'RSS, BJPಯವರನ್ನು ಬೆಂಗಳೂರಿನಿಂದಲೇ ಓಡಿಸಬೇಕು'; ಜ್ಞಾನೇಶ್ ಕುಮಾರ್ ಒಬ್ಬ ನೀಚ: ಬಿ.ಕೆ ಹರಿಪ್ರಸಾದ್
ವಂದೇ ಮಾತರಂ ಗೀತೆ ನಮ್ಮದು. ನೀವು ಖಾಕಿ ಚಡ್ಡಿ ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಸಂಜೆ ವೇಳೆ ಹೋಗಿ. ಕಾಂಗ್ರೆಸ್ ಪಕ್ಷ ನಿಂತ ನೀರಲ್ಲ, ಹರಿಯುವ ನೀರು. ಇವತ್ತು ನಾನು ಇರುತ್ತೇನೆ, ನಾಳೆ ಹೋಗಬಹುದು. ಯಾರೂ ಬೇಸರ ಮಾಡಿಕೊಳ್ಳುವ ಹಾಗಿಲ್ಲ ಎಂದರು.

ಬೆಂಗಳೂರು: ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್, RSS, ಬಿಜೆಪಿಯವರನ್ನು ಬೆಂಗಳೂರಿನಿಂದಲೇ ಓಡಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಗರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿದ ಮಾತನಾಡಿದ ಅವರು, ಬಿಜೆಪಿ ಶಾಸಕರು ಬೋಗಸ್ಗಳು. ಅವರಿಗೆ ವಂದೇ ಮಾತರಂ ಗೀತೆಯನ್ನು ನೋಡಿಕೊಂಡು ಸಹ ಹೇಳಲು ಬರುವುದಿಲ್ಲ. ಆದರೆ, ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್‌ನವರಾದ ನಾವು ಚೆನ್ನಾಗಿ ಹಾಡುತ್ತೇವೆ ಎಂದರು.
ವಂದೇ ಮಾತರಂ ಗೀತೆ ಏನಿದ್ದರೂ ನಮ್ಮದು. ನೀವು ಖಾಕಿ ಚಡ್ಡಿ ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಸಂಜೆ ವೇಳೆ ಹೋಗಿ. ಕಾಂಗ್ರೆಸ್ ಪಕ್ಷ ನಿಂತ ನೀರಲ್ಲ, ಹರಿಯುವ ನೀರು. ಇವತ್ತು ನಾನು ಇರುತ್ತೇನೆ, ನಾಳೆ ಹೋಗಬಹುದು. ಯಾರೂ ಬೇಸರ ಮಾಡಿಕೊಳ್ಳುವ ಹಾಗಿಲ್ಲ. ಏನಪ್ಪಾ ನಾನಿದ್ದೆ ಕೈಬಿಟ್ರು ಅಂತ ಬೇಸರ ಮಾಡಿಕೊಳ್ಳಬಾರದು. ಕಾಂಗ್ರೆಸ್ ಯಾರನ್ನೂ ಕೈಬಿಟ್ಟಿಲ್ಲ, ಬಿಡೋದು ಇಲ್ಲ. ನಿರಂತರವಾಗಿ ಕೆಲಸ ಮಾಡಿದ್ರೆ ಪಕ್ಷದಲ್ಲಿ ಸ್ಥಾನಮಾನ ಸಿಗುತ್ತೆ ಎನ್ನುವುದಕ್ಕೆ ನಾನೇ ದೊಡ್ಡ ಉದಾಹರಣೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಹಲವು ದಶಕಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಐವತ್ಮೂರು ವರ್ಷಗಳಾದ ಮೇಲೆ ಕೆಪಿಸಿಸಿ ಅಧ್ಯಕ್ಷನಾಗುವ ಅವಕಾಶ ಬಂದಿದೆ. ಹೀಗಾಗಿ ನಿರಂತರವಾಗಿ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿರಬೇಕು. ಒಂದಲ್ಲ ಒಂದು ದಿನ ಅವಕಾಶ ಸಿಕ್ಕೇ ಸಿಗುತ್ತದೆ. ಅದಕ್ಕಾಗಿ ಕಾಯಬೇಕಷ್ಟೆ ಎಂದು ಹರಿಪ್ರಸಾದ್ ತಿಳಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಒಬ್ಬ ಅಜ್ಞಾನಿ. ಜ್ಞಾನೇಶ್ ಕುಮಾರ್ ಹೋಗುವ ತನಕ ಹೋರಾಟ ಮಾಡಿ. ಅವನ ಬಗ್ಗೆ ನಿರ್ಲಕ್ಷ್ಯವಹಿಸಿದ್ರೆ, ಅರ್ಹ ಮತದಾರನ್ನು ಕೈಬಿಡ್ತಾನೆ. ಅವನಂತಹ ನೀಚ ಈ ದೇಶದಲ್ಲಿ ಬೇರೆ ಯಾರೂ ಸಹ ಇಲ್ಲ. ಸಂವಿಧಾನ ದುರುಪಯೋಗ ಮಾಡಿಕೊಂಡ ನೀಚ ಅವನು. ನೀವೆಲ್ಲ ಮತದಾರರ ಪಟ್ಟಿಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ತಿರುಗೇಟು
ಹರಿಪ್ರಸಾದ್ ಹೇಳಿಕೆಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದು, ಯಾರನ್ನೂ ಬೆಂಗಳೂರು ಬಿಟ್ಟು ಓಡಿಸಲು ಸಾಧ್ಯವಿಲ್ಲ. ಬಿಕೆ ಹರಿಪ್ರಸಾದ್ ತಲ್ವಾರ್ ಹಿಡಿದು ಓಡಾಡುವ ಕಾಲ ಇತ್ತು. RSSನದು ಗಣವೇಶ ಅಷ್ಟೇ, ಲಾಠಿಯಿಂದ ಯಾರನ್ನೂ ತಳಿಸಿಲ್ಲ. ಕರ್ನಾಟಕದಲ್ಲಿ RSS ವಿರುದ್ಧ ಯಾವುದೇ ಕೇಸ್ ಇಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರೇ ಸದನದಲ್ಲಿ ಅದನ್ನು ಹೇಳಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ವಂದೇಮಾತರಂನ ಬಹುಕಾಲದಿಂದ ಸದನದಲ್ಲಿ ಪೂರ್ಣ ಹಾಡ್ತಿದ್ರು. ಅದನ್ನ ನಿಲ್ಲಿಸಿ ಕಾಂಗ್ರೆಸ್ ಬಂಡತನ ಪ್ರದರ್ಶನ ಮಾಡಿದೆ. ಹರಿಪ್ರಸಾದ್ರದ್ದು ಹೊಡಿಬಡಿ ಸಂಸ್ಕೃತಿ. ಅವರಿಂದ ಒಳ್ಳೆಯದನ್ನು ನಿರೀಕ್ಷಿಸಲು ಆಗುವುದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



