ತಾಪಮಾನ ಎದುರಿಸಲು ವಿಶ್ವ ಸಜ್ಜು
ಹವಾಮಾನ ಬದಲಾವಣೆಯನ್ನು ಎದುರಿಸುವ ಏಕೈಕ ಉದ್ದೇಶವನ್ನಿಟ್ಟುಕೊಂಡು ವಿಶ್ವದ ಎಲ್ಲ ದೇಶಗಳೂ ಸೋಮವಾರ ಪ್ಯಾರಿಸ್‍ನಲ್ಲಿ ಒಂದುಗೂಡಲಿವೆ...

ವ್ಯಾಲ್ಲೆಟ್ಟಾ (ಮಾಲ್ಟಾ): ಹವಾಮಾನ ಬದಲಾವಣೆಯನ್ನು ಎದುರಿಸುವ ಏಕೈಕ ಉದ್ದೇಶವನ್ನಿಟ್ಟುಕೊಂಡು ವಿಶ್ವದ ಎಲ್ಲ ದೇಶಗಳೂ ಸೋಮವಾರ ಪ್ಯಾರಿಸ್‍ನಲ್ಲಿ ಒಂದುಗೂಡಲಿವೆ.
ವಿಶ್ವಸಂಸ್ಥೆಯ 21ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಕಾಪ್ 21) ಅಂದರೆ ವಿಶ್ವ ತಾಪಮಾ ನ ಶೃಂಗವು ಪ್ಯಾರಿಸ್‍ನಲ್ಲಿ ಆರಂಭವಾಗಲಿದ್ದು, ಜಾಗತಿಕ ತಾಪಮಾನದ ದರಕ್ಕೆ 2 ಡಿಗ್ರಿ
ಸೆಲ್ಶಿಯಸ್‍ನ ಮಿತಿ ಹೇರುವುದೇ ಇದರ ಧ್ಯೇಯವಾಗಿದೆ. 12 ದಿನಗಳ ಕಾಲ ಹವಾಮಾನ ಬದಲಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ 150ಕ್ಕೂ ಹೆಚ್ಚು ದೇಶಗಳ ನಾಯಕರು ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತದಿಂದ ರು.16.70 ಕೋಟಿ: ಸೌರಶಕ್ತಿಯ ಅನುಕೂಲತೆಯನ್ನು ಪಡೆಯುವಂತೆ 122 ದೇಶಗ-ಳೊಂದಿಗೆ ಭಾರತವು ಮೈತ್ರಿ ಮಾಡಿಕೊಳ್ಳಲಿದೆ. ಶೃಂಗದ ಆರಂಭದ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಹವಾಮಾನ ಬದಲಾವಣೆಗೆ ಸಂಬಂಧಿಸಿ ಭಾರತದ ನಿಲುವನ್ನು ಪ್ರಕಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಮೆರಿಕ ಅಧ್ಯಕ್ಷ ಒಬಾಮರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಏತನ್ಮಧ್ಯೆ, ಕಾಮನ್ವೆಲ್ತ್‍ನ ಬಡ ರಾಷ್ಟ್ರಗಳಿಗೆ ನೆರವಾಗಲು ರು.16.70 ಕೋಟಿ(2.5 ಮಿಲಿಯನ್ ಡಾಲರ್) ಹಣಕಾಸು ನೆರವು ನೀಡುವುದಾಗಿ ಭಾರತ ಘೋಷಿಸಿದೆ. ಈ ಹಣದ ಮೂಲಕ ಬಡ ರಾಷ್ಟ್ರಗಳು ಸ್ವಚ್ಛ ಇಂಧನವನ್ನು ಅಳವಡಿಸಿಕೊಳ್ಳುವ ಮತ್ತು ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಕಾರ್ಯ ಮಾಡಲಿವೆ. ಈ ದೇಶಗಳಿಗಾಗಿ ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ ಇನ್ನು ಕೆಲ ಶ್ರೀಮಂತ ರಾಷ್ಟ್ರಗಳು 2.5 ಶತಕೋಟಿ ಡಾಲರ್ ನೆರವು ಘೋಷಿಸಿವೆ.
ತಾಪಮಾನ ತಗ್ಗಿಸುವಿಕೆಯತ್ತ ಹೆಜ್ಜೆಯಿಟ್ಟಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ 2020ರವರೆಗೆ ವರ್ಷಕ್ಕೆ 100 ಶತಕೋಟಿ ಡಾಲರ್ ಒದಗಿಸುವ ಭರವಸೆಯನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಪ್ಪದೇ ಈಡೇರಿಸಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ. ಪ್ಯಾರಿಸ್‍ನಲ್ಲಿ ಇಡೀ ಜಗತ್ತು ಸಾರ್ವತ್ರಿಕ ಹವಾಮಾನ ಒಪ್ಪಂದವನ್ನು ಮಾಡಿಕೊಳ್ಳುವ ನಿರೀಕ್ಷೆಯಿದೆ. ಈ ಒಪ್ಪಂದವು ಹೆಚ್ಚು ಬಾಳಿಕೆ ಬರಬೇಕು, ಅದು ಸಮಗ್ರವಾದ, ಇಂಗಾಲ ಹೊರಸೂಸುವಿಕೆ ಕಡಿಮೆಯಾಗಿದ್ದರಿಂದ ಸೃಷ್ಟಿಯಾದ ದೀರ್ಘಾವಧಿ ಅವಕಾಶಗಳು, ಹವಾಮಾನ-ಸ್ಥಿತಿ ಸ್ಥಾಪಕತ್ವವುಳ್ಳ ಅಭಿವೃದ್ಧಿಯನ್ನು ಹೊಂದಿರಬೇಕು ಎಂದಿದ್ದಾರೆ ಮೂನ್.
ಇದೇ ವೇಳೆ, ಪ್ಯಾರಿಸ್ ನಲ್ಲಿ ಅಮೆರಿಕ ಅಧ್ಯಕ್ಷ ಒಬಾಮ ಅವರು 120ಕ್ಕೂ ಹೆಚ್ಚು ವಿಶ್ವನಾಯಕರನ್ನು ಭೇಟಿಯಾಗಲಿದ್ದು, ಹೊಸ ಹವಾಮಾನ ಬದಲಾವಣೆ ಒಪ್ಪಂದವನ್ನು ಮಾಡಿಕೊಳ್ಳಲಿದ್ದಾರೆ. ಅದರಂತೆ, ಮೊತ್ತಮೊದಲ ಬಾರಿಗೆ ವಿಶ್ವದ ಎಲ್ಲ ರಾಷ್ಟ್ರಗಳೂ ಹಸಿರುಮನೆ ಅನಿಲದ ಮಾಲಿನ್ಯವನ್ನು ತಗ್ಗಿಸುವ ನಿರ್ಣಯ ಕೈಗೊಳ್ಳಲಿವೆ. ಈವರೆಗೆ ಕನಿಷ್ಠ 170 ದೇಶಗಳು ಹೊರಸೂಸುವಿಕೆ ತಗ್ಗಿಸುವ ಯೋಜನೆಯನ್ನು ಹಾಕಿಕೊಂಡಿವೆ.
ಗುರಿ ತಲುಪಿದ ಚೀನಾ: ವಿಶ್ವದಲ್ಲೇ ಅತಿಹೆಚ್ಚು ಹಸಿರುಮನೆ ಅನಿಲವನ್ನು ಹೊರಸೂಸುವ ಚೀನಾವು ಗಡುವು ಮುಗಿಯಲು 6 ತಿಂಗಳಿರುವಾಗಲೇ ಮಾಲಿನ್ಯ ತಗ್ಗಿಸುವ ಗುರಿಯನ್ನು ತಲುಪಿದೆ. ಅಮೆರಿಕದ ಬಳಿಕ ಚೀನಾವು ಅತಿ ಹೆಚ್ಚು ಮಲಿನಕಾರಿ ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳು ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಕಳೆದ ವರ್ಷವೇ ಒಪ್ಪಂದವೊಂದನ್ನು ಕೈಗೊಂಡಿದ್ದವು. ಅದರಂತೆ, ನಾವು ನಮ್ಮ ಗುರಿ ಮುಟ್ಟಿದ್ದೇವೆ ಎಂದು ಚೀನಾ ಹೇಳಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


