'ಲಾಲ್‌ಬಾಗ್ ಉಳಿಸಿ..': ಕೊನೆಗೂ ಹೋರಾಟಕ್ಕೆ ಮಣಿದ ಸರ್ಕಾರ; ವಿವಾದಿತ ಪಾರ್ಕ್ ತಿದ್ದುಪಡಿ ಮಸೂದೆ ವಾಪಸ್; BJP ಸ್ವಾಗತ; Video
ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ 17 ಕಿ.ಮೀ ಉದ್ದದ ಅವಳಿ ಸುರಂಗ ರಸ್ತೆ ಯೋಜನೆಗೆ ಲಾಲ್‌ಬಾಗ್‌ನ ಸಿದ್ದಾಪುರ ಗೇಟ್ ಮೂಲಕ ಪ್ರವೇಶ ಮತ್ತು ನಿರ್ಗಮನ ಮಾರ್ಗ ಕಲ್ಪಿಸಲು ಈ ತಿದ್ದುಪಡಿ..

ಬೆಂಗಳೂರು: ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಸಾರ್ವಜನಿಕ ಬಳಕೆಗೆ ಬಳಸುವ ವಿವಾದಿತ ಪಾರ್ಕ್ ತಿದ್ದುಪಡಿ ಮಸೂದೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ರಾಜ್ಯ ಸರ್ಕಾರ ಅದನ್ನು ವಾಪಸ್ ಪಡೆದಿದೆ.
ಹೌದು.. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ತರಾತುರಿಯಲ್ಲಿ ಅಂಗೀಕರಿಸಲಾಗಿತ್ತು ಎನ್ನಲಾದ ಕರ್ನಾಟಕ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಸೂದೆಯನ್ನು ವಾಪಸ್ ಪಡೆಯಲು ನಿರ್ಧರಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿಗರ ಹೋರಾಟ
ರಾಜ್ಯ ಸರ್ಕಾರದ ಈ ಮಸೂದೆಗೆ ಬೆಂಗಳೂರಿಗರಿಂದ ಸರಣಿ ಪ್ರತಿಭಟನೆ ಹಾಗೂ ಅಭಿಯಾನಗಳು ನಡೆದಿದ್ದವು. ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ 17 ಕಿ.ಮೀ ಉದ್ದದ ಅವಳಿ ಸುರಂಗ ರಸ್ತೆ ಯೋಜನೆಗೆ ಲಾಲ್‌ಬಾಗ್‌ನ ಸಿದ್ದಾಪುರ ಗೇಟ್ ಮೂಲಕ ಪ್ರವೇಶ ಮತ್ತು ನಿರ್ಗಮನ ಮಾರ್ಗ ಕಲ್ಪಿಸಲು ಈ ತಿದ್ದುಪಡಿ ಮಸೂದೆಯನ್ನು ಬಳಸಲಾಗುತ್ತಿದೆ ಎಂಬುದು ವಿರೋಧಕ್ಕೆ ಪ್ರಮುಖ ಕಾರಣವಾಗಿತ್ತು.
ಮಸೂದೆಯಲ್ಲಿನ ಪ್ರಸ್ತಾವಿತ ತಿದ್ದುಪಡಿಗಳ ಪ್ರಕಾರ, ಉದ್ಯಾನವನದ ಒಟ್ಟು ಭೂಪ್ರದೇಶದ ಶೇ.5ರಷ್ಟು ಜಾಗವನ್ನು ‘ಸಾರ್ವಜನಿಕ ಯೋಜನೆ’ಗಳಿಗಾಗಿ ಸರ್ಕಾರಿ ಇಲಾಖೆಗಳು, ಶಾಸನಬದ್ಧ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಉಡುಗೊರೆ, ವಿನಿಮಯ, ಅಡಮಾನ, ಮಾರಾಟ ಅಥವಾ ಗುತ್ತಿಗೆ ಮೂಲಕ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈ ಅಂಶವೇ ಬೆಂಗಳೂರಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ನಿರ್ಧಾರ ಸ್ವಾಗತಿಸಿದ ತೇಜಸ್ವಿ ಸೂರ್ಯ
ಇನ್ನು ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, 'ಜನರು ತಮ್ಮ ಧ್ವನಿ ಎತ್ತಿದರು, ಸರ್ಕಾರ ಅದನ್ನು ಆಲಿಸಿತು. ಪ್ರಜಾಪ್ರಭುತ್ವ ಹೀಗೆಯೇ ಕಾರ್ಯನಿರ್ವಹಿಸಬೇಕು. 5% ಉದ್ಯಾನವನ ಭೂಮಿ ಪರಭಾರೆಗೆ ಅವಕಾಶ ನೀಡುವ ಕಾನೂನನ್ನು ವಿರೋಧಿಸಿ, 91 ವರ್ಷದ ಯೆಲ್ಲಪ್ಪ ರೆಡ್ಡಿ ಅವರ ನೇತೃತ್ವದಲ್ಲಿ ಲಾಲ್‌ಬಾಗ್‌ಗೆ ಆಗಮಿಸಿ ಹೋರಾಟ ನಡೆಸಿದ ಪ್ರತಿಯೊಬ್ಬ ನಾಗರಿಕನಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ' ಎಂದು ಹೇಳಿದ್ದಾರೆ.
ಅಂತೆಯೇ ಸಾರ್ವಜನಿಕರ ಅಭಿಪ್ರಾಯಕ್ಕೆ ಗೌರವ ನೀಡಿ, ಈ ಕಠಿಣ ಕಾನೂನನ್ನು ಹಿಂಪಡೆಯಲು ನಿರ್ಧರಿಸಿದ ಮುಖ್ಯಮಂತ್ರಿ ಅವರ ನಿರ್ಧಾರವನ್ನೂ ನಾನು ಶ್ಲಾಘಿಸುತ್ತೇನೆ. ಆದರೆ ಹೋರಾಟ ಇನ್ನೂ ಮುಗಿದಿಲ್ಲ. ವಿನಾಶಕಾರಿ ಟನಲ್ ರೋಡ್ ಯೋಜನೆಯನ್ನು ಅಧಿಕೃತವಾಗಿ ಕೈಬಿಡುವವರೆಗೂ ಲಾಲ್‌ಬಾಗ್ ಆಗಲಿ, ಪ್ರಾಚೀನ ಪೆನಿನ್ಸುಲರ್ ಗ್ನೈಸ್ ಶಿಲೆಯಾಗಲಿ ಸುರಕ್ಷಿತವಲ್ಲ.
ಇಂದು ಗೌರವಾನ್ವಿತ ಹೈಕೋರ್ಟ್‌ನಲ್ಲಿ ಟನಲ್ ರೋಡ್ ಯೋಜನೆಯನ್ನು ವಿರೋಧಿಸಿ ನಾನು ವಾದ ಮಂಡಿಸಿದ್ದೇನೆ. ಈ ಕುರಿತು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ತನ್ನ ವರದಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸುವಂತೆ ಕೋರ್ಟ್ ನಿರ್ದೇಶಿಸಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ರಂದು ನಿಗದಿಪಡಿಸಲಾಗಿದೆ.
ಇದರ ಜೊತೆಗೆ, ಹೆಬ್ಬಾಳ ಕೆರೆಯಲ್ಲಿ ಶಾರ್ಟ್ ಟನಲ್ ಯೋಜನೆಗೆ ಅನುಕೂಲವಾಗುವಂತೆ ಕರ್ನಾಟಕ ಕೆರೆ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡಿ, ಕೆರೆಗಳ ಬಫರ್ ವಲಯವನ್ನು 30 ಮೀಟರ್‌ನಿಂದ ಕೇವಲ 3 ಮೀಟರ್‌ಗೆ ಇಳಿಸಲಾಗಿದೆ. ಈ ತಿದ್ದುಪಡಿಯನ್ನು ಕೂಡ ಸರ್ಕಾರ ಹಿಂಪಡೆಯಬೇಕು. ಬೆಂಗಳೂರು ನಗರದ ಕೆರೆಗಳು, ಉದ್ಯಾನವನಗಳು ಹಾಗೂ ಹಸಿರು ಪ್ರದೇಶಗಳನ್ನು ಸಂರಕ್ಷಿಸುವುದಕ್ಕಾಗಿ ಮತ್ತು ನಮ್ಮ ನಗರದ ಸುಸ್ಥಿರ ಅಭಿವೃದ್ಧಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ತಮ್ಮ ನಗರದ ಪರವಾಗಿ ಧ್ವನಿ ಎತ್ತಿದ ಬೆಂಗಳೂರಿಗರೇ, ನಿಮಗೆ ಧನ್ಯವಾದಗಳು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




