IPL ಟಿಕೆಟ್ ವಿವಾದ: 'ಕೈ' ಶಾಸಕರಿಗೆ ತೇಜಸ್ವಿ ಸೂರ್ಯ ತರಾಟೆ; BJP ನಿಲುವೇನು..? ಕುತೂಹಲ ಮೂಡಿಸಿದ ಆರ್ ಅಶೋಕ್ ಹೇಳಿಕೆ!
ಇತ್ತ ಕೈ ಶಾಸಕರ ಬೇಡಿಕೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧಿಸಿದ್ದರೆ, ಅತ್ತ ಅದೇ ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಶನಿವಾರದಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬೆಂಗಳೂರು ಪಂದ್ಯಗಳ ಟಿಕೆಟ್ ಅನ್ನು ಶಾಸಕರಿಗೂ ನೀಡಬೇಕು ಎಂದ ವಿಚಾರವಾಗಿ ಬಿಜೆಪಿ ಪಕ್ಷದಲ್ಲೇ ದ್ವಂದ್ವ ನಿಲುವು ಏರ್ಪಟ್ಟಿದೆ.
ಇತ್ತ ಕೈ ಶಾಸಕರ ಬೇಡಿಕೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧಿಸಿದ್ದರೆ, ಅತ್ತ ಅದೇ ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.
ಐಪಿಎಲ್ ಟಿಕೆಟ್ ಉಚಿತವಾಗಿ ನೀಡಬೇಕು ಎನ್ನುವ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೇಳಿಕೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಟೀಕೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಪಂದ್ಯಗಳಿಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಸದನದಲ್ಲೂ ಈ ವಿಚಾರ ಪ್ರತಿಧ್ವನಿಸಿದ್ದು, ಶಾಸಕರಿಗೆ ಐಪಿಎಲ್ ಟಿಕೆಟ್ ನೀಡುವ ವಿಚಾರವಾಗಿ ಬಿಜೆಪಿಯಲ್ಲೇ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿದೆ.
'ಕೈ' ಶಾಸಕರಿಗೆ ತೇಜಸ್ವಿ ಸೂರ್ಯ ತರಾಟೆ
ಈ ನಡುವೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಂಸದ ಸಂಸದ ತೇಜಸ್ವಿ ಸೂರ್ಯ, 'ಶಾಸಕರ ಹೇಳಿಕೆ ತಪ್ಪು ಮತ್ತು ಸ್ಪಷ್ಟವಾಗಿ ಹೇಳುವುದಾದರೆ, ಆಶ್ಚರ್ಯವೇನಿಲ್ಲ. ರಾಜ್ಯದ ನಿಜವಾದ ಸಮಸ್ಯೆಗಳು ಗಮನ ಸೆಳೆಯುವ ಸಮಯದಲ್ಲಿ, ವಿಧಾನಸಭೆಯಲ್ಲಿ ಇಂತಹ ವಿಷಯವನ್ನು ಎತ್ತುವುದು ಸರಿಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಅಂತೆಯೇ 'ಸ್ಪೀಕರ್ ಅದರ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾದರೆ ಅದು ವಿಧಾನಸೌಧದ ಘನತೆಯನ್ನು ಕುಗ್ಗಿಸುತ್ತದೆ. ಕೆಎಸ್‌ಸಿಎ ಅಥವಾ ಯಾವುದೇ ಕ್ರೀಡಾ ಸಂಸ್ಥೆ ಶಾಸಕರಿಗೆ ಉಚಿತ ಟಿಕೆಟ್‌ಗಳನ್ನು ಏಕೆ ನೀಡಬೇಕು? ಅವರು ಅವರಿಗೆ ಯಾವುದೇ ವಿಷಯಕ್ಕಾದರೂ ಏಕೆ ಋಣಿಯಾಗಿರಬೇಕು.
ಇದು ಊಳಿಗಮಾನ್ಯ ಚಿಂತನೆ. ಇದನ್ನು ನಾವು ಸ್ಪಷ್ಟವಾಗಿ ವಿರೋಧಿಸದಿದ್ದರೆ, ವಿಶೇಷ ಹಕ್ಕಿನ (entitlement) ಸಂಸ್ಕೃತಿ ಸಾಮಾನ್ಯವಾಗುತ್ತದೆ. ಅದು ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಇದು ತಪ್ಪು. ಇದನ್ನು ಖಂಡಿಸಲೇಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಕುತೂಹಲ ಮೂಡಿಸಿದ ಆರ್ ಅಶೋಕ್ ಹೇಳಿಕೆ!
ಈ ನಡುವೆ ತೇಜಸ್ವಿ ಸೂರ್ಯ ವಿರೋಧದ ನಡುವೆ ಬಿಜೆಪಿ ವಿಪಕ್ಷ ನಾಯಕ ಆರ್ ಅಶೋಕ್ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ. 'ಶಾಸಕರು ಟಿಕೆಟ್ ಕೇಳೋದ್ರಲ್ಲಿ ತಪ್ಪಿಲ್ಲ.
ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಮತ್ತು ಸಾಮಾನ್ಯ ಜನರಿಗೆ ಟಿಕೆಟ್‌ಗಳು ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು ಕನಿಷ್ಠ ಮೂರ್ನಾಲ್ಕು ಟಿಕೆಟ್‌ಗಳನ್ನು ಪಡೆಯುವ ವ್ಯವಸ್ಥೆಯಾಗಬೇಕು' ಎಂದು ಹೇಳಿದ್ದಾರೆ.
ಅಂತೆಯೇ 'ತಮಗೆ ಬರುವ ಟಿಕೆಟ್‌ಗಳನ್ನು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ
ಇದೇ ವೇಳೆ ಐಪಿಎಲ್ ಪಂದ್ಯಗಳ ಸುರಕ್ಷತೆ ಮತ್ತು ಟಿಕೆಟ್ ವಿತರಣೆ ಕುರಿತು ರಾಜ್ಯ ಸರ್ಕಾರಕ್ಕೆ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದು, 'ಹಿಂದಿನ ಐಪಿಎಲ್ ಪಂದ್ಯದ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಮಾಯಕರು ಮೃತಪಟ್ಟಿದ್ದನ್ನು ಉಲ್ಲೇಖಿಸಿದ ಅವರು, ರಾಜ್ಯ ಸರ್ಕಾರದ ಬೇಜವಾಬ್ದಾರಿ ಹಾಗೂ ಅಧಿಕಾರಿಗಳ ನಡೆ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಅಲ್ಲದೆ ಮುಂಬರುವ ಐಪಿಎಲ್ ಪಂದ್ಯಗಳು ಸುಗಮವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ರಾಜ್ಯ ಸರ್ಕಾರವೇ ನೇರ ಹೊಣೆಗಾರರಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




