ದೇವಾಲಯಗಳಿಗೆ ಚಿನ್ನ ನಗದೀಕರಣಕ್ಕೆ ಧರ್ಮ ಸೂಕ್ಷ್ಮದ ಅಡ್ಡಿ
ಕೇಂದ್ರ ಸರ್ಕಾರದ ನಿರೀಕ್ಷೆಯ ಚಿನ್ನದ ನಗದೀಕರಣ ಯೋಜನೆ ಕುಂಟುತ್ತಲೇ ಸಾಗಿದೆ. ದೇಶದ ದೇವಾಲಯಗಳಲ್ಲಿರುವ...

Published On :
ನವದೆಹಲಿ: ಕೇಂದ್ರ ಸರ್ಕಾರದ ನಿರೀಕ್ಷೆಯ ಚಿನ್ನದ ನಗದೀಕರಣ ಯೋಜನೆ ಕುಂಟುತ್ತಲೇ ಸಾಗಿದೆ. ದೇಶದ ದೇವಾಲಯಗಳಲ್ಲಿರುವ ಚಿನ್ನವನ್ನು ಬ್ಯಾಂಕಿನಲ್ಲಿಟ್ಟರೆ ರು.60 ಲಕ್ಷ ಕೋಟಿ ಹಣದ ಹರಿವು ಸಿಗಲಿದೆ ಎಂಬುದು ಕೇಂದ್ರ ಸರ್ಕಾರದ ಮಹಾದಾಸೆ. ಆದರೆ ಕೆಲವೇ ಕೆಲವು ದೇಗುಲಗಳನ್ನು ಬಿಟ್ಟರೆ ಉಳಇದೆಲ್ಲಾ ಕಡೆಗಳಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ.
ಈ ಕುರಿತಂತೆ ದೇಶದ ವಿವಿಧ ದೇಗುಲಗಳ ಆಡಳಿತ ಮಂಡಳಿ, ಟ್ರಸ್ಟ್‍ಗಳು, ಮುಜರಾಯಿ ಇಲಾಖೆಗಳು ಪ್ರತಿಕ್ರಿಯೆ ನೀಡಿವೆ. ಕೆಲವು ಇನ್ನೂ ನಿರ್ಧರಿಸಿಲ್ಲ ಎಂದರೆ, ಇನ್ನೂ ಕೆಲವು ದೇವಾಲಯಗಳು ಧರ್ಮಸೂಕ್ಷ್ಮದ ಪ್ರಶ್ನೆ ಎತ್ತಿವೆ. ಅಂದರೆ ದೇವಾಲಯಕ್ಕೆ ಕಾಣಿಕೆಯಾಗಿ ಭಕ್ತರು ನೀಡಿದ ಚಿನ್ನದ ಆಭರಣಗಳನ್ನು ಕರಗಿಸಿ ನಗದೀಕರಣ ಯೋಜನೆಗೆ ಬಳಸುವುದು ಭಕ್ತರ ಭಾವನೆಗಳಿಗೆ ಧಕ್ಕೆ ತಂದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಇನ್ನು ಕೆಲ ವರ್ಷಗಳ ಹಿಂದೆ ದೇಶದಲ್ಲಿ ಎಣಿಸಲಾಗದಷ್ಟು ಚಿನ್ನಾಭರಣ ಪತ್ತೆಯಾದ ಕೇರಳದ ಅನಂತಪದ್ಮನಾಭಸ್ವಾಮಿ ದೇವಸ್ಥಾನ ಹಾಗೂ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರಗಳ ಆಡಳಿತ ಮಂಡಳಿಗಳಿಗೆ ದೇವಾಲಯದ ಸಂಪತ್ತಿನ ವಿಷಯದಲ್ಲಿ ವಿಚಾರಣೆ ಹಂತದಲ್ಲಿರುವ ಕೋರ್ಟ್ ಕೇಸುಗಳು ಅಡ್ಡಗಾಲಾಗಿವೆ.
ಕೇರಳ, ಕರ್ನಾಟಕ, ತಮಿಳುನಾಡು, ರಾಜಸ್ಥಾನ, ತೆಲಂಗಾಣದ ದೇವಾಲಯಗಳಿಂದ ಈ ಬಗ್ಗೆ ನಿರಾಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಆಂಧ್ರಪ್ರದೇಶ, ಪಶ್ಚಿಮಬಂಗಾಳ, ಗುಜರಾತ್‍ನ ಕೆಲವು ದೇವಾಲಯಗಳು ಮೊದಲ ಹಂತದಲ್ಲಿ ಆಸಕ್ತಿ ತೋರಿಸಿವೆ. ಆದರೆ, ಬಹುತೇಕ ಎಲ್ಲರ ಆತಂಕ ಭಕ್ತರ ಭಾವನೆಗೆ ಧಕ್ಕೆ ಬರಬಹುದು ಹಾಗೂ ಕರಗಿಸುವುದರಿಂದ ಆಗುವ ಚಿನ್ನ ಅಪಮೌಲ್ಯದ ಬಗ್ಗೆಯೇ.
ಹೀಗೆ ದೇಶಾದ್ಯಂತ, ಅದರಲ್ಲೂ ಪ್ರಮುಖವಾಗಿ ದಕ್ಷಿಣ ಭಾರತದ ದೇವಾಲಯಗಳಲ್ಲಿ ಚಿನ್ನ ನಗದೀಕರಣ ಯೋಜನೆ ವಿಷಯದಲ್ಲಿ ಇರುವ ನಿಲುವು, ಅಡ್ಡಿ ಆತಂಕಗಳ ವಿವರ ಇಲ್ಲಿದೆ;
ಏನಿದು ಯೋಜನೆ: ದೇಶದ ಜನತೆ ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಬಳಕೆಯಾಗದೇ ಸಂಗ್ರಹವಾಗಿರುವ ಅಂದಾಜು 22 ಸಾವಿರ ಟನ್ ಚಿನ್ನವನ್ನು ಠೇವಣಿ ಇಟ್ಟು, ನಗದೀಕರಿಸುವ ಮೂಲಕ ಅಂದಾಜು 66 ಲಕ್ಷ ಕೋಟಿ ಹಣ ದೇಶದ ಆರ್ಥಿಕತೆಗೆ ಸೇರಿಸುವ ಯೋಜನೆಗೆ ಕಳೆದ ತಿಂಗಳು ನರೇಂದ್ರ ಮೋದಿ ಚಾಲನೆ ನೀಡಿದ್ದರು. ಚಿನ್ನ ನಗದೀಕರಣದಂತೆ ಚಿನ್ನದ ಮೌಲ್ಯಕ್ಕೆ ಸಮಾನ ಬಡ್ಡಿ ಹಾಗೂ ಮಾರುಕಟ್ಟೆ ದರಕ್ಕೆ ಪೂರಕವಾಗಿ ಪುನರ್ ಮೌಲ್ಯೀಕರಣ ಸೌಲಭ್ಯ.
ಗುಜರಾತ್
ಅಂಭಾಜಿ ದೇವಾಲಯ: ಸದ್ಯಕ್ಕೆ ಯೋಜನೆಯಲ್ಲಿ ಭಾಗವಹಿಸಲಾಗದು.
ಸೋಮನಾಥ ದೇವಾಲಯ: ನಗದೀಕರಣ ಪ್ರಸ್ತಾವನೆ ಸಿದ್ಧಪಡಿಸಿದೆ. ಟ್ರಸ್ಟಿಗಳ ಅಂತಿಮ ನಿರ್ಧಾರ ಬಾಕಿ. 35 ಕೆಜಿ ಶುದ್ಧ ಚಿನ್ನ ಇದೆ.
ದ್ವಾರಕಾಧೀಶ: ಇದೊಂದು ಉತ್ತಮ ಯೋಜನೆ ಎಂದಿರುವ ಟ್ರಸ್ಟ್ ಅಧ್ಯಕ್ಷ ಎಚ್ ಕೆ ಪಟೇಲ್. ಸದ್ಯದಲ್ಲೇ ನಿರ್ಧಾರದ ಹೇಳಿಕೆ
ಮಹಾರಾಷ್ಟ್ರ
ಸಿದ್ದಿವಿನಾಯಕ ಮಂದಿರ, ಮುಂಬೈ: 160 ಕೆಜಿ ಚಿನದ್ಲಲಿ ಈಗಾಗಲೇ 10 ಕೆಜಿ ಬ್ಯಾಂಕ್ ನಲ್ಲಿ ಇಡಲಾಗಿದೆ. ನಗದೀಕರಣಕ್ಕೆ ಬಂಬಲ ಕೊಡುವ ಬಗ್ಗೆ ಯೋಚಿಸಿದೆ.
ಶಿರಡಿ ಸಾಯಿಬಾಬಾ ಮಂದಿರ: ಸದ್ಯ 383 ಕೆಜಿ ಚಿನ್ನ, 4,000 ಕೆಜಿ ಬೆಳ್ಳಿ ಇದೆ(ಬ್ಯಾಂಕ್ ನಲ್ಲಿಟ್ಟಿರುವ ಪ್ರಮಾಣ ಹೊರತುಪಡಿಸಿ). ಬಾಂಬೆ ಹೈಕೋರ್ಟ್ ಆದೇಶದಂತೆ ನಿರ್ಧಾರ ಸಾಧ್ಯತೆ
ಆಂಧ್ರಪ್ರದೇಶ
ತಿರುಮಲ ತಿರುಪತಿ ದೇವಾಸ್ಥಾನ: ಯೋಜನೆ ಬಗ್ಗೆ ಚರ್ಚಿಸಲು ಶೀಘ್ರ ಮಂಡಳಿ ಸಭೆ. ಬೇರೆ ಬೇರೆ ರೂಪದಲ್ಲಿ 5.5 ಟನ್ ಚಿನ್ನ ಇದೆ
ಕನಕದುರ್ಗಮ್ಮ ವಿಜಯವಾಡ: ಯೋಚಿಸಿಲ್ಲ
ಕೇರಳ
ಗುರುವಾಯೂರು ದೇವಸ್ವಂ ಹೊರತುಪಡಿಸಿ ರಾಜ್ಯದಲ್ಲಿ ಇತರ ದೇವಸ್ವಂ ಸಮಿತಿಗಳು ನಗದೀಕರಣ ಯೋಜನೆ ಬಗ್ಗೆ ಆಸಕ್ತಿ ವಹಿಸಿಲ್ಲ. ಕಾರಣ ಆಭರಣ ಚಿನ್ನ ಕರಗಿಸುವುದರಿಂದ ಚಿನ್ನದ ಪ್ರಮಾಣ, ಮೌಲ್ಯನಷ್ಟವಾಗುತ್ತದೆ ಎಂಬುದು.
ಗುರುವಾಯೂರು: 500 ಕೆಜಿ ಬ್ಯಾಂಕ್ ನಲ್ಲಿಟ್ಟಿದ್ದೇವೆ. ನಗದೀಕರಿಸುವಷ್ಟು ಚಿನ್ನ ಈಗಿಲ್ಲ.
ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯ: ದೇವಾಲಯ ಸಂಪತ್ತಿನ ವಿವಾದ ಸುಪ್ರೀನಲ್ಲಿದೆ ನಾವೇನೂ ಮಾಡುವಂತಿಲ್ಲ.
ಕರ್ನಾಟಕ
ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಸಚಿವ ಮನೋಹರ್ ತಹಸೀಲ್ದಾರ್
ಜನರ ಕಾಣಿಕೆ ಆಭರಣವನ್ನು ಕರಗಿಸುವುದು ಭಕ್ತರ ಭಾವನೆಗೆ ಧಕ್ಕೆ ತರಬಹುದು. ದೊಡ್ಡ ಪ್ರಮಾಣದ ಆಭರಣವನ್ನು ಒಂದೆಡೆಯಿಂದ ಮತ್ತೊಂಡೆಗೆ ಸಾಗಿಸುವುದು ಕೂಡ ಸವಾಲು.
ಠೇವಣಿ ಹೇಗೆ?
ಚಿನ್ನ ಠೇವಣಿಯನ್ನು ಆಭರಣ ರೂಪದಲ್ಲೂ ಇಡಬಹುದು. ಆದರೆ, ಅದಕ್ಕೆ ಮೌಲ್ಯ ನಿರ್ಣಯ ಮಾಡುವುದು ಅದನ್ನು ಕರಗಿಸಿ, ಅದರ ಗುಣಮಟ್ಟವನ್ನು ನಿರ್ಧರಿಸಿದ ಬಳಿಕವೇ. ಹಾಗಾಗಿ ಠೇವಣಿ ಇಟ್ಟವರು ಚಿನ್ನವನ್ನು ವಾಪಸ್ ಪಡೆಯಬಯಸಿದಾಗ ಅವರಿಗೆ ಶುದ್ಧ ಚಿನ್ನದ ಗಟ್ಟಿಯ ರೂಪದಲ್ಲಿ ದೊರೆಯಲಿದೆ ಅಥವಾ ಸಮಾನ ಹಣ ಕೂಡ ಪಡೆಯ ಬಹುದು. ಆದರೆ, ಮೂಲ ರೂಪದಲ್ಲಿ ಸಿಗಲಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


