'ನನ್ನ ನಾಯಕತ್ವದಲ್ಲಿ 136 ಶಾಸಕರು ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂಬ ಆಶಾಭಾವನೆಯಲ್ಲಿದ್ದೇನೆ': ಡಿ.ಕೆ ಶಿವಕುಮಾರ್
ನನ್ನ ನಾಯಕತ್ವದಲ್ಲೇ ಜನತೆ 136 ಶಾಸಕರನ್ನು ಗೆಲ್ಲಿಸಿರೋದು ಎಂದು ಹೇಳುವ ಮೂಲಕ ವದಂತಿಗಳಿಗೆ ಮತ್ತಷ್ಟು ಸಂಚಲನ ಮೂಡಿಸಿದ್ದಾರೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಸಿಎಂ ನಾಯಕತ್ವ ಬದಲಾವಣೆ ಭಾರೀ ಸದ್ದು ಮಾಡುತ್ತಿದೆ. ಮೇ ತಿಂಗಳಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹುಟ್ಟುಹಬ್ಬವಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಿದೆ. ಸಿಎಂ ಹುದ್ದೆ ಬದಲಾಗುತ್ತದೆ ಎಂದು ವದಂತಿ ಜೋರಾಗಿದೆ.
ಈ ಮಧ್ಯೆ, ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿರುವ ಡಿ ಕೆ ಶಿವಕುಮಾರ್, ನನ್ನ ನಾಯಕತ್ವದಲ್ಲೇ ಜನತೆ 136 ಶಾಸಕರನ್ನು ಗೆಲ್ಲಿಸಿರೋದು ಎಂದು ಹೇಳುವ ಮೂಲಕ ವದಂತಿಗಳಿಗೆ ಮತ್ತಷ್ಟು ಸಂಚಲನ ಮೂಡಿಸಿದ್ದಾರೆ.
ಕಾರ್ಯಕ್ರಮದ ಸಂದರ್ಶನದಲ್ಲಿ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರ ಬಗ್ಗೆ ನಿರೂಪಕರಿಂದ ಪ್ರಶ್ನೆ ಬಂತು. ಆಗ ಡಿಕೆ ಶಿವಕುಮಾರ್, ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದಿದ್ದಾರೆ. ಈ ಹಿಂದೆ ಹಲವಾರು ಬಾರಿ ಪಕ್ಷದ ನಾಯಕತ್ವದ ಕುರಿತು ಮಾತನಾಡಿದ್ದ ಡಿಕೆಶಿ, ಸಿದ್ದರಾಮಯ್ಯ ಮತ್ತು ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಎನ್ನುತ್ತಿದ್ದರು. ಆದರೆ ಈ ಬಾರಿ ನನ್ನ ನಾಯಕತ್ವದಲ್ಲೇ ಪಕ್ಷ ಗೆದ್ದಿರೋದು ಎಂದು ಹೇಳುವ ಮೂಲಕ ಹೈಕಮಾಂಡ್ ಗೆ ತಮಗೆ ಮುಖ್ಯಮಂತ್ರಿ ಪದವಿ ಹಸ್ತಾಂತರ ಮಾಡಬೇಕು ಎಂದು ಸಂದೇಶ ರವಾನೆ ಮಾಡಿದ್ದಾರಾ ಎಂಬ ಅನುಮಾನ ಬರುತ್ತಿದೆ.
ಮೇ ಕೊನೆಗೆ ಜೂನ್ ಆರಂಭದಲ್ಲಿ ಮುಂಗಾರು ಪ್ರವೇಶವಾಗುತ್ತದೆ, ಮುಂಗಾರು ಅಧಿವೇಶನದಲ್ಲಿ ನೀವು ಸಿಎಂ ಆಗಿ ವಿಧಾನಸಭೆ ಪ್ರವೇಶಿಸುತ್ತೀರಾ ಎಂದು ಸಂದರ್ಶನ ಕೇಳಿದಾಗ, ನಾವು ಆಶಾವಾದದಲ್ಲಿ, ಸ್ಪೂರ್ತಿಯಲ್ಲಿ ಬದುಕುತ್ತೇವೆ, ನನ್ನ ನಾಯಕತ್ವದಲ್ಲಿ 136 ಶಾಸಕರನ್ನು ಗೆಲ್ಲಿಸಿ ರಾಜ್ಯದ ಜನತೆ ಅಧಿಕಾರ ಕೊಟ್ಟಿದ್ದಾರೆ, ಪಕ್ಷ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತದೆ, ನೀವು ಕೂಡ ಆಗ ನಿಮ್ಮ ಮಾಧ್ಯಮದಲ್ಲಿ ಸುದ್ದಿ ನೀಡಬಹುದು ಎಂದರು.
ಬೆಂಗಳೂರು ದಕ್ಷಿಣದಲ್ಲಿ 2ನೇ ವಿಮಾನ ನಿಲ್ದಾಣ
ರಾಜಧಾನಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕಿಸುವ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣವಿದ್ದು, ಬೆಂಗಳೂರು ದಕ್ಷಿಣದಲ್ಲಿ 2ನೇ ವಿಮಾನ ನಿಲ್ದಾಣ ತಲೆಯೆತ್ತಲಿದ್ದು ಸ್ಥಳ ನಿಗದಿಯಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಬಳಿ 9 ಸಾವಿರ ಎಕರೆ ಪ್ರದೇಶವನ್ನು ವಿಮಾನ ನಿಲ್ದಾಣಕ್ಕೆ ಗುರುತಿಸಲಾಗಿದೆ. ನಿರ್ಮಾಣ ಕಾರ್ಯದ ಚರ್ಚೆ, ಸಮಾಲೋಚನೆ ಆರಂಭವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಉದ್ಯಮ ನಾಯಕರು ಸರ್ಕಾರ ಜೊತೆ ಮಾತನಾಡುತ್ತಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




