ರಾಜ್ಯ

ಪ್ರಧಾನಿ ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ: ಬೆಂಗಳೂರಿಗೆ ದೌಡಾಯಿಸಿದ NIA; ಓರ್ವ ಆರೋಪಿಯ ಬಂಧನ!

ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯು ಬಳಸಬೇಕಿದ್ದ ಕಗ್ಗಲೀಪುರದ ತಾತಗುಣಿಯ ರಸ್ತೆ ಪಕ್ಕದಲ್ಲೇ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದು, ರಾಷ್ಟ್ರೀಯ ತನಿಖಾ ದಳ ಅಲ್ಲಿಗೆ ತೆರಳಿದೆ.

ಪ್ರಧಾನಿ ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ: ಬೆಂಗಳೂರಿಗೆ ದೌಡಾಯಿಸಿದ NIA; ಓರ್ವ ಆರೋಪಿಯ ಬಂಧನ!
ಎನ್ ಐಎ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಸಂಚರಿಸುತ್ತಿದ್ದ ಮಾರ್ಗದಲ್ಲಿ ಎರಡು ಜೆಲೆಟಿನ್ ಕಡ್ಡಿ ಪತ್ತೆಯಾದ ಬೆಂಗಳೂರಿನ ಹೊರವಲಯದಲ್ಲಿರುವ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ (NIA) ತಂಡವೊಂದು ತೆರಳಿ ಪರಿಶೀಲನೆ ನಡೆಸಿದೆ.

ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯು ಬಳಸಬೇಕಿದ್ದ ಕಗ್ಗಲೀಪುರದ ತಾತಗುಣಿಯ ರಸ್ತೆ ಪಕ್ಕದಲ್ಲೇ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದು, ರಾಷ್ಟ್ರೀಯ ತನಿಖಾ ದಳ ಅಲ್ಲಿಗೆ ತೆರಳಿದೆ. ಸ್ಥಳೀಯ ಪೊಲೀಸರು NIA ತನಿಖೆಗೆ ಸಹಾಯ ನೆರವಾಗುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ತಿಳಿಸಿದೆ.

ಎರಡು ಜೆಲೆಟಿನ್ ಕಡ್ಡಿಗಳಿದ್ದ ಪ್ಯಾಕೇಟ್ ಭಾನುವಾರ ಬೆಳಿಗ್ಗೆ ಕಗ್ಗಲಿಪುರದ ತಥಗುಣಿ ಬಳಿಯ ನೈಸ್ ರಸ್ತೆ ಜಂಕ್ಷನ್‌ನಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಪ್ರಧಾನಿ ಬರುವ ಮುಂಚೆಯೇ ಜಿಲೆಟಿನ್ ಕಡ್ಡಿ ಪತ್ತೆಯಾಗಿತ್ತು.

ಈ ಮಧ್ಯೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ತಾಂತ್ರಿಕ ಕಣ್ಗಾವಲು ಬಳಸಿ ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ತಿಳಿಸಿದರು.

ಭಾನುವಾರ ಬೆಳಿಗ್ಗೆ 8.29 ರ ಸುಮಾರಿಗೆ, ಅಪರಿಚಿತ ವ್ಯಕ್ತಿಯೊಬ್ಬ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದು, ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಗದಿಯಾಗಿದ್ದ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸ್ಥಳದ ಬಳಿ ಬಾಂಬ್ ಇಡುವುದಾಗಿ ಹೇಳಿಕೊಂಡಿದ್ದಾನೆ. ಕರೆ ಮಾಡಿದ ವ್ಯಕ್ತಿ ಸ್ಫೋಟಕ ಸಾಧನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ, ತಕ್ಷಣವೇ ಕೋರಮಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ತನಿಖೆ ವೇಳೆ ಕರೆ ಕೋರಮಂಗಲದ ಕೆಎಚ್‌ಬಿ ಕಾಲೋನಿಯಿಂದ ಬಂದಿರುವುದು ಪೊಲೀಸರಿಗೆ ಕಂಡುಬಂದಿದೆ ಎಂದರು.

ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಭಾನುವಾರ ಬೆಳಿಗ್ಗೆ ಬೆದರಿಕೆ ಕರೆ ಬಂದಿತು. ಪ್ರಧಾನಿ ಭೇಟಿಗಾಗಿ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾದ ಪ್ರದೇಶದಲ್ಲಿ ಸ್ಫೋಟಕ ಸಾಧನ ಇಟ್ಟಿರುವುದಾಗಿ ಕರೆ ಮಾಡಿದ ವ್ಯಕ್ತಿ ಹೇಳಿದ್ದ.ಬೆದರಿಕೆ ಕರೆ ಮಾಡಿದ ನಂತರ, ಆರೋಪಿ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ. ಆದಾಗ್ಯೂ, ಪೊಲೀಸ್ ತಂಡಗಳು ತಾಂತ್ರಿಕ ಕಣ್ಗಾವಲು ಬಳಸಿ ಅವನ ಸ್ಥಳವನ್ನು ಪತ್ತೆಹಚ್ಚಿ ಒಂದು ಗಂಟೆಯೊಳಗೆ ಆತನನ್ನು ಬಂಧಿಸಿವೆ ಎಂದು ಅವರು ಹೇಳಿದರು.

ಆಗ್ನೇಯ ವಿಭಾಗ, ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಮತ್ತು ಇತರ ಪೊಲೀಸ್ ಘಟಕಗಳ ಸಿಬ್ಬಂದಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸುಳ್ಳು ಮಾಹಿತಿ ನೀಡುವುದು, ಬೆದರಿಕೆ ಹಾಕುವುದು ಮತ್ತು ವಂಚನೆ ಕರೆ ಮಾಡುವುದು ಗಂಭೀರ ಅಪರಾಧಗಳಾಗಿದ್ದು, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

ಆರೋಪಿಯು ತನ್ನ ಮೊಬೈಲ್ ಫೋನ್ ಬಳಸಿ ವಿವಿಧ ಸ್ಥಳಗಳಿಗೆ ಅಂತಹ ಕರೆಗಳನ್ನು ಮಾಡುವ ಮತ್ತು ಬೆದರಿಕೆ ಸಂದೇಶ ಕಳುಹಿಸುವ ಅಭ್ಯಾಸವನ್ನು ಹೊಂದಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕೃತ್ಯದ ಹಿಂದಿನ ಉದ್ದೇಶವನ್ನು ಪೊಲೀಸರು ಸಹ ತನಿಖೆ ನಡೆಸುತ್ತಿದ್ದರು. ಸದ್ಯಕ್ಕೆ ಇದು ವಂಚನೆ ಕರೆ ಎಂದು ತೋರುತ್ತದೆ ಎಂದು ಅವರು ಹೇಳಿದರು.

ಆರೋಪಿಯ ಮಾನಸಿಕ ಆರೋಗ್ಯ ಸ್ಥಿತಿಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, ವೈದ್ಯರು ಆತನ್ನು ಪರೀಕ್ಷಿಸುತ್ತಾರೆ ಮತ್ತು ಈ ಹಿಂದೆ ಆತ ಚಿಕಿತ್ಸೆ ಪಡೆದಿದ್ದ ಎಂಬುದನ್ನು ಪೊಲೀಸರು ದಾಖಲೆಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಆರೋಪಿ ತನಿಖೆಯ ಭಾಗವಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದರು.

ಬೆದರಿಕೆ ಕರೆ ಭದ್ರತಾ ಸಂಸ್ಥೆಗಳನ್ನು ಆಲರ್ಟ್ ಮಾಡಿದ್ದು, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಮಾರ್ಗದಲ್ಲಿ ತಪಾಸಣೆ ತೀವ್ರಗೊಳಿಸಿದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.