ದುಬೈಯಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್: MLC ಭೋಜೇಗೌಡ, ಪಿವಿ ಸಿಂಧು ಸೇರಿ 213 ಮಂದಿ ಸುರಕ್ಷಿತವಾಗಿ ಬೆಂಗಳೂರಿಗೆ
ಮೂರು ದಿನಗಳ ಕಾಲ ಆತಂಕದಲ್ಲಿಯೇ ದಿನ ದೂಡಿದ್ದ ಪ್ರಯಾಣಿಕರು, ಸೋಮವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ಬಂದಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರು: ಅಮೆರಿಕಾ-ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಇರಾನ್ ಪರಿಸ್ಥಿತಿ ತೀವ್ರಗೊಂಡು ವಾಯುಪ್ರದೇಶ ಮುಚ್ಚಲ್ಪಟ್ಟ ಕಾರಣ ಅಬುಧಾಬಿಯಲ್ಲಿ ಸಿಲುಕಿದ್ದ ಸುಮಾರು 213 ಕನ್ನಡಿಗರು ಸೋಮವಾರ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಮೂರು ದಿನಗಳ ಕಾಲ ಆತಂಕದಲ್ಲಿಯೇ ದಿನ ದೂಡಿದ್ದ ಪ್ರಯಾಣಿಕರು, ಸೋಮವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ಬಂದಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ತಾಯ್ನಾಡಿಗೆ ಮರಳಿದವರಲ್ಲಿ ಕರ್ನಾಟಕದ ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ) ಭೋಜೇಗೌಡ ಹಾಗೂ ಒಲಿಂಪಿಕ್ ಪದಕ ವಿಜೇತೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕೂಡ ಸೇರಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ತಮ್ಮ ಆತಂಕದ ಕ್ಷಣಗಳನ್ನು ಹಂಚಿಕೊಂಡ ಎಂಎಲ್ಸಿ ಭೋಜೇಗೌಡ, ತಾವು ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ದುಬೈ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಎದುರಿಸಿದ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ನಾನು ದುಬೈ ವಿಮಾನ ನಿಲ್ದಾಣ ತಲುಪಿದಾಗಲೇ ಅಲ್ಲಿನ ಗಂಭೀರ ಪರಿಸ್ಥಿತಿ ಅರಿವಿಗೆ ಬಂತು. ಮೊದಲು ವಿಮಾನ ಹೊರಡುವುದು ವಿಳಂಬವಾಗಿದೆ ಎಂದು ತಿಳಿಸಿದರು, ಸ್ವಲ್ಪ ಸಮಯದ ನಂತರ ವಿಮಾನವೇ ರದ್ದಾಗಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನಸಂದಣಿ ಸೇರಿತ್ತು. ಎಲ್ಲರ ಮುಖದಲ್ಲೂ ಯುದ್ಧದ ಭಯ ಎದ್ದು ಕಾಣುತ್ತಿತ್ತು ಎಂದು ಆತಂಕದ ಕ್ಷಣಗಳನ್ನು ಮೆಲುಕು ಹಾಕಿದರು.
ಕಠಿಣ ಸಮಯದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದ್ದಲ್ಲದೆ, ದುಬೈನಲ್ಲಿ ಸುರಕ್ಷಿತ ಹೋಟೆಲ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಿದ್ದರು. ಆದಾಗ್ಯೂ ಭದ್ರತೆಯ ಆತಂಕ ನಮ್ಮನ್ನ ಕಾಡುತ್ತಲೇ ಇತ್ತು ಎಂದು ಭೋಜೇಗೌಡರು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೃಷ್ಣ ಭೈರೇಗೌಡ ಹಾಗೂ ಎಚ್.ಕೆ. ಪಾಟೀಲ್ ಕೂಡ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು.
ಸಚಿವ ಕೃಷ್ಣ ಭೈರೇಗೌಡ ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಾಗಲೇ ದೊಡ್ಡದೊಂದು ಬಾಂಬ್ ಸ್ಫೋಟದ ಶಬ್ದ ಕೇಳಿಸಿತು. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಪಕ್ಕದಲ್ಲೇ ಬಾಂಬ್ ಬಿದ್ದಿದೆ ಎಂಬ ಮಾಹಿತಿ ಹಬ್ಬಿ ಆತಂಕ ಇಮ್ಮಡಿಯಾಗಿತ್ತು. ಆದರೆ, ಅದು ಅಷ್ಟೊಂದು ಪರಿಣಾಮಕಾರಿಯಾಗಿ ಸ್ಫೋಟಗೊಂಡಿರಲಿಲ್ಲ ಎಂದು ಬಳಿಕ ತಿಳಿಯಿತು. ದುಬೈ ಸರ್ಕಾರ ನಮ್ಮ ನೆರವಿಗೆ ಬಂದು ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿತ್ತು. ಇಷ್ಟು ಬೇಗ ನಾವು ಸ್ವದೇಶಕ್ಕೆ ವಾಪಸ್ಸಾಗುತ್ತೇವೆ ಎಂದು ಊಹಿಸಿರಲಿಲ್ಲ ಎಂದು ಭೋಜೇಗೌಡ ಅವರು ವಿವರಿಸಿದ್ದಾರೆ.
ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA)ದ ವಕ್ತಾರರ ಪ್ರಕಾರ, Etihad Airways ವಿಮಾನದ EY238/239 ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಬೆಂಗಳೂರು ತಲುಪಿತು. ವಿಮಾನ ಮರಳಿ ಅಬುಧಾಬಿಗೆ ರಾತ್ರಿ 11.10ಕ್ಕೆ ಪ್ರಯಾಣ ಬೆಳೆಸಿತು ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, Emirates ಸಂಸ್ಥೆಯ ಏರ್‌ಬಸ್ A380 (EK568/569) ವಿಮಾನ ಮಂಗಳವಾರ ಮುಂಜಾನೆ ಕಾರ್ಯಾಚರಿಸಲು ನಿಗದಿಯಾಗಿದೆ. ಬೆಳಗಿನ 2.40ಕ್ಕೆ ಆಗಮನ (SIBT) ಹಾಗೂ 4.30ಕ್ಕೆ ಹೊರಡಲು (SOBT) ವೇಳಾಪಟ್ಟಿ ನಿಗದಿಯಾಗಿದೆ.
ದುಬೈ (DXB)ಗೆ ತೆರಳುವ ಪ್ರಯಾಣಿಕರಿಗೆ ಯುಎಇ ನಾಗರಿಕರು ಮತ್ತು ನಿವಾಸಿ ಪರವಾನಗಿ ಹೊಂದಿದವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ನಿರ್ಬಂಧಗಳೊಂದಿಗೆ ವಿಮಾನ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಇದೂವರೆಗೂ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಬೆಂಗಳೂರು ನಿವಾಸಿ ಅನಿರುದ್ಧ ಅವರು ಕೂಡ ಸುರಕ್ಷಿತವಾಗಿ ಮನೆಗೆ ವಾಪಸ್ಸಾಗಿದ್ದಾರೆ.
ವಿವಾಹ ಸಮಾರಂಭಕ್ಕಾಗಿ ಕೆನಡಾದಿಂದ ಭಾರತಕ್ಕೆ ಬರುತ್ತಿದ್ದ ವೇಳೆ ಅಬುಧಾಬಿಯಲ್ಲಿ ಪ್ರಯಾಣ ವ್ಯತ್ಯಯದಿಂದ ಸಿಲುಕಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



