ಜನ್'ಧನ್ ಖಾತೆ ಹಣ ಜಮಾವಣೆ ಕುರಿತ ಮೋದಿ ಹೇಳಿಕೆ ಆಘಾತ, ನಾಚಿಕೆಗೇಡು: ರಂದೀಪ್ ಸುರ್ಜೇವಾಲಾ
ಜನ್'ಧನ್ ಖಾತೆಗೆ ಬೇರೆಯವರು ಹಾಕಿರುವ ಹಣ ಬಡವರದ್ದೇ ಆಗಿದ್ದು, ಆ ಹಣವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಬೇಡಿ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆ ಅತ್ಯಂತ ಆಘಾತ ಮತ್ತು ನಾಚಿಕೆಗೇಡಿತನದ ಹೇಳಿಕೆಯಾಗಿದೆ...

ನವದೆಹಲಿ: ಜನ್'ಧನ್ ಖಾತೆಗೆ ಬೇರೆಯವರು ಹಾಕಿರುವ ಹಣ ಬಡವರದ್ದೇ ಆಗಿದ್ದು, ಆ ಹಣವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಬೇಡಿ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆ ಅತ್ಯಂತ ಆಘಾತ ಮತ್ತು ನಾಚಿಕೆಗೇಡಿತನದ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಜನ್'ಧನ್ ಖಾತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಕಪ್ಪುಹಣವನ್ನು ಬಳಕೆ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಪ್ರಧಾನಮಂತ್ರಿಗಳ ಈ ಹೇಳಿಕೆ ನಿಜಕ್ಕೂ ಆಘಾತವನ್ನುಂಟು ಮಾಡಿದ್ದು, ಇದೊಂದು ನಾಚಿಕೆಗೇಡಿತನದ ಹೇಳಿಕೆಯಾಗಿದೆ. ಮೋದಿಯವರು ಕ್ರಿಮಿನಲ್ ಗಳನ್ನು ಪ್ರೋತ್ಸಾಹಿಸುತ್ತಿದ್ದು, ಪ್ರಾಮಾಣಿಕ ಭಾರತೀಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.
ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ಕೇವಲ 25 ದಿನಗಳಲ್ಲಿ ಜನ್'ಧನ್ ಖಾತೆಗಳಿಗೆ 75000 ಕೋಟಿ ಹಣ ಜಮಾವಣೆಯಾಗಿದೆ. ಈಗಲೂ ಶೇ.25 ರಷ್ಟು ಖಾತೆಗಳಲ್ಲಿ ರು.5 ಕ್ಕಿಂತ ಕಡಿಮೆ ಇದೆ. ಕಪ್ಪುಹಣವನ್ನು ಬಿಳಿಹಣವಾಗಿ ಪರಿವರ್ತಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನಮ್ಮ ಪ್ರಧಾನಿ ಕ್ರಿಮಿನಲ್ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
130ಕೋಟಿ ಭಾರತೀಯರು ತಮ್ಮ ಖಾತೆಗಳಿಗೆ ಯಾವಾಗ ರು.15 ಲಕ್ಷ ಹಣ ಜಮಾವಣೆಯಾಗುತ್ತದೆ ಎಂದು ಕಾದುಕುಳಿತಿದ್ದಾರೆ. ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರುವಲ್ಲಿ ವಿಫಲವಾಗಿದ್ದು, ಇದನ್ನು ಮರೆಮಾಚಲು ಯತ್ನಗಳನ್ನು ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.
ಉತ್ತರಪ್ರದೇಶ ವಿಧಾನ ಸಭೆ ಚುನಾವವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಪರಿವರ್ತನಾ ರ್ಯಾಲಿಯಲ್ಲಿ ನಿನ್ನೆ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರು.500 ಹಾಗೂ 1,000 ಮುಖಬೆಲೆಯ ನೋಟುಗಳ ರೂಪದಲ್ಲಿದ್ದ ಕಪ್ಪುಹಣವನ್ನು ರಕ್ಷಿಸಿಕೊಳ್ಳಲು ಬಡವರ ಜನ್'ಧನ್ ಖಾತೆಗಳಿಗೆ ಜಮೆ ಮಾಡಿರುವ ಕಾಳಧನಿಕರಿಗೆ ದೊಡ್ಡದೊಂದು ಶಾಕ್ ನೀಡಿದ್ದರು. ಜನ್'ಧನ್ ಖಾತೆಗೆ ಬೇರೆಯವರು ಹಾಕಿರುವ ಹಣ ಬಡವರದ್ದೇ ಆಗಿದ್ದು, ಆ ಹಣವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಬೇಡಿ. ಜನ್'ಧನ್ ಖಾತೆಗೆ ಜಮೆ ಮಾಡಿರುವ ಶ್ರೀಮಂತರ ಕಪ್ಪು ಹಣವನ್ನು ಬಡವರಿಗೆ ಸೇರುವಂತೆ ಮಾಡಲು ಹೊಸ ಸೂತ್ರವೊಂದನ್ನು ರೂಪಿಸುತ್ತಿದ್ದೇವೆಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


