ಬಿಜೆಪಿ ಮಾಜಿ ಶಾಸಕನಿಗೆ ಗಣಿ ಇಲಾಖೆ ಬಿಗ್ ಶಾಕ್: ಅಕ್ರಮ ಗಣಿಗಾರಿಕೆಗೆ ಬರೋಬ್ಬರಿ ₹3.43 ಕೋಟಿ ದಂಡ
ಕಲ್ಲು ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಾವೇರಿ ಜಿಲ್ಲಾ ಬಿಜೆಪಿ ಘಟಕದ ಹಾಲಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ₹3.43 ಕೋಟಿ ಭಾರಿ ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಬ್ಯಾಡಗಿ (ಹಾವೇರಿ): ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಇತ್ತೀಚೆಗೆ ರಾಜ್ಯಾದ್ಯಂತ ನಿಯಮ ಉಲ್ಲಂಘಿಸಿದ ಕಲ್ಲು ಕ್ವಾರಿಗಳ ವಿರುದ್ಧ ಭಾರಿ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಅದರಂತೆ, ನಿನ್ನೆ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ್ದ ಆರೋಪದಡಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸುಮಾರು ₹3 ಕೋಟಿ ದಂಡ ವಿಧಿಸಲಾಗಿತ್ತು. ಇದರ ಬೆನಲ್ಲೇ, ಇಂದು ಕಲ್ಲು ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ₹3.43 ಕೋಟಿ ಭಾರಿ ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ಸ್ ಸೆಂಟರ್ (KSRSAC) ಇತ್ತೀಚೆಗೆ ಹಾವೇರಿ ಜಿಲ್ಲೆಯಾದ್ಯಂತ ಕಲ್ಲು ಕ್ವಾರಿಗಳ ಮೇಲೆ ನಡೆಸಿದ ತಾಂತ್ರಿಕ ಡ್ರೋನ್ ಸಮೀಕ್ಷೆಯ ಆಧಾರದ ಮೇಲೆ, ಸುಮಾರು 46ಕ್ಕೂ ಹೆಚ್ಚು ಕ್ವಾರಿ ಮಾಲೀಕರಿಗೆ ಒಟ್ಟು ₹26.1 ಕೋಟಿಗೂ ಅಧಿಕ ದಂಡ ವಿಧಿಸಲಾಗಿದ್ದು, 6 ತಿಂಗಳ ಒಳಗಾಗಿ 3 ಕಂತುಗಳಲ್ಲಿ ದಂಡ ಪಾವತಿಸಲು ಗಡುವು ನೀಡಲಾಗಿದೆ. ಅದರಂತೆ, ವಿರೂಪಾಕ್ಷಪ್ಪ ಬಳ್ಳಾರಿ ಅವರು ತಮಗೆ ಮಂಜೂರಾಗಿದ್ದ ನಿಗದಿತ ಕಲ್ಲು ಗಣಿಗಾರಿಕೆ ವ್ಯಾಪ್ತಿಯನ್ನು ಮೀರಿ, ನೆರೆಹೊರೆಯ ಜಮೀನನ್ನು ಒತ್ತುವರಿ ಮಾಡಿಕೊಂಡು ಕಾನೂನುಬಾಹಿರವಾಗಿ ಹೆಚ್ಚುವರಿ ಕಲ್ಲು ಗಣಿಗಾರಿಕೆ ನಡೆಸಿರುವುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಹಾಗಾಗಿ, ಗಣಿ ಇಲಾಖೆಯು ₹3.43 ಕೋಟಿ ಭಾರಿ ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದೆ.
ವಿರೂಪಾಕ್ಷಪ್ಪ ಬಳ್ಳಾರಿ ಅವರು ವಿ.ಆರ್. ಬಳ್ಳಾರಿ ಎಂಬ ಹೆಸರಿನಲ್ಲಿ ಎರಡು ಕಡೆಗಳಲ್ಲಿ ಕ್ವಾರಿ ನಡೆಸಲು ಗುತ್ತಿಗೆದಾರರಾಗಿ ಪರವಾನಗಿ ಪಡೆದುಕೊಂಡಿದ್ದರು. ಆದರೆ ನಿಗದಿತ ಷರತ್ತುಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸಿದ್ದರಿಂದ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಅಂದರೆ, ಅನುಮತಿ ನೀಡಿದ್ದ ಪ್ರಮಾಣಕ್ಕಿಂತ ಬರೋಬ್ಬರಿ 3,84,161 ಟನ್ ಹೆಚ್ಚುವರಿ ಕಲ್ಲನ್ನು ಅಕ್ರಮವಾಗಿ ಹೊರತೆಗೆದು ಸಾಗಾಣಿಕೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಅಷ್ಟೇ ಅಲ್ಲದೆ, ಗುತ್ತಿಗೆ ನೀಡಲಾಗಿದ್ದ ವ್ಯಾಪ್ತಿಯನ್ನು ಮೀರಿ ಅಕ್ಕಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಂಡು 53,410 ಟನ್ ಕಲ್ಲನ್ನು ತೆಗೆಯಲಾಗಿದೆ.
ಏತನ್ಮಧ್ಯೆ, ಕೇವಲ ವಿರೂಪಾಕ್ಷಪ್ಪ ಬಳ್ಳಾರಿ ಮಾತ್ರವಲ್ಲದೆ ಅವರ ಸಹೋದರ ಎಸ್.ಆರ್. ಬಳ್ಳಾರಿ ಕೂಡ ನಿಯಮ ಮೀರಿ ಗಣಿಗಾರಿಕೆ ನಡೆಸಿದ್ದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೂ 1.23 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಅವರು 1,76,313 ಟನ್ ಕಲ್ಲನ್ನು ಹೆಚ್ಚುವರಿಯಾಗಿ ಹಾಗೂ 50,401 ಟನ್ ಕಲ್ಲನ್ನು ಒತ್ತುವರಿ ಜಾಗದಿಂದ ಹೊರತೆಗೆದಿದ್ದಾರೆ ಎಂದು ಗಣಿ ಇಲಾಖೆಯ ಮೂಲಗಳು ದೃಢಪಡಿಸಿವೆ.
ಮುಂದುವರೆದು, ಇದೇ ಪರಿಶೀಲನೆಯಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ ಅವರ ಸಹೋದರ ಮತ್ತು ಮಗನಿಗೆ ಸೇರಿದ ಕ್ವಾರಿಯಲ್ಲೂ ಅಕ್ರಮ ಪತ್ತೆಯಾಗಿದ್ದು, ₹50 ಲಕ್ಷ ದಂಡ ವಿಧಿಸಲಾಗಿದೆ. ಮತ್ತೊಂದೆಡೆ, ಈ ಭಾರಿ ದಂಡದ ಕ್ರಮಗಳನ್ನು ವಿರೋಧಿಸಿ ರಾಜ್ಯದ ಕಲ್ಲು ಕ್ವಾರಿ ಮತ್ತು ಕ್ರಷರ್ ಮಾಲೀಕರ ಸಂಘವು ಸರ್ಕಾರದ ಕ್ರಮವು "ಅವೈಜ್ಞಾನಿಕ" ಎಂದು ಆರೋಪಿಸಿ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಕರೆ ನೀಡಿದೆ.
ಹಾಗಾದ್ರೆ, ದಂಡದ ಲೆಕ್ಕಾಚಾರದ ನಿಯಮವೇನು?
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಪರವಾನಗಿ ಇರುವ ಜಾಗದಲ್ಲಿ ಹೆಚ್ಚುವರಿ ಗಣಿಗಾರಿಕೆ ನಡೆಸಿದ್ದರೆ ಪ್ರತಿ ಟನ್ಗೆ ₹70 ಹಾಗೂ ಒತ್ತುವರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದರೆ ದುಪ್ಪಟ್ಟು ಅಂದರೆ ಪ್ರತಿ ಟನ್ಗೆ ₹140 ರಾಯಲ್ಟಿ ದಂಡವನ್ನು ವಿಧಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



