ನೀವು ತಿನ್ನೋ ಅಡಿಕೆ ಅಸಲಿಯಾ ಅಥವಾ ನಕಲಿಯಾ? ಕೋಲಾರದಲ್ಲಿ 10 ಟನ್ ನಕಲಿ ಅಡಿಕೆ ವಶ
ಕೋಲಾರ ಜಿಲ್ಲೆಯ ಮುಳಬಾಗಿಲು ಬಳಿ ಕೋಲ್ಕತಾದಿಂದ ಬೆಂಗಳೂರಿಗೆ ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ ಸುಮಾರು 10 ಟನ್ ಶಂಕಾಸ್ಪದ ಸಿಂಥೆಟಿಕ್ (ನಕಲಿ) ಚೀನಾ ಅಡಿಕೆಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮುಳಬಾಗಿಲು (ಕೋಲಾರ): ನಕಲಿ ಪವರ್ ಬ್ಯಾಂಕ್, ನಕಲಿ ಚಾರ್ಜರ್, ನಕಲಿ ಬ್ಯಾಟರಿ, ನಕಲಿ ಇಯರ್‌ಫೋನ್, ನಕಲಿ ಲಿಪ್‌ಸ್ಟಿಕ್, ನಕಲಿ ಕ್ರೀಮ್, ನಕಲಿ ಪೌಡರ್ ಅಷ್ಟೇ ಅಲ್ಲಾ ನಕಲಿ ಔಷಧಗಳನ್ನೂ ಕೂಡ ಮಾರುವ ಕಪಟಿ ಚೀನಾ ಇದೀಗ ನಕಲಿ ಅಡಿಕೆಯನ್ನು ಭಾರತದಲ್ಲಿ ಮಾರಾಟ ಮಾಡಲು ಮುಂದಾಗಿದೆ. ಅದರಂತೆ, ಕೋಲಾರ ಜಿಲ್ಲೆಯ ಮುಳಬಾಗಿಲು ಬಳಿ ಕೋಲ್ಕತಾದಿಂದ ಬೆಂಗಳೂರಿಗೆ ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ ಸುಮಾರು 10 ಟನ್ ಶಂಕಾಸ್ಪದ ಸಿಂಥೆಟಿಕ್ (ನಕಲಿ) ಚೀನಾ ಅಡಿಕೆಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
10 ಟನ್ ನಕಲಿ ಚೀನಾ ಅಡಿಕೆ ವಶಕ್ಕೆ...
ರಾಜ್ಯದಲ್ಲಿ ಪಾನ್ ಮಸಾಲಾ ಹಾಗೂ ಗುಟ್ಕಾ ನಿಷೇಧದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಬೃಹತ್ ನಕಲಿ ಅಡಿಕೆ ಜಾಲ ಪತ್ತೆಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಮುಳಬಾಗಿಲು ತಾಲೂಕಿನ ವೈದ್ಯಾಧಿಕಾರಿ ಡಾ. ಸುಗುಣಾ ನೇತೃತ್ವದ ಅಧಿಕಾರಿಗಳ ತಂಡವು ನಂಗಲಿ ಚೆಕ್‌ಪೋಸ್ಟ್ ಬಳಿ, ಕೋಲ್ಕತ್ತಾ ಮೂಲದ ಮಹಾರಾಜ ಕ್ಯಾರೇಜರ್ ಪ್ರೈವೇಟ್ ಲಿ. ಕಂಪೆನಿಗೆ ಸೇರಿದ್ದ ಕಂಟೇನರ್‌ನಲ್ಲಿದ್ದ 96 ಮೂಟೆಗಳಷ್ಟು ನಕಲಿ ಅಡಿಕೆಯನ್ನು ಸೀಜ್ ಮಾಡಿದೆ. ಇನ್ನು, ಆ ಕಂಟೇನರ್‌ನಲ್ಲಿ ನೀಲಿ, ಕೆಂಪು ಮತ್ತು ಸಾಮಾನ್ಯ ಬಣ್ಣದ ಅಡಿಕೆಗಳು ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇವುಗಳಲ್ಲಿ ಭಾರಿ ಪ್ರಮಾಣದ ರಾಸಾಯನಿಕ ಮತ್ತು ಕೃತಕ ಬಣ್ಣಗಳ ಕಲಬೆರಕೆ ಇರುವುದು ಪತ್ತೆಯಾಗಿದೆ. ಜೊತೆಗೆ, ನಂಗಲಿ ಪೊಲೀಸರು ನಕಲಿ ಅಡಕೆ ಸಾಗಿಸುತ್ತಿದ್ದ ಕಂಟೇನರ್ ಚಾಲಕ ರಾಜ ಬಲ್ಲಾ ಪ್ರಸಾದ್ ಮತ್ತು ಕ್ಲೀನರ್‌ನನ್ನು ತಕ್ಷಣವೇ ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಸಿಂಥೆಟಿಕ್ ಅಡಿಕೆಯು ಅತ್ಯಂತ ಅಪಾಯಕಾರಿ ರಾಸಾಯನಿಕಗಳಿಂದ ಕೂಡಿದ್ದು, ಇದು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಅದರಂತೆ, ವಶಪಡಿಸಿಕೊಂಡಿರುವ ಅಡಿಕೆಯ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಸಿಂಥೆಟಿಕ್ ಅಡಿಕೆ ಎಂದರೇನು?
ಸಾಂಪ್ರದಾಯಿಕವಾಗಿ ಅಡಿಕೆಯನ್ನು ಸಂಸ್ಕರಿಸಿ ಕಡುಗೆಂಪು ಬಣ್ಣಕ್ಕೆ ತರಲಾಗುತ್ತದೆ. ಆದರೆ, ಈ ಸಿಂಥೆಟಿಕ್ ಅಡಿಕೆಯನ್ನು ತಯಾರಿಸಲು ತಾಳೆ ಬೀಜ, ಮರದ ರೆಂಬೆಗಳು, ಕಾಂಡದ ತಿರುಳುಗಳು ಹಾಗೂ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ, ಅವುಗಳಿಗೆ ಆಕರ್ಷಕ ಕೃತಕ ಬಣ್ಣಗಳನ್ನು (ಕೆಂಪು, ನೀಲಿ, ಹಳದಿ) ಬೆರೆಸಲಾಗುತ್ತದೆ.
ಇದರಿಂದಾಗುವ ಅಪಾಯಗಳೇನು?
ಆರೋಗ್ಯಕ್ಕೆ ಮಾರಕ: ಈ ನಕಲಿ ಅಡಿಕೆಗಳು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ನೇರ ಕಾರಣವಾಗುತ್ತವೆ.
ಬೆಳೆಗಾರರಿಗೆ ಆರ್ಥಿಕ ಹೊಡೆತ: ಅಗ್ಗದ ಬೆಲೆಯ ಪಾನ್ ಮಸಾಲಾ, ಗುಟ್ಕಾ ಹಾಗೂ ಸುಪಾರಿಗಳಲ್ಲಿ ನೈಜ ಅಡಕೆಯ ಬದಲಾಗಿ ಈ ಸಿಂಥೆಟಿಕ್ ಅಡಿಕೆಯನ್ನು ಬಳಸುವುದರಿಂದ ಸ್ಥಳೀಯವಾಗಿ ಕಷ್ಟಪಟ್ಟು ಬೆಳೆದ ಅಡಿಕೆಗೆ ಸೂಕ್ತ ಬೆಲೆ ಸಿಗದೆ ಮಾರುಕಟ್ಟೆ ಕುಸಿಯುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



