ರಾಜ್ಯ

ಅಮೆರಿಕಾ ನಾಗರೀಕರ ಗುರಿಯಾಗಿಸಿ ಕೋಟಿ-ಕೋಟಿ ರೂ ವಂಚನೆ: ನಕಲಿ ಕಾಲ್ ಸೆಂಟರ್‌ ಮೇಲೆ ಸೈಬರ್ ಪೊಲೀಸರ ದಾಳಿ, ಇಬ್ಬರ ಬಂಧನ

ಆಗ್ನೇಯ ಸೈಬರ್ ಅಪರಾಧ ಪೊಲೀಸರು ಮತ್ತು ವಿಶೇಷ ಸೈಬರ್ ಸೆಲ್ ತಂಡವು ಬೆಂಗಳೂರಿನ ನಾಲ್ಕು ಕಡೆ ದಾಳಿ ನಡೆಸಿ, ಈ ನಕಲಿ ಕಾಲ್ ಸೆಂಟರ್‌ಗಳನ್ನು ಪತ್ತೆಹಚ್ಚಿದೆ.

ಅಮೆರಿಕಾ ನಾಗರೀಕರ ಗುರಿಯಾಗಿಸಿ ಕೋಟಿ-ಕೋಟಿ ರೂ ವಂಚನೆ: ನಕಲಿ ಕಾಲ್ ಸೆಂಟರ್‌ ಮೇಲೆ ಸೈಬರ್ ಪೊಲೀಸರ ದಾಳಿ, ಇಬ್ಬರ ಬಂಧನ
ಸಂಗ್ರಹ ಚಿತ್ರ
Published On :

ಬೆಂಗಳೂರು: ನಗರದಲ್ಲಿ ಅಮೆರಿಕಾ ನಾಗರಿಕರನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ನಕಲಿ ಕಾಲ್ ಸೆಂಟರ್ ಜಾಲವನ್ನು ರಾಜ್ಯ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಅಮೆರಿಕದ ಪ್ರಸಿದ್ಧ ಅಕೌಂಟಿಂಗ್ ಸಾಫ್ಟ್‌ವೇರ್ ಕಂಪನಿ QuickBooks ಹೆಸರಿನಲ್ಲಿ ವಂಚನೆ ನಡೆಸುತ್ತಿದ್ದ ಆರೋಪದ ಮೇಲೆ ದೆಹಲಿ ಮೂಲದ ಪ್ರಶಾಂತ್ ಹಾಗೂ ಉತ್ತರ ಪ್ರದೇಶದ ಆಕಾಶ್ ಎಂಬುವವರನ್ನು ಪೊಲೀಸರು ಬಂಧಿಸಲಿದ್ದಾರೆ.

ಆಗ್ನೇಯ ಸೈಬರ್ ಅಪರಾಧ ಪೊಲೀಸರು ಮತ್ತು ವಿಶೇಷ ಸೈಬರ್ ಸೆಲ್ ತಂಡವು ಬೆಂಗಳೂರಿನ ನಾಲ್ಕು ಕಡೆ ದಾಳಿ ನಡೆಸಿ, ಈ ನಕಲಿ ಕಾಲ್ ಸೆಂಟರ್‌ಗಳನ್ನು ಪತ್ತೆಹಚ್ಚಿದೆ.

ಆರೋಪಿಗಳು ಅಮೆರಿಕ ನಾಗರಿಕರಿಗೆ ಕರೆ ಮಾಡಿ ತಾವು QuickBooks ಕಂಪನಿ ಪ್ರತಿನಿಧಿಗಳೆಂದು ನಂಬಿಸಿ ನಕಲಿ ತೆರಿಗೆ ಸಲಹೆ, ಕೃತಕ ಲೈಸೆನ್ಸ್ ಕೀ, ಸಾಫ್ಟ್‌ವೇರ್ ನವೀಕರಣ ಮತ್ತು ಸೇವೆಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಆಕಾಶ್
ಬಂಧಿತ ಆರೋಪಿ ಆಕಾಶ್

ಈ ಕಾಲ್ ಸೆಂಟರ್ ಸಿಬ್ಬಂದಿ ಕಂಪನಿಯ ಅಧಿಕಾರಿಗಳ ಹೆಸರಿನಂತೆಯೇ ನಕಲಿ ಹೆಸರುಗಳನ್ನು ಬಳಸಿಕೊಂಡು ವಿದೇಶಿ ನಾಗರಿಕರನ್ನು ವಂಚಿಸುತ್ತಿದ್ದರು.

ದಾಳಿ ವೇಳೆ ಪೊಲೀಸರು 44 SSD ಡ್ರೈವ್‌ಗಳು, ಎರಡು ಮೊಬೈಲ್ ಫೋನ್‌ಗಳು, ಎರಡು ಲ್ಯಾಪ್‌ಟಾಪ್‌ಗಳು, ಒಂಬತ್ತು CPUಗಳು ಹಾಗೂ ಗ್ರಾಹಕರೊಂದಿಗೆ ಮಾತನಾಡಲು ಸಿದ್ಧಪಡಿಸಿದ್ದ ವಂಚನಾ ಸ್ಕ್ರಿಪ್ಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಜಾಲವು ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸುಮಾರು 30 ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದ ಆರೋಪಿಗಳು ಕೋರಮಂಗಲದಲ್ಲಿ ಎರಡು ಕಚೇರಿಗಳು ಹಾಗೂ ಹೆಚ್ಎಸ್ಆರ್ ಲೇ ಔಟ್ ಮತ್ತು ಚೂಡಸಂದ್ರ ಪ್ರದೇಶಗಳಲ್ಲಿ ತಲಾ ಒಂದು ಕಚೇರಿ ನಡೆಸುತ್ತಿದ್ದರು.

ಕಾಲೇಜು ಬಿಟ್ಟ ಯುವಕರು ಮತ್ತು ಇತರರನ್ನು ತಿಂಗಳಿಗೆ ರೂ.20,000ವರೆಗೆ ವೇತನ ನೀಡಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕೆಲವರಿಗೆ ಮಾತ್ರ ಈ ವಂಚನೆಯ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಈ ಜಾಲದ ಪ್ರಮುಖ ಕಿಂಗ್‌ಪಿನ್‌ಗಳು ಹಾಗೂ ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳು ಕಂಪನಿಯನ್ನು ಕಾನೂನುಬದ್ಧ ವ್ಯವಹಾರ ಸಂಸ್ಥೆಯಂತೆ ನೋಂದಾಯಿಸಿಕೊಂಡು, ಅನೇಕ ಶೆಲ್ ಕಂಪನಿಗಳನ್ನು ಬಳಸಿಕೊಂಡು ಅಮೆರಿಕದ ನಾಗರಿಕರಿಂದ ಅಪಾರ ಪ್ರಮಾಣದ ಹಣವನ್ನು ವಂಚಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಬಾಸ್ಟನ್ ಘಟಕವೂ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್ ಸೆಂಟರ್ ಜಾಲವನ್ನು ಭೇದಿಸಿ ನೂರಾರು ವೃದ್ಧ ಅಮೆರಿಕ ನಾಗರಿಕರಿಂದ ಕೋಟ್ಯಾಂತರ ಡಾಲರ್ ವಂಚನೆ ಮಾಡಲಾಗಿದ್ದ ಪ್ರಕರಣವನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.