ನೇಪಾಳ ಮಹಾ ಪ್ರವಾಹ: ಸಾವಿನ ದವಡೆಯಿಂದ ಬಚಾವ್; 17 ಮಂದಿ ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್!
ಪ್ರವಾಹ ಸಂಭವಿಸುವ ಒಂದು ದಿನದ ಹಿಂದೆಯೇ ನಾವು ಅಲ್ಲಿಂದ ಹೊರಟಿದ್ದೆವು. ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಟಿಬೆಟ್ ಗಡಿಯ ಪಟ್ಟಣ ನ್ಯಾಲಮ್‌ನಲ್ಲಿದ್ದ ನಮ್ಮ ಹೋಟೆಲ್‌ನಿಂದ ಒಂದು ದಿನ ಮುಂಚಿತವಾಗಿ ಹೊರಟಿದ್ದೆವು.

ಬೆಂಗಳೂರು: ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಉಂಟಾದ ಭೀಕರ ಪ್ರವಾಹ ಹಾಗೂ ಭೂಕುಸಿತದ ನಡುವೆ ಸಿಲುಕಿದ್ದ ಕರ್ನಾಟಕದ 17 ಚಾರಣಿಗರು ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ್ದಾರೆ.
ಮಂಗಳವಾರ ತಡರಾತ್ರಿ ಕಠ್ಮಂಡುವಿನಿಂದ ನಿಯಮಿತ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದಿಳಿದ ಚಾರಣಿಗರನ್ನು ಕುಟುಂಬಸ್ಥರು ಮತ್ತು ಅಧಿಕಾರಿಗಳು ಬರಮಾಡಿಕೊಂಡರು. ತಾಯ್ನಾಡಿಗೆ ಮರಳಿದ ಚಾರಣಿಗರು ತಾವು ಅನುಭವಿಸಿದ ಆ ಭೀಕರ ಕ್ಷಣಗಳನ್ನು ನೆನೆದು ನಿಟ್ಟುಸಿರು ಬಿಟ್ಟರು.
23 ಮಂದಿಯಿದ್ದ ಚಾರಣಿಗರ ತಂಡದ ಇನ್ನೂ ಇಬ್ಬರು ಸದಸ್ಯರು ಬುಧವಾರ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಪ್ರಸ್ತುತ ಬೆಂಗಳೂರಿಗೆ ಮರಳಿರುವ 17 ಮಂದಿ ಕನ್ನಡಿಗರು ನೇಪಾಳ ಏರ್‌ಲೈನ್ಸ್‌ನ RA 225 ವಿಮಾನದ ಮೂಲಕ ನಗರಕ್ಕೆ ಆಗಮಿಸಿದರು.
ನೇಪಾಳಕ್ಕೆ ತೆರಳಿದ್ದ ಇವರ ತಂಡದಲ್ಲಿ ಬಹುತೇಕ ಮಂದಿಗೆ ಚಾರಣದ ಅನುಭವ ಇರಲಿಲ್ಲ. ನೇಪಾಳದ ‘ಮೂನ್ ಹಿಮಾಲಯ ಅಡ್ವೆಂಚರ್’ ಎಂಬ ಚಾರಣ ಸಂಸ್ಥೆಯ ಸೇವೆಯನ್ನು ಅವರು ಪಡೆದುಕೊಂಡಿದ್ದರು.
ಬೆಂಗಳೂರಿನ ನಿವಾಸಿ ಹಾಗೂ ತಂಡದ ಸದಸ್ಯ ಶ್ರೀನಿವಾಸುಲು ಯಾದತಿ ಮಾತನಾಡಿ, “ಪ್ರವಾಹ ಸಂಭವಿಸುವ ಒಂದು ದಿನದ ಹಿಂದೆಯೇ ನಾವು ಅಲ್ಲಿಂದ ಹೊರಟಿದ್ದೆವು. ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಟಿಬೆಟ್ ಗಡಿಯ ಪಟ್ಟಣ ನ್ಯಾಲಮ್‌ನಲ್ಲಿದ್ದ ನಮ್ಮ ಹೋಟೆಲ್‌ನಿಂದ ಒಂದು ದಿನ ಮುಂಚಿತವಾಗಿ ಹೊರಟಿದ್ದೆವು. ಮರುದಿನ ಪ್ರವಾಹದ ಬಗ್ಗೆ ತಿಳಿದುಕೊಂಡಾಗ ಇಡೀ ಹೋಟೆಲ್ ಕಟ್ಟಡವೇ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿರುವುದು ತಿಳಿದುಬಂದಿತು ಎಂದು ಹೇಳಿದರು.
ತಮ್ಮ ಪ್ರವಾಸದ ವೇಳಾಪಟ್ಟಿಯ ಭಾಗವಾಗಿ ಹಲವು ತಿಂಗಳ ಹಿಂದೆಯೇ ಕಾಯ್ದಿರಿಸಿದ್ದ ಸಾಮಾನ್ಯ ವಿಮಾನದಲ್ಲೇ ಬೆಂಗಳೂರಿಗೆ ಮರಳಿದ್ದಾಗಿ ತಂಡದ ಸದಸ್ಯರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (KSDMA) ಅಧಿಕಾರಿಗಳಿಂದ ದೂರವಾಣಿ ಕರೆಗಳು ಬಂದಿದ್ದವು. ಆದರೆ, ತಾವು ಪ್ರವಾಹ ಪೀಡಿತ ಪ್ರದೇಶಗಳಿಂದ ದೂರದಲ್ಲಿದ್ದ ಕಾರಣ ರಾಜ್ಯ ಸರ್ಕಾರದ ಯಾವುದೇ ನೆರವಿನ ಅಗತ್ಯ ಎದುರಾಗಲಿಲ್ಲ ಎಂದು ಹೇಳಿದರು.
ನಾವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದೇವೆ. ಅವರು ನಮ್ಮ ಸುರಕ್ಷತೆ ಬಗ್ಗೆ ವಿಚಾರಿಸಿದರು,” ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಟಿಬೆಟ್‌ನ ದರ್ಚೆನ್‌ನಿಂದ ಕಠ್ಮಂಡುವಿಗೆ ವಿಮಾನ ಏರಲು ತೆರಳುವ ಮಾರ್ಗದಲ್ಲಿ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಸಂಚರಿಸಬೇಕಾಗಿದ್ದರಿಂದ ಕೆಲವು ನೆರವು ಕೋರಿದ್ದಾಗಿ ಶ್ರೀನಿವಾಸುಲು ಯಾದತಿ ಅವರು ಹೇಳಿದ್ದಾರೆ.
ನಾವು ಕೆಲವು ನೆರವು ನೀಡುವಂತೆ ಮನವಿ ಮಾಡಿದ್ದೆವು. ದರ್ಚೆನ್‌ನಿಂದ ಕಠ್ಮಂಡುವಿಗೆ ತೆರಳುವ ಮಾರ್ಗದಲ್ಲಿ ಅತ್ಯಂತ ಅಪಾಯಕಾರಿ ರಸ್ತೆಗಳ ಮೂಲಕ ಪ್ರಯಾಣಿಸಬೇಕಾಗಿತ್ತು. ಆದರೆ, ಆ ಪ್ರದೇಶದಲ್ಲಿ ರಾಜ್ಯ ಸರ್ಕಾರವೂ ಸಹಾಯ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಸರ್ಕಾರ ದೂರವಾಣಿ ಮೂಲಕ ಮಾತ್ರ ಸಂಪರ್ಕದಲ್ಲಿತ್ತು. ಅದಕ್ಕಿಂತ ಹೆಚ್ಚಿನ ನೆರವು ದೊರೆಯಲಿಲ್ಲ ಎಂದು ತಿಳಿಸಿದ್ದಾರೆ.
ಕಠ್ಮಂಡುವಿಗೆ ತಲುಪಿದಾಗ ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಮ್ಮನ್ನು ಸ್ವಾಗತಿಸಿದ್ದರು ಎಂದು ಯಾದತಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



