ಬೆಂಗಳೂರಲ್ಲಿ ರಣ ಬಿಸಿಲು: ಡಿಹೈಡ್ರೇಷನ್-ಹೀಟ್ ಸ್ಟ್ರೋಕ್ ಭೀತಿ; ಮಕ್ಕಳು-ವೃದ್ಧರು ಹೆಚ್ಚು ಅಪಾಯದಲ್ಲಿ..!
ಈ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿದ್ದು, ವಿಶೇಷವಾಗಿ ಡಿಹೈಡ್ರೇಷನ್, ಹೀಟ್ ಎಕ್ಸಾಶನ್ ಮತ್ತು ಹೀಟ್ ಸ್ಟ್ರೋಕ್ ಪ್ರಕರಣಗಳು ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ.

ಬೆಂಗಳೂರು: ನಗರದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಅದರ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳಲಾರಂಭಿಸಿವೆ. ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ವೈದ್ಯರು ಗಂಭೀರ ಎಚ್ಚರಿಕೆ ನೀಡಿದ್ದು, ಮಕ್ಕಳು-ವೃದ್ಧರು, ಗರ್ಭಿಣಿಯರು ಹೆಚ್ಚು ಅಪಾಯದಲ್ಲಿದ್ದು, ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದ್ದಾರೆ.
ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಈ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿದ್ದು, ವಿಶೇಷವಾಗಿ ಡಿಹೈಡ್ರೇಷನ್, ಹೀಟ್ ಎಕ್ಸಾಶನ್ ಮತ್ತು ಹೀಟ್ ಸ್ಟ್ರೋಕ್ ಪ್ರಕರಣಗಳು ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಉಷ್ಣತೆ ಹೆಚ್ಚಾದಂತೆ ದೇಹದ ನೀರಿನ ಪ್ರಮಾಣ ವೇಗವಾಗಿ ಕಡಿಮೆಯಾಗುತ್ತದೆ, ಇದರಿಂದ ದೇಹದ ಸಾಮಾನ್ಯ ಕಾರ್ಯವಿಧಾನಕ್ಕೆ ಅಡ್ಡಿಯಾಗುತ್ತದೆ.
ಮಕ್ಕಳು ಮತ್ತು ವೃದ್ಧರ ದೇಹಗಳಲ್ಲಿ ತಾಪಮಾನವನ್ನು ನಿಯಂತ್ರಿಸುವ ಸಾಮರ್ಥ್ಯ ಕಡಿಮೆ ಇರುವುದರಿಂದ ಅವರು ಬೇಗನೆ ಬಿಸಿಲಿನ ಪರಿಣಾಮಕ್ಕೆ ಒಳಗಾಗುತ್ತಾರೆ. 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಮತ್ತು ಮಧುಮೇಹ, ಹೃದಯ ಸಮಸ್ಯೆಗಳಂತಹ ದೀರ್ಘಕಾಲದ ಕಾಯಿಲೆ ಹೊಂದಿರುವವರು ಹೆಚ್ಚಾಗಿ ಎಚ್ಚರಿಕೆ ವಹಿಸಬೇಕು.
ಮಧ್ಯಾಹ್ನ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಿಸಿಲಿನ ತೀವ್ರತೆ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ಅವಧಿಯಲ್ಲಿ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಬೇಕು. ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ, ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ಹೇಳಿದ್ದಾರೆ.
ಸಕ್ರಾ ವರ್ಲ್ಡ್ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ. ಎಂ. ರವಿ ಕುಮಾರ್ ಅವರು ಮಾತನಾಡಿ, ದೇಹಕ್ಕೆ ಕೇವಲ ನೀರು ಕುಡಿದರೆ ಸಾಕಾಗುವುದಿಲ್ಲ. ಬೆವರು ಮೂಲಕ ದೇಹದಿಂದ ಹೊರ ಹೋಗುವ ಉಪ್ಪು ಮತ್ತು ಖನಿಜಾಂಶಗಳನ್ನು (ಎಲೆಕ್ಟ್ರೋಲೈಟ್ಸ್) ಕೂಡ ಪೂರೈಸಬೇಕು. ಎಳನೀರು, ಮಜ್ಜಿಗೆ, ನಿಂಬೆ ಶರಬತ್ತು ಮುಂತಾದವು ದೇಹವನ್ನು ತಂಪಾಗಿಡುವುದರ ಜೊತೆಗೆ ಅಗತ್ಯ ಪೋಷಕಾಂಶಗಳನ್ನು ಪೂರೈಸುತ್ತವೆ. ಇದರ ಜೊತೆಗೆ ದಿನಪೂರ್ತಿ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಆಸ್ಟರ್ ಸಿಎಂಐ ಆಸ್ಪತ್ರೆಯ ಡಾ. ಜಿ.ಎಂ. ಪ್ರಸಾದ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡಿಹೈಡ್ರೇಷನ್ ಜೊತೆಗೆ ಉಸಿರಾಟ ಸಂಬಂಧಿತ ಸಮಸ್ಯೆಗಳೂ ಹೆಚ್ಚಾಗಿವೆ. ಹೊರಗಿನ ಬಿಸಿಲಿನಿಂದ ತಕ್ಷಣವೇ ಏರ್‌ಕಂಡೀಷನ್ ಇರುವ ತಂಪಾದ ಸ್ಥಳಗಳಿಗೆ ಹೋಗುವಾಗ ದೇಹಕ್ಕೆ ತಕ್ಷಣದ ತಾಪಮಾನ ಬದಲಾವಣೆಯನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ಶೀತ, ಗಂಟಲು ಕೆರೆತ, ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಹಗುರವಾದ, ಗಾಳಿಯಾಡುವ ಕಾಟನ್ ಬಟ್ಟೆಗಳನ್ನು ಧರಿಸುವುದು ಮತ್ತು ಸಾಧ್ಯವಾದಷ್ಟು ನೆರಳಿನಲ್ಲಿ ಇರುವುದರಿಂದ ಈ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.
ಆಹಾರ ಪದ್ಧತಿಯೂ ಈ ಸಮಯದಲ್ಲಿ ಬಹಳ ಮುಖ್ಯವಾಗುತ್ತದೆ. ನೀರಿನ ಅಂಶ ಹೆಚ್ಚಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸುವುದು ದೇಹದ ಹೈಡ್ರೇಷನ್ ಕಾಪಾಡಲು ಸಹಾಯ ಮಾಡುತ್ತದೆ. ಸೌತೆಕಾಯಿ ಮತ್ತು ಕಿತ್ತಳೆ ಮುಂತಾದ ನೀರಿನಂಶವಿರುವ ಹಣ್ಣುಗಳನ್ನು ಸೇವಿಸುವುದು ಉತ್ತಮ ಆಯ್ಕೆಗಳಾಗಿವ. ಭಾರವಾದ, ಎಣ್ಣೆಯುಕ್ತ ಹಾಗೂ ಹೆಚ್ಚು ಪ್ರೋಟೀನ್ ಇರುವ ಆಹಾರಗಳನ್ನು ಬಿಸಿಲಿನ ಸಮಯದಲ್ಲಿ ತಗ್ಗಿಸುವುದು ಸೂಕ್ತ. ಮದ್ಯಪಾನ ಮತ್ತು ಕಾರ್ಬೊನೇಟೆಡ್ ಪಾನೀಯಗಳು ದೇಹದ ನೀರಿನ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡುವ ಸಾಧ್ಯತೆ ಇರುವುದರಿಂದ ಅವುಗಳನ್ನು ತಪ್ಪಿಸುವುದು ಒಳಿತು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಹೊರಾಂಗಣ ಕೆಲಸ ಮಾಡುವ ಗಿಗ್ ವರ್ಕರ್ಸ್, ಡೆಲಿವರಿ ಸಿಬ್ಬಂದಿ ಮತ್ತು ಕಟ್ಟಡ ಕಾರ್ಮಿಕರು ಈ ಪರಿಸ್ಥಿತಿಯಲ್ಲಿ ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ. ಅವರಿಗೆ ನಿರಂತರವಾಗಿ ನೀರು ಕುಡಿಯುವುದು, ಸಮಯಕ್ಕೆ ಸರಿಯಾಗಿ ವಿರಾಮ ತೆಗೆದುಕೊಳ್ಳುವುದು ಮತ್ತು ನೆರಳಿನಲ್ಲಿ ವಿಶ್ರಾಂತಿ ಪಡೆಯುವುದು ಅತ್ಯಂತ ಮುಖ್ಯ. ತೀವ್ರ ಬಿಸಿಲಿನಲ್ಲಿ ಕೆಲಸ ಮಾಡುವಾಗ ತಲೆ ಮುಚ್ಚಿಕೊಳ್ಳುವುದು, ಸನ್‌ಸ್ಕ್ರೀನ್ ಬಳಸುವುದು ಮತ್ತು ದೇಹವನ್ನು ತಂಪಾಗಿಡುವ ಕ್ರಮಗಳನ್ನು ಅನುಸರಿಸುವುದು ಅಗತ್ಯ. “ಲಕ್ಷ್ಯಕ್ಕಿಂತ ಜೀವ ಮುಖ್ಯ” ಎಂಬ ಸಂದೇಶವನ್ನು ವೈದ್ಯರು ಸ್ಪಷ್ಟವಾಗಿ ನೀಡಿದ್ದಾರೆ.
ಇದೇ ವೇಳೆ ಹೀಟ್ ಸ್ಟ್ರೋಕ್‌ನ ಲಕ್ಷಣಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿ ಎಂದು ಎಚ್ಚರಿಕೆ ನೀಡಿರುವ ವೈದ್ಯರು, ತಲೆ ಸುತ್ತು, ಗೊಂದಲ, ಅತಿಯಾದ ದಣಿವು, ಉಸಿರಾಟ ತೊಂದರೆ, ದೇಹದ ಉಷ್ಣತೆ 104°Fಕ್ಕಿಂತ ಹೆಚ್ಚಾಗುವುದು ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಬೇಕು. ಸಮಯಕ್ಕೆ ಚಿಕಿತ್ಸೆ ದೊರಕದಿದ್ದರೆ ಇದು ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



