EPFO ವೇತನ ಮಿತಿ ₹15 ಸಾವಿರದಿಂದ ₹25 ಸಾವಿರಕ್ಕೆ ಏರಿಕೆ; ಉದ್ಯೋಗಿಗಳಿಗಾಗುವ ಪ್ರಯೋಜನಗಳೇನು?
ವೇತನ ಮಿತಿಯಲ್ಲಿನ ಹೆಚ್ಚಳದಿಂದಾಗಿ ಉದ್ಯೋಗಿಯ ಇಪಿಎಫ್ ಪಾಲಿನಲ್ಲಿ ಏರಿಕೆಯಾದಾಗ, ಉದ್ಯೋಗದಾತರೂ ಅದಕ್ಕೆ ಸಮಾನವಾದ ಪಾಲನ್ನು ನೀಡುತ್ತಾರೆ; ಇದು ಖಾತರಿಪಡಿಸಿದ ಪಿಂಚಣಿ ಮತ್ತು ಉಚಿತ ವಿಮಾ ರಕ್ಷಣೆಗೆ ದಾರಿ ಮಾಡಿಕೊಡುತ್ತದೆ.

ಬೆಂಗಳೂರು: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (EPFO) ವ್ಯಾಪ್ತಿಗೆ ನೌಕರರನ್ನು ಕಡ್ಡಾಯವಾಗಿ ತರುವುದಕ್ಕೆ ಇದ್ದ ವೇತನ ಮಿತಿಯನ್ನು ₹15 ಸಾವಿರದಿಂದ ₹25 ಸಾವಿರಕ್ಕೆ ಹೆಚ್ಚಿಸಿರುವುದು, ಹೆಚ್ಚಿನ ನೌಕರರನ್ನು ಇಪಿಎಫ್ಒ ವ್ಯಾಪ್ತಿಗೆ ತರುವ ಹಾಗೂ ನೌಕರರ ನಿವೃತ್ತಿ ಉಳಿತಾಯಕ್ಕೆ ಪಾವತಿಸುವ ಮೊತ್ತವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಈ ಕುರಿತು ಬೆಂಗಳೂರಿನ (ಮಲ್ಲೇಶ್ವರಂ) ಆರ್‌ಒದ ಪ್ರಾದೇಶಿಕ ಪಿಎಫ್ ಆಯುಕ್ತ-II ಅನಿಕೇತ್ ಅನಿಲ್ ಅಂಬೇಕರ್ ಮಾಹಿತಿ ನೀಡಿ, ಪಿಎಫ್ (PF) ಕೊಡುಗೆಯಲ್ಲಿನ ಹೆಚ್ಚಳವು ಉದ್ಯೋಗಿಯ ಒಟ್ಟಾರೆ ಆರ್ಥಿಕ ಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಉದ್ಯೋಗಿಗಳು ಅರ್ಥಮಾಡಿಕೊಳ್ಳಬೇಕು. ಏಕೆಂದರೆ, ಇಪಿಎಫ್‌ಗೆ (EPF) ಮಾಡುವ ಇಂತಹ ಕಡಿತವು ಉದ್ಯೋಗದಾತರಿಂದಲೂ ಸಮಾನ ಮೊತ್ತದ ಕೊಡುಗೆಯನ್ನು ಉದ್ಯೋಗಿಯ ಪಿಎಫ್ ಖಾತೆಗೆ ಸೇರಿಸಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಅತ್ಯುತ್ತಮ ಬಡ್ಡಿ ದರ (2025-26ರ ಆರ್ಥಿಕ ವರ್ಷದಲ್ಲಿ ವಾರ್ಷಿಕ 8.25%, ಮಾಸಿಕ ಬಾಕಿ ಮೊತ್ತದ ಆಧಾರದ ಮೇಲೆ ಚಕ್ರಬಡ್ಡಿ ಲೆಕ್ಕಾಚಾರ), ತೆರಿಗೆ-ಮುಕ್ತ ಉಳಿತಾಯ, ಮಾಸಿಕ ಪಿಂಚಣಿ ಮತ್ತು ಪ್ರೀಮಿಯಂ-ರಹಿತ ವಿಮಾ ಸೌಲಭ್ಯಗಳು ಲಭ್ಯವಾಗುತ್ತವೆ ಎಂದು ಹೇಳಿದರು.
'ಇದರಿಂದ ದೊರೆಯುವ ಪ್ರಯೋಜನಗಳು ಖಂಡಿತವಾಗಿಯೂ ಇಂತಹ ಹೆಚ್ಚುವರಿ ಕಡಿತಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ. ಇದನ್ನು ಮಾಸಿಕ ಕೈಗೆ ಸಿಗುವ ವೇತನದಲ್ಲಿನ ಕಡಿತ ಎಂದು ನೋಡುವ ಬದಲು, ಉದ್ಯೋಗಿಗಳು ಉಳಿತಾಯ ಮಾಡುವ ವಿಧಾನದಲ್ಲಿನ ಒಂದು ಬದಲಾವಣೆ ಎಂದು ಪರಿಗಣಿಸಬೇಕು' ಎಂದು ಅಂಬೇಕರ್ ಹೇಳಿದರು.
'ವೇತನ ಮಿತಿಯಲ್ಲಿನ ಹೆಚ್ಚಳದಿಂದಾಗಿ ಉದ್ಯೋಗಿಯ ಇಪಿಎಫ್ ಪಾಲಿನಲ್ಲಿ ಏರಿಕೆಯಾದಾಗ, ಉದ್ಯೋಗದಾತರೂ ಅದಕ್ಕೆ ಸಮಾನವಾದ ಪಾಲನ್ನು ನೀಡುತ್ತಾರೆ; ಇದು ಖಾತರಿಪಡಿಸಿದ ಪಿಂಚಣಿ ಮತ್ತು ಉಚಿತ ವಿಮಾ ರಕ್ಷಣೆಗೆ ದಾರಿ ಮಾಡಿಕೊಡುತ್ತದೆ. ಅಂದರೆ, ಜೀವನಪೂರ್ತಿ ಭದ್ರತೆಗಾಗಿ ಮಾಡಿಕೊಳ್ಳುವ ಒಂದು ಸಣ್ಣ ಹೊಂದಾಣಿಕೆ ಇದಾಗಿದೆ. ಇದನ್ನು ಉದ್ಯೋಗಿಯ 'ಕೈಗೆ ಸಿಗುವ ವೇತನ'ದ (take-home pay) ಕಡಿತದ ಬದಲಾಗಿ 'ಪಿಎಫ್ ಖಾತೆ'ಗೆ ಹಣ ವರ್ಗಾವಣೆಯಾಗುವ ಪ್ರಕ್ರಿಯೆ ಎಂದು ಪರಿಗಣಿಸಬಹುದು. ಇದು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಇಟ್ಟುಕೊಂಡಿರುವಂತೆಯೇ ಸರಿ' ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



