ರಾಜ್ಯದಲ್ಲಿ ಅಧಿಕ ತಾಪಮಾನ; ಜನತೆ ತತ್ತರ: ಹೀಟ್ ಸ್ಟ್ರೋಕ್ ಪ್ರಕರಣಗಳ ಸಂಖ್ಯೆ ಹೆಚ್ಚಳ..!
ಹೀಟ್ ಸ್ಟ್ರೋಕ್ ಸಂಬಂಧಿತ ಕಾಯಿಲೆಗಳು ನಿಧಾನವಾಗಿ ಆರಂಭವಾಗಿ ತೀವ್ರ ಹಂತಕ್ಕೆ ತಲುಪುವ ಸಾಧ್ಯತೆ ಹೆಚ್ಚು. ಪ್ರಾರಂಭದಲ್ಲಿ ತಲೆನೋವು, ಕೀಲು ನೋವು, ದೌರ್ಬಲ್ಯ, ಅಸ್ವಸ್ಥತೆ, ಆತಂಕ ಮತ್ತು ತಲೆಸುತ್ತು ಕಾಣಿಸಿಕೊಳ್ಳುತ್ತವೆ.

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ತಾಪಮಾನ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆ, ಬಿಸಿಗಾಳಿ (ಹೀಟ್ ವೇವ್) ಸಂಬಂಧಿತ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಹಾಗೂ ಸಾರ್ವಜನಿಕ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೆಲವೆಡೆ ಅಚಾನಕ್ ಮಳೆಯು ತಾತ್ಕಾಲಿಕ ಶಮನ ನೀಡಿದರೂ, ಒಟ್ಟಾರೆ ತಾಪಮಾನ ಇನ್ನೂ ಕಡಿಮೆಯಾಗಿಲ್ಲ. ಇದರ ಪರಿಣಾಮವಾಗಿ ಆಸ್ಪತ್ರೆಗಳಲ್ಲಿ ಡಿಹೈಡ್ರೇಶನ್, ತಲೆನೋವು, ತಲೆಸುತ್ತು, ವಾಂತಿ, ದೌರ್ಬಲ್ಯ ಮತ್ತು ಹೀಟ್ ಸ್ಟ್ರೋಕ್ ಸಮಸ್ಯೆಯಿಂದ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ವೈದ್ಯರ ಪ್ರಕಾರ, ಹೀಟ್ ಸ್ಟ್ರೋಕ್ ಸಂಬಂಧಿತ ಕಾಯಿಲೆಗಳು ನಿಧಾನವಾಗಿ ಆರಂಭವಾಗಿ ತೀವ್ರ ಹಂತಕ್ಕೆ ತಲುಪುವ ಸಾಧ್ಯತೆ ಹೆಚ್ಚು. ಪ್ರಾರಂಭದಲ್ಲಿ ತಲೆನೋವು, ಕೀಲು ನೋವು, ದೌರ್ಬಲ್ಯ, ಅಸ್ವಸ್ಥತೆ, ಆತಂಕ ಮತ್ತು ತಲೆಸುತ್ತು ಕಾಣಿಸಿಕೊಳ್ಳುತ್ತವೆ.
ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ದೇಹದ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೀರಬಹುದು. ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ಜೀವಕ್ಕೆ ಅಪಾಯಕಾರಿಯಾದ ತುರ್ತು ಪರಿಸ್ಥಿತಿ ಎದುರು ಮಾಡುತ್ತದೆ.
ತಜ್ಞರ ಹೇಳಿಕೆಯಂತೆ, ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಮೊದಲು ಮೆದುಳಿನ ಮೇಲೆ ಪರಿಣಾಮ ಬೀಳುತ್ತದೆ. ಇದರಿಂದ ಗೊಂದಲ, ಅಸ್ವಸ್ಥತೆ, ಅಸ್ಪಷ್ಟ ಮಾತು, ಶಕ್ತಿ ಹೀನತೆ, ಗೊಂದಲ ಮತ್ತು ಗಂಭೀರ ಸಂದರ್ಭಗಳಲ್ಲಿ ಕೋಮಾಗೂ ಜಾರಬಹುದು. ಇದರಿಂದ ಹೃದಯ ಮತ್ತು ಮೂತ್ರಪಿಂಡಗಳ ಮೇಲೂ ಒತ್ತಡ ಉಂಟಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ರಾಜ್ಯದ ಹಲವು ಭಾಗಗಳ ಆಸ್ಪತ್ರೆಗಳಲ್ಲಿ ಈಗಾಗಲೇ ನಿರ್ಜಲೀಕರಣ, ತೀವ್ರ ತಲೆನೋವು, ತಲೆತಿರುಗುವಿಕೆ, ವಾಂತಿ ಮತ್ತು ದೌರ್ಬಲ್ಯದಂತಹ ರೋಗ ಲಕ್ಷಣಗಳೊಂದಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಅಶ್ವಿನ್ ಕುಲಕರ್ಣಿ ಹೇಳಿದ್ದಾರೆ.
ಮಕ್ಕಳಿಗೆ ಹೆಚ್ಚಿದ ಅಪಾಯ
ತಾಪಮಾನದ ಅಪಾಯಗಳಿಗೆ ಹೆಚ್ಚು ಒಳಗಾಗುವುದು ಮಕ್ಕಳೇ. ಏಕೆಂದರೆ ಅವರಲ್ಲಿ ಬಹಳ ಬೇಗ ನಿರ್ಲಜಲೀಕರಣ ಸಮಸ್ಯೆ ಎದುರಾಗುತ್ತದೆ. ದಾಹವಾಗುವುದು ತಕ್ಷಣ ಮಕ್ಕಳಿಗೆ ತಿಳಿಯುವುದಿಲ್ಲಇದರಿಂದ ಡಿಹೈಡ್ರೇಶನ್ ತೀವ್ರಗೊಳ್ಳುತ್ತದೆ. ಮಕ್ಕಳಲ್ಲಿ ದೇಹನೋವು, ದೌರ್ಬಲ್ಯ, ತಲೆನೋವು ಮೊದಲ ಸೂಚನೆಗಳಾಗಿದ್ದು, ಪಾಲಕರು ಮಕ್ಕಳನ್ನು ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಆಟವಾಡದಂತೆ ನೋಡಿಕೊಳ್ಳಬೇಕು. ದಿನಪೂರ್ತಿ ನೀರು, ಮಜ್ಜಿಗೆ, ಎಳನೀರು ಮತ್ತು ಹಣ್ಣಿನ ರಸಗಳನ್ನು ನೀಡುವುದು ಅತ್ಯಗತ್ಯ.
ವೃದ್ಧರು-ಗರ್ಭಿಣಿಯರು ಕೂಡ ಅಪಾಯದಲ್ಲಿ
ವೃದ್ಧರು ಹಾಗೂ ಗರ್ಭಿಣಿಯರು ಕೂಡ ತಾಪಮಾನಕ್ಕೆ ಸಂಬಂಧಿಸಿ ಅಪಾಯಗಳಿಗೆ ಹೆಚ್ಚು ಒಳಗಾಗುತ್ತಾರೆ. ಅವರ ದೇಹದಲ್ಲಿ ನೀರಿನ ನಷ್ಟ ವೇಗವಾಗಿ ಆಗುತ್ತದೆ. ತಾಪಮಾನ ಸಹಿಸುವ ಶಕ್ತಿ ಕಡಿಮೆ ಇರುತ್ತದೆ. ಜೊತೆಗೆ ಇತರ ಆರೋಗ್ಯ ಸಮಸ್ಯೆಗಳು ಇದ್ದರೆ, ಪರಿಣಾಮ ಮತ್ತಷ್ಟು ಗಂಭೀರವಾಗಬಹುದು.
ಹೊರಾಂಗಣ ಕಾರ್ಮಿಕರಿಗೆ ಸಂಕಷ್ಟ
ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಡೆಲಿವರಿ ಉದ್ಯೋಗಿಗಳು ಸೇರಿದಂತೆ ಹೊರಾಂಗಣದಲ್ಲಿ ಕೆಲಸ ಮಾಡುವವರು ಅತ್ಯಂತ ಅಪಾಯದಲ್ಲಿದ್ದಾರೆ.
ಇವರಿಗೆ ಮಧ್ಯಾಹ್ನದ ಬಿಸಿಲು ತಪ್ಪಿಸುವ ಅವಕಾಶ ಇರುವುದಿಲ್ಲ. ಸರ್ಕಾರವೂ ಕುಡಿಯುವ ನೀರು, ನೆರಳು ಹಾಗೂ ವಿಶ್ರಾಂತಿ ಒದಗಿಸಲು ಸಲಹೆ ನೀಡಿದ್ದರೂ, ಈ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುತ್ತಿಲ್ಲ ಎನ್ನಲಾಗಿದೆ.
ತಜ್ಞರು ಹೇಳುವಂತೆ, ಹಲವಾರು ಕಾರ್ಮಿಕರು ದಿನಕ್ಕೆ 6–7 ಗಂಟೆಗಳ ಕಾಲ ತೀವ್ರ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೆರಳು, ವಿಶ್ರಾಂತಿ ಅಥವಾ ಆರೋಗ್ಯ ಭದ್ರತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದ್ದು, ಹೀಟ್ ಸ್ಟ್ರೋಕ್ ಒಳಗಾಗುತ್ತಿದ್ದರೂ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಇದು ಹೊರಾಂಗಣ ಕಾರ್ಮಿಕರ ಮೇಲಿನ ಪರಿಣಾಮವನ್ನು ನಿರ್ಣಯಿಸಲು ಕಷ್ಟಕರವಾಗಿಸುತ್ತದೆ ಎಂದು ಹೀಟ್‌ವಾಚ್‌ನ ಸಂಸ್ಥಾಪಕಿ ಅಪೇಕ್ಷಿತಾ ವರ್ಷ್ನಿ ಅವರು ಹೇಳಿದ್ದಾರೆ,
ಇದೇ ವೇಳೆ ಉದ್ಯೋಗ ಸಂಬಂಧಿತ ಆರೋಗ್ಯ ಅಪಾಯವಾಗಿ ಗುರುತಿಸಿ, ಎಲ್ಲಾ ವರ್ಗದ ಕಾರ್ಮಿಕರಿಗೆ ಕಡ್ಡಾಯವಾಗಿ ನೀರು, ನೆರಳು ಮತ್ತು ವಿಶ್ರಾಂತಿ ಸೌಲಭ್ಯ ಒದಗಿಸುವಂತೆ ಕಾನೂನುಬದ್ಧ ಕ್ರಮಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಆಹಾರ ಮತ್ತು ನೀರಿನಿಂದ ಹರಡುವ ರೋಗಗಳು ಹೆಚ್ಚಳ
ತಾಪಮಾನ ಹೆಚ್ಚಳ ಸಮಯದಲ್ಲಿ ಆಹಾರ ಬೇಗ ಹಾಳಾಗುವುದರಿಂದ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಗ್ಯಾಸ್ಟ್ರೋಎಂಟರೈಟಿಸ್ ಸೇರಿದಂತೆ ಆಹಾರ-ನೀರಿನಿಂದ ಹರಡುವ ಸೋಂಕುಗಳೂ ಹೆಚ್ಚುತ್ತಿವೆ. ಇದು ವಿಶೇಷವಾಗಿ ಮಕ್ಕಳ ಮತ್ತು ವೃದ್ಧರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ತಜ್ಞರ ಸಲಹೆಗಳು...
ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು
ಮಧ್ಯಾಹ್ನ 11ರಿಂದ 3ರೊಳಗಿನ ತೀವ್ರ ಬಿಸಿಲನ್ನು ತಪ್ಪಿಸಿ
ಹಗುರ ಬಣ್ಣದ, ಸಡಿಲ ಬಟ್ಟೆ ಧರಿಸಿ.
ಮಜ್ಜಿಗೆ, ಎಳನೀರು, ಹಣ್ಣು ರಸಗಳನ್ನು ಸೇವಿಸಿ.
ಹೊರಾಂಗಣದಲ್ಲಿ ಕೆಲಸ ಮಾಡುವವರು ನಿಯಮಿತವಾಗಿ ವಿಶ್ರಾಂತಿ ಪಡೆಯಬೇಕು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



