ನಾಪತ್ತೆಯಾದ ಕೇರಳ ಯುವಕರು "ಇಸಿಸ್" ಸೇರ್ಪಡೆ ಶಂಕೆ..!
ಕೇರಳದಲ್ಲಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿರುವ ಸುಮಾರು 15 ಮಂದಿ ಯುವಕರು ಉಗ್ರಗಾಮಿ ಸಂಘಟನೆ ಇಸಿಸ್ ಸೇರಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಘಟನೆ ಕುರಿತಂತೆ ಕೇರಳ ಸರ್ಕಾರ ತುರ್ತು ತನಿಖೆಗೆ ಆದೇಶ ಹೊರಡಿಸಿದೆ...

ತಿರುವನಂತಪುರ: ಕೇರಳದಲ್ಲಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿರುವ ಸುಮಾರು 15 ಮಂದಿ ಯುವಕರು ಉಗ್ರಗಾಮಿ ಸಂಘಟನೆ ಇಸಿಸ್ ಸೇರಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಘಟನೆ ಕುರಿತಂತೆ ಕೇರಳ ಸರ್ಕಾರ ತುರ್ತು ತನಿಖೆಗೆ ಆದೇಶ ಹೊರಡಿಸಿದೆ.
ಕೇರಳದ ಕಾಸರಗೋಡು, ಪಾಲಕ್ಕಾಡ್ ಜಿಲ್ಲೆಗಳಿಂದ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದ 15 ಮಂದಿ ಯುವಕರು, ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಈ ಪೈಕಿ ಇಬ್ಬರು ಪುಟ್ಟ ಮಕ್ಕಳಿರುವ ದಂಪತಿ ಕೂಡ ಸೇರಿದ್ದು, ಉದ್ಯೋಗಕ್ಕಾಗಿ ಅಬ್ದುಲ್ ರಷೀದ್ ಎಂಬಾತ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮುಂಬೈ ಹೋಗಿದ್ದರಂತೆ. ಆದರೆ ಬಳಿಕ ಅಬ್ದುಲ್ ರಷೀದ್ ಸುಳಿವೇ ಇಲ್ಲ. ಹೀಗಾಗಿ ಎಲ್ಲರೂ ಇಸಿಸ್ ಉಗ್ರ ಸಂಘಟನೆ ಸೇರಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ವತಃ ನಾಪತ್ತೆಯಾದ ಯುವಕರ ಕುಟುಂಬಸ್ಥರೇ ಶಂಕೆ ವ್ಯಕ್ತಪಡಿಸುತ್ತಿದ್ದು, ಇತ್ತೀಚೆಗೆ ಪೋಷಕರಿಗೆ ನಾಪತ್ತೆಯಾದ ಯುವಕರು ಕಳುಹಿಸಿದ್ದ ಕೆಲ ಮೆಸೇಜ್ ಗಳು ಮತ್ತು ವಿಡಿಯೋ ತುಣುಕು ಇಂತಹ ಶಂಕೆಗೆ ಕಾರಣವಾಗಿದೆ.
ಈ ಬಗ್ಗೆ ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಗಂಭೀರವಾಗಿದ್ದು, ಘಟನೆ ಕುರಿತಂತೆ ತುರ್ತು ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕಾಸರಗೋಡು ಜಿಲ್ಲೆಯ ಪಂಚಾಯತ್ ಸದಸ್ಯ ವಿಪಿಪಿ ಮುಸ್ತಾಫಾ ಅವರು, ನಾಪತ್ತೆಯಾದ ಫೋಷಕರಿಗೆ ಯುವಕರು ವಾಟ್ಸಪ್ ಮೆಸೇಜ್ ಮಾಡಿದ್ದಾರೆ. ಈ ಮೆಸೇಜ್ ನಲ್ಲಿ "ನಾವು ಭಾರತಕ್ಕೆ ವಾಪಸಾಗುವುದಿಲ್ಲ. ಇಲ್ಲಿ ಅತ್ಯುನ್ನತವಾದ ಆಡಳಿತವಿದೆ. ನೀವು ಕೂಡ ಇಲ್ಲಿಗೇ ಸೇರಬೇಕು" ಎಂದು ಬರೆದಿದ್ದಾರೆ.
ಮತ್ತೊಂದು ಮಸೇಜ್ ನಲ್ಲಿ "ನಾವು ಇಸಿಸ್ ಸೇರಿದ್ದು, ಅಮೆರಿಕ ವಿರುದ್ಧ ಹೋರಾಡುತ್ತೇವೆ" ಎಂದು ಬರೆಯಲಾಗಿದೆ. ನಾಪತ್ತೆಯಾದ ಯುವಕರೆಲ್ಲರೂ ಉನ್ನತ ವ್ಯಾಸಂಗ ಮಾಡಿಕೊಂಡಿದ್ದು, ಇಸ್ಲಾಂ ಕುರಿತು ಉನ್ನತ ವ್ಯಾಸಂಗಕ್ಕಾಗಿ ಮಧ್ಯ ಪ್ರಾಚ್ಯಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ. ಇಂತಹುದೇ ಮತ್ತೊಂದು ವಿಡಿಯೋ ಮೆಸೇಜ್ ವೊಂದು ಲಭಿಸಿದ್ದು, ಈ ವಿಡಿಯೋ ತುಣುಕಿನಲ್ಲಿ ವೈದ್ಯ ಪುತ್ರನೊಬ್ಬ "ನಾವು ಇಸ್ಲಾಮಿಕ್ ಸ್ಟೇಟ್ ತಲುಪಿದ್ದೇವೆ. ಇನ್ನೇನಿದ್ದರೂ ಸಾವು-ಬದುಕಿನ ಹೋರಾಟ" ಎಂದು ಹೇಳಿಕೊಂಡಿದ್ದಾನೆ.
ಈ ಎಲ್ಲ ಅಂಶಗಳು ಯುವಕರು ಇಸಿಸ್ ಉಗ್ರಗಾಮಿ ಸಂಘಟನೆ ಸೇರಿರುವ ಕುರಿತು ಅನುಮಾನ ವ್ಯಕ್ತವಾಗುವಂತೆ ಮಾಡಿದ್ದು, ಕೇರಳ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಕೇರಳ ಗುಪ್ತಚರ ಇಲಾಖೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಸಂಬಂಧ ಈಗಲೇ ಯಾವುದೇ ನಿರ್ಧಾರಕ್ಕೂ ಬರಲು ಸಾಧ್ಯವಿಲ್ಲ. ಆದರೂ ಪ್ರಕರಣದ ಕೂಲಂಕುಷ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದೆ.
ಇನ್ನು ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ನಾಪತ್ತೆಯಾದ ಯುವಕನೋರ್ವನ ತಂದೆ ಹಕೀಮ್ ಎನ್ನುವವರು "ಆತ ಓರ್ವ ಒಳ್ಳೆಯ ವ್ಯಕ್ತಿಯಾಗಿ ಮನೆಗೆ ಬಂದರೆ ಆತನಿಗೆ ಸ್ವಾಗತವಿದೆ. ಇಲ್ಲವೆಂದರೆ ಆತನ ಹೆಣವನ್ನು ನೋಡಲು ಕೂಡ ನಾವು ಬಯಸುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


