Temperature in Karnataka: ಮಳೆ ಕೊರತೆಯಿಂದ ರಾಜ್ಯಾದ್ಯಂತ ತಾಪಮಾನ ಏರಿಕೆ; ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಬಿಸಿಲು
ಐಎಂಡಿಯ ಪ್ರಕಾರ, ರಾಜ್ಯಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಮೋಡ ಕವಿದ ವಾತಾವರಣ ಮತ್ತು ಮಳೆಯ ಕೊರತೆಯಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು 3ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಎರಡು ದಿನಗಳಿಂದ ಗರಿಷ್ಠ ತಾಪಮಾನ ಏರಿಕೆ ಕಂಡುಬಂದಿದ್ದು, ಮಳೆ ಹಾಗೂ ಮೋಡ ಕವಿದ ವಾತಾವರಣದ ಕೊರತೆಯಿಂದ ಮುಂದಿನ ಕೆಲವು ದಿನಗಳವರೆಗೆ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಐಎಂಡಿಯ ಪ್ರಕಾರ, ರಾಜ್ಯಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಮೋಡ ಕವಿದ ವಾತಾವರಣ ಮತ್ತು ಮಳೆಯ ಕೊರತೆಯಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು 3ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.
ಮಂಗಳವಾರ ಬೆಂಗಳೂರಿನಲ್ಲಿ ಗರಿಷ್ಠ 33.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಜುಲೈ ತಿಂಗಳಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಇದಕ್ಕೂ ಮೊದಲು 1914 ಮತ್ತು 1926ರ ಜುಲೈ 1ರಂದು 33.1 ಡಿಗ್ರಿ ಸೆಲ್ಸಿಯಸ್ ಹಾಗೂ 2021ರ ಜುಲೈ 1ರಂದು 32.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ನಿನ್ನೆ ಬುಧವಾರ ಬೆಂಗಳೂರಿನಲ್ಲಿ ಗರಿಷ್ಠ 32.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಾಮಾನ್ಯ ಗರಿಷ್ಠ ತಾಪಮಾನವಾದ 28.3 ಡಿಗ್ರಿ ಸೆಲ್ಸಿಯಸ್‌ಗಿಂತ 3.9 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಚ್‌ಎಎಲ್ ವೀಕ್ಷಣಾಲಯಗಳಲ್ಲಿ ತಲಾ 33.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಐಎಂಡಿ ಬೆಂಗಳೂರು ಹಿರಿಯ ವಿಜ್ಞಾನಿ ರಾಜವೇಲ್ ಮಾಣಿಕ್ಕಂ, ಮುಂದಿನ ಕೆಲವು ದಿನಗಳವರೆಗೆ ಮಳೆಯ ಸಾಧ್ಯತೆ ಇಲ್ಲ. ನಂತರ ಸ್ಥಳೀಯ ಸಂವಹನ ಪರಿಣಾಮದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಯಾವುದೇ ಹವಾಮಾನ ವ್ಯವಸ್ಥೆ ರೂಪುಗೊಳ್ಳದ ಕಾರಣ ಮುಂಗಾರು ಮಳೆಯೂ ಆಗುತ್ತಿಲ್ಲ ಎಂದು ತಿಳಿಸಿದರು.
ಮುಂಗಾರು ದುರ್ಬಲಕ್ಕೆ ಕಾರಣವೇನು?
ರಾಜ್ಯದಲ್ಲಿ ಮುಂಗಾರು ಮಳೆಯಲ್ಲಿ ಸುಮಾರು 30 ಶೇಕಡಾ ಕೊರತೆ ಉಂಟಾಗಿದೆ. ಸಾಮಾನ್ಯವಾಗಿ ಜುಲೈಯಲ್ಲಿ 30–31 ಡಿಗ್ರಿ ಸೆಲ್ಸಿಯಸ್ ತಾಪಮಾನ ಸಹಜವಾದರೂ, ಈ ವರ್ಷ ಕಂಡುಬರುತ್ತಿರುವ ತಾಪಮಾನ ಏರಿಕೆ ಅಸಹಜವಾಗಿದೆ ಎಂದು ಅವರು ಹೇಳಿದರು.
ಮುಂಗಾರು ಮಾರುತಗಳ ದುರ್ಬಲತೆ, ಮೋಡಗಳ ಕೊರತೆ ಹಾಗೂ ಹೆಚ್ಚು ಸೂರ್ಯನ ಬೆಳಕು ಬೀಳುತ್ತಿರುವುದರಿಂದ ಮಣ್ಣಿನ ತೇವಾಂಶವೂ ವೇಗವಾಗಿ ಕಡಿಮೆಯಾಗುತ್ತಿದೆ. ಇದರಿಂದ ಹಗಲಿನ ತಾಪಮಾನ ಹೆಚ್ಚುತ್ತಿದ್ದು, ರಾತ್ರಿ ತಾಪಮಾನ ಮಾತ್ರ ಸಾಮಾನ್ಯ ಮಟ್ಟದಲ್ಲೇ ಅಥವಾ ಸ್ವಲ್ಪ ಕಡಿಮೆ ಮಟ್ಟದಲ್ಲಿದೆ ಎಂದು ಐಎಂಡಿ ಅಧಿಕಾರಿಗಳು ವಿವರಿಸಿದ್ದಾರೆ.
ಎಲ್ ನಿನೋ ಪರಿಣಾಮವೂ ಮುಂಗಾರು ದುರ್ಬಲವಾಗಲು ಕಾರಣವಾಗಿದ್ದು, ಇದರಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ನಿನ್ನೆ ಕೊಪ್ಪಳದಲ್ಲಿ ಗರಿಷ್ಠ 38.8 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 36.1 ಡಿಗ್ರಿ ಸೆಲ್ಸಿಯಸ್ ಹಾಗೂ ಬೀದರ್‌ನಲ್ಲಿ 36.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



