೆಯಾದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


