ರಾಜ್ಯ

'ನನ್ನ ಇ-ಖಾತಾ' ಅಭಿಯಾನ: ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ; ಡಿ.ಕೆ ಶಿವಕುಮಾರ್

ಮೇ 16 ರಿಂದ ಪ್ರತಿ ಶನಿವಾರ ಸುಮಾರು 50 ಕಡೆಗಳಲ್ಲಿ ಓಪನ್ ಹೌಸ್ ಕೌಂಟರ್ ತೆರೆದು. 'ನಮ್ಮ ಇ ಖಾತಾ' ಆಂದೋಲನ ನಡೆಸಲಾಗುವುದು. ಜನರಿಗೆ ಭೂಮಿ ಗ್ಯಾರಂಟಿ ನೀಡಲಾಗುವುದು" ಎಂದೂ ಅವರು ಹೇಳಿದರು.

'ನನ್ನ ಇ-ಖಾತಾ' ಅಭಿಯಾನ: ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ; ಡಿ.ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
Published On :

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಜಿಎ) ವ್ಯಾಪ್ತಿಯಲ್ಲಿ ಈವರೆಗೂ 23 ಲಕ್ಷ ಖಾತಾಗಳನ್ನು ಬಿಡುಗಡೆ ಮಾಡಲಾಗಿದ್ದು, ದೇಶದಲ್ಲೇ ಇದೊಂದು ದಾಖಲೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯ ಎಲ್ಲಾ ಐದು ಪಾಲಿಕೆಗಳಲ್ಲಿ ಮೇ 16 ರಿಂದ ಪ್ರತಿ ಶನಿವಾರ ಸುಮಾರು 50 ಕಡೆಗಳಲ್ಲಿ ಓಪನ್ ಹೌಸ್ ಕೌಂಟರ್ ತೆರೆದು. 'ನಮ್ಮ ಇ ಖಾತಾ' ಆಂದೋಲನ ನಡೆಸಲಾಗುವುದು. ಜನರಿಗೆ ಭೂಮಿ ಗ್ಯಾರಂಟಿ ನೀಡಲಾಗುವುದು" ಎಂದೂ ಅವರು ಹೇಳಿದರು.

"ಪಾಲಿಕೆ ಕಚೇರಿಗಳಲ್ಲಿ ಜನಸಂದಣಿ ಉಂಟಾಗಬಹುದು ಎಂದು ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗುವುದು. ಪ್ರತಿ ವಾರ ಅಂದಾಜು 5 ಸಾವಿರ ಜನರ ದೂರುಗಳಿಗೆ ಪರಿಹಾರ ನೀಡಲಾಗುವುದು. ಪ್ರತಿ ಪಾಲಿಕೆಗಳಲ್ಲಿ 5-10 ಕೌಂಟರ್ ಗಳನ್ನು ತೆರೆಯಲಾಗುವುದು. ದಟ್ಟಣೆ ಇರುವ ಕಡೆ ಹೆಚ್ಚು ಕೌಂಟರ್ ಗಳು, ಕಡಿಮೆ ದಟ್ಟಣೆ ಇರುವ ಕಡೆ ಕಡಿಮೆ ಕೌಂಟರ್ ಗಳನ್ನು ತೆರೆಯಲಾಗುವುದು" ಎಂದು ಹೇಳಿದರು.

"ಕೌಂಟರ್ ಗಳ ಬಗ್ಗೆ ಜಾಹೀರಾತು, ಕಟೌಟ್, ವೆಬ್ ಸೈಟ್ ಸೇರಿದಂತೆ ಎಲ್ಲಾ ಕಡೆ ಮಾಹಿತಿ ನೀಡಲಾಗುವುದು. ದಾಖಲೆ ತಕರಾರು ಇರುವ ಕಡೆ, ಅನುಮಾನ ಇರುವ ಕಡೆ ಕಂದಾಯ ಅಧಿಕಾರಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಬಗೆಹರಿಸಲಾಗುವುದು" ಎಂದರು.

"ಫೋಟೋ, ಸ್ಕೆಚ್, ನಕ್ಷೆ, ಜಿಪಿಎಸ್ ಸೇರಿದಂತೆ ಭಾವಚಿತ್ರ ಎಲ್ಲವೂ ದಾಖಲೆಯಲ್ಲಿ ಇರುವುದು. ಆಧಾರ್ ಸೇರಿದಂತೆ ನಿಗದಿತ ಸಂಖ್ಯೆ ನೀಡಿದರೆ ಈ ದಾಖಲೆಗಳನ್ನು ಯಾರು ಬೇಕಾದರೂ ನೋಡಬಹುದು. ಕಂದಾಯ ಅಧಿಕಾರಿ, ಡೆಪ್ಯುಟಿ ಸೆಕ್ರೆಟರಿ, ಜಂಟಿ ಕಾರ್ಯದರ್ಶಿ ಇದರ ಜವಾಬ್ದಾರಿ ಹೊಂದಿರುತ್ತಾರೆ. ಎರಡನೇ, ನಾಲ್ಕನೇ ಶನಿವಾರ ಕೆಲಸ ಮಾಡುವ ಅಧಿಕಾರಿಗಳಿಗೆ ಪರ್ಯಾಯವಾಗಿ ಇನ್ನೊಂದು ದಿನ ರಜೆ ನೀಡಲಾಗುವುದು" ಎಂದರು.

"ಸ್ವಾಧೀನ ಪತ್ರ ಹೊಂದಿರುವ ಅಪಾರ್ಟ್ಮೆಂಟ್ ಗಳ ಖಾತೆಗಳನ್ನು ಸ್ವಯಂಚಾಲಿತವಾಗಿ ಮಾಡಿಕೊಡಲಾಗುವುದು. 10 ತಿಂಗಳಲ್ಲಿ ಆನ್ ಲೈನ್ ಮೂಲಕ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಮಾಡಿರುವುದು ಇಡೀ ದೇಶದಲ್ಲಿ ದಾಖಲೆ ಬರೆದಿದೆ. 37,480 ಫ್ಲಾಟ್ ಗಳಿಗೆ ಓಸಿ ನೀಡಲಾಗಿದೆ. ಇದಕ್ಕೆ ಬೆನ್ನೆಲುಬಾಗಿ ನಿಂತ ಎಲ್ಲಾ ಅಧಿಕಾರಿಗಳು, ಮನೀಶ್ ಮೌದ್ಗಿಲ್ ಅವರು, ಜಿಬಿಎ ಕಮಿಷನರ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ" ಎಂದರು.

"10 ಲಕ್ಷ ಜನರಿಗೆ ಈಗಾಗಲೇ ವಾಟ್ಸಪ್ ಮೂಲಕ ಖಾತೆಗಳ ಡಿಜಿಟಲ್‌ ಪ್ರತಿ ಕಳಿಸಲಾಗಿದೆ. ಮಿಕ್ಕವರಿಗೆ ಕಳಿಸಲಾಗುತ್ತದೆ. ಭೌತಿಕ ಪ್ರತಿಗಳನ್ನು ಮನೆಗಳಿಗೆ ಕಳಿಸಲಾಗುತ್ತದೆ. ನಮ್ಮ ಈ ಭೂಮಿ ಗ್ಯಾರಂಟಿ ಮೆಚ್ಚಿ ಕೇಂದ್ರ ಸರ್ಕಾರ ರಾಷ್ಟ್ರೀಯ ಇ ಆಡಳಿತ ಚಿನ್ನದ ಪ್ರಶಸ್ತಿ ನೀಡಿದೆ. ನಾವು ಇಂತಹ ದಾಖಲೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಎಣಿಸಿರಲಿಲ್ಲ. 13 ಲಕ್ಷ ಇ ಖಾತೆಗಳನ್ನು ಆಸ್ತಿ ತೆರಿಗೆ ಆದಾರದಲ್ಲಿ ಸೃಷ್ಟಿಸಿ ಒಂದೇ ದಿನದಲ್ಲಿ ಎಸ್ ಎಂಎಸ್ ಮೂಲಕ ನೀಡಲಾಗಿದೆ" ಎಂದರು.

"ಅನೇಕ ಕಡೆ ತಿದ್ದುವ, ನಕಲು ಮಾಡುವ ಅವಕಾಶವಿತ್ತು ಅದಕ್ಕೆಲ್ಲಾ ಕಡಿವಾಣ ಹಾಕಿ ಬೆರಳ ತುದಿಯಲ್ಲಿ ಅತ್ಯುತ್ತಮ ಸೇವೆಯನ್ನು ಜನರಿಗೆ ನೀಡಲಾಗಿದೆ. 200 ಜನ ಸಿಬ್ಬಂದಿ 10 ತಿಂಗಳ ಕಾಲ ಈ ಕೆಲಸ ನಿರ್ವಹಿಸಿದ್ದಾರೆ. ಇದಕ್ಕೆ ಸುಮಾರು 2 ಕೋಟಿ ಹಣ ಖರ್ಚು ಮಾಡಲಾಗಿದೆ. ಇದರಿಂದ ಸರಿಯಾದ ಆಸ್ತಿ ದಾಖಲೆ ಸೇರಿದಂತೆ ನಮ್ಮ ನಿವೇಶನದ ಸರಿಯಾದ ಅಳತೆ ಸಿಕ್ಕಿದೆ ಎಂದು ನಿವೃತ್ತ ಅಧಿಕಾರಿಗಳು, ಜನರು ನನಗೆ ಈ ಮೇಲ್ ಮಾಡಿದ್ದಾರೆ ಎಂದರು.

"ಬಿ ಖಾತೆಯಿಂದ ಎ ಖಾತೆ ನೀಡುವ ಅಭಿಯಾನ ಪ್ರಾರಂಭ ಮಾಡಲಾಗುವುದು. ಕೆಳ ಹಂತದ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುವ ಕಾರಣಕ್ಕೆ ಮನೆ ಬಾಗಿಲಿಗೆ ತೆರಳಿ ಖಾತೆ ನೀಡಲಾಗುವುದು. ಅನೇಕ ಕಡೆ 10 ರಿಂದ 5 ಸಾವಿರ ಲಂಚ ಬೇಡಿಕೆ ಬಂದಿದೆ ಎನ್ನುವ ದೂರು ಬಂದಿದೆ. ಇದರ ಬಗ್ಗೆ ನಾನೂ ತನಿಖೆ ನಡೆಸಿದ್ದೇನೆ. ಅದಕ್ಕೆ ಈ ದುರುಪಯೋಗ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ನಾವು ಪಾರದರ್ಶಕ, ಪರಿಶುದ್ದ ಆಡಳಿತ ನೀಡಬೇಕು ಎಂದು ಹೊರಟಿದ್ದೇವೆ" ಎಂದರು.

"ಬೆಂಗಳೂರು ಇಡೀ ವಿಶ್ವಕ್ಕೆ ಮಾದರಿಯಾದ ನಗರ. ಇಲ್ಲಿನ ನಾಗರಿಕರ ಆಸ್ತಿ ದಾಖಲೆಗಳು ಸರಿಯಾಗಿ ಇರಬೇಕು ಎಂದು ಈ ಕ್ರಮ ತೆಗೆದುಕೊಂಡಿದ್ದೇವೆ. ನಾಳೆಯಿಂದಲೇ ಅರ್ಜಿ ಸಲ್ಲಿಕೆ ಮಾಡಬಹುದು. ದಾಖಲೆಗಳು ಸರಿಯಿದ್ದರೆ ಸ್ಥಳದಲ್ಲೇ ಖಾತೆ ಮಾಡಿಕೊಡಲಾಗುವುದು. ಇಲ್ಲದಿದ್ದರೆ ಏನು ಮಾಡಬಹುದು ಎಂದು ಸೂಚನೆ ನೀಡಲಾಗುವುದು" ಎಂದರು.

"ಈ ಹಿಂದೆ ನನ್ನ ತಂಗಿಗೆ ಆಸ್ತಿ ಖರೀದಿ ಮಾಡಿದ್ದೇ. ಆದರೆ ಬೇರೆಯವರಿಗೆ ಖಾತೆಯಾಯಿತು. ನಮಗೆ ಖಾತೆಯೇ ಆಗಲಿಲ್ಲ. ಇಂತಹ ಹಗರಣಗಳು ನಡೆಯುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ" ಎಂದರು.

ದಿನಕ್ಕೆ ಎಷ್ಟು ಖಾತೆಗಳನ್ನು ಮಾಡಲಾಗುವುದು ಎಂದು ಕೇಳಿದಾಗ, "ನಮ್ಮ ಬಳಿ ಎಷ್ಟು ಬಿ ಖಾತೆಯಿದೆ ಎನ್ನುವ ಮಾಹಿತಿಯಿದೆ. ದಿನಕ್ಕೆ ಎಷ್ಟು ಮಾಡಲಾಗುವುದು ಎಂಬುದು ಪ್ರಾರಂಭ ಮಾಡಿದಾಗಲೇ ತಿಳಿಯುವುದು. ಮೊದಲ ಮೂರು ತಿಂಗಳು ಇದನ್ನ ಮಾಡಲಾಗುವುದು" ಎಂದರು‌.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.