ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ: ಮಳೆ ಕೊರತೆ ನಡುವೆ ಪವರ್ ಕಟ್ ಸಮಸ್ಯೆ?
ಕಳೆದ ಸೆಪ್ಟೆಂಬರ್ 11ರಂದು ರಾಜ್ಯದಲ್ಲಿ ಗರಿಷ್ಠ 20,094 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ದಾಖಲಾಗಿದ್ದು, ಇದುವರೆಗಿನ ಗರಿಷ್ಠ ಬೇಡಿಕೆ ಇದಾಗಿದೆ.

ಬೆಂಗಳೂರು: ಪ್ರತಿದಿನ ವಿದ್ಯುತ್ ಬೇಡಿಕೆ 2,000-3,000 ಮೆಗಾವ್ಯಾಟ್‌ನಷ್ಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿದ್ಯುತ್ ಕಡಿತದ ಸಮಸ್ಯೆ ಎದುರಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳ (ESCOM) ಸಿಬ್ಬಂದಿ, ರೈತರು ಹಾಗೂ ಗ್ರಾಹಕರು ವಿದ್ಯುತ್ ಕಡಿತದ ಬಗ್ಗೆ ಗಮನ ಸೆಳೆಯುತ್ತಿದ್ದರೆ, ಇಂಧನ ಇಲಾಖೆಯ ಅಧಿಕಾರಿಗಳು ನಿರ್ವಹಣಾ ಕಾರ್ಯಗಳಿಗೆ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿದೆ.
ಕಳೆದ ಸೆಪ್ಟೆಂಬರ್ 11ರಂದು ರಾಜ್ಯದಲ್ಲಿ ಗರಿಷ್ಠ 20,094 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ದಾಖಲಾಗಿದ್ದು, ಇದುವರೆಗಿನ ಗರಿಷ್ಠ ಬೇಡಿಕೆ ಇದಾಗಿದೆ. ಇದಕ್ಕೂ ಮೊದಲು ಮಾರ್ಚ್ 13ರಂದು 18,655 ಮೆಗಾವ್ಯಾಟ್ ಗರಿಷ್ಠ ಬೇಡಿಕೆ ದಾಖಲಾಗಿತ್ತು. ನಿನ್ನೆ ಸೆಪ್ಟೆಂಬರ್ 21ರಂದು ಬೆಳಗ್ಗೆ 11 ಗಂಟೆಗೆ ಗರಿಷ್ಠ ವಿದ್ಯುತ್ ಬೇಡಿಕೆ 16,719 ಮೆಗಾವ್ಯಾಟ್ ಆಗಿತ್ತು.
ಗರಿಷ್ಠ ತಾಪಮಾನ ಏರಿಕೆ ಮತ್ತು ಮುಂಗಾರು ದುರ್ಬಲವಾಗಿರುವುದರಿಂದ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಜಲಾಶಯಗಳಲ್ಲಿ ಶೇ.60ರಷ್ಟು ಮಾತ್ರ ನೀರು ಸಂಗ್ರಹವಿದೆ. ಹೀಗಾಗಿ ವಿದ್ಯುತ್ ಪೂರೈಕೆಯ ಹೊರೆ ಉಷ್ಣ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರ ಹಾಗೂ ಪವನ ವಿದ್ಯುತ್ ಮೇಲೆ ಬಿದ್ದಿದೆ.
ಸೌರ ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದರೂ, ವಿದ್ಯುತ್ ಸಂಗ್ರಹಿಸುವ ವ್ಯವಸ್ಥೆ ಇಲ್ಲ. ವಿದ್ಯುತ್ ಕಡಿತವಾಗುತ್ತಿದ್ದು, ಅದನ್ನು ನಿರ್ವಹಣಾ ಕಾಮಗಾರಿ ಎಂದು ಕರೆಯಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸೌರ ವಿದ್ಯುತ್ ಉತ್ಪಾದನೆ 32.34 ಮಿಲಿಯನ್ ಯೂನಿಟ್ (MU) ಹಾಗೂ ಪವನ ವಿದ್ಯುತ್ ಉತ್ಪಾದನೆ 13.55 MU ಆಗಿತ್ತು. ಉಷ್ಣ ವಿದ್ಯುತ್ ಉತ್ಪಾದನೆ 78.35 MU ಆಗಿತ್ತು. ಮೂರು ಪ್ರಮುಖ ಜಲವಿದ್ಯುತ್ ಮೂಲಗಳಾದ ಶರಾವತಿ, ಎನ್‌ಪಿಎಚ್ ಮತ್ತು ವರಾಹಿಯಿಂದ 34.40 MU ಹಾಗೂ ಇತರ ಜಲವಿದ್ಯುತ್ ಮೂಲಗಳಿಂದ 11.76 MU ವಿದ್ಯುತ್ ಉತ್ಪಾದನೆಯಾಗಿದೆ.
ಎಲ್ ನಿನೊ ಮತ್ತು ಬರಗಾಲದ ಪರಿಣಾಮಗಳ ಬಗ್ಗೆ ಮೊದಲೇ ತಿಳಿದಿತ್ತು. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಕಡಿಮೆ. ಹಲವು ಪ್ರದೇಶಗಳಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆಗಳ ನಿರಂತರ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದೇ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಸೂಚನೆಯಾಗಿತ್ತು. ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿಗೆ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಲಾಗಿಲ್ಲ ಎಂದು ESCOM ಮೂಲಗಳು ತಿಳಿಸಿವೆ.
ಈ ತಿಂಗಳು ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಲ್ಲಿ ಹವಾನಿಯಂತ್ರಣ (AC) ಬಳಕೆಯಿಂದ ಉಂಟಾಗುವ ಕೂಲಿಂಗ್ ಲೋಡ್ ಕೂಡ ಗಣನೀಯವಾಗಿ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಏರಿಕೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಮಂಗಳೂರು, ಕಲಬುರಗಿ ಹಾಗೂ ಸುತ್ತಮುತ್ತಲಿನ ಇತರ ಜಿಲ್ಲೆಗಳಲ್ಲಿಯೂ ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಏರಿಕೆ ದಾಖಲಾಗುತ್ತಿದೆ.
ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ವಿದ್ಯುತ್ ಬೇಡಿಕೆ 3,000 ಮೆಗಾವ್ಯಾಟ್‌ನಷ್ಟು ಹೆಚ್ಚಾಗಿದೆ, ಆದರೆ ಆತಂಕಪಡುವ ಅಗತ್ಯವಿಲ್ಲ. ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ವಿದ್ಯುತ್ ಬೇಡಿಕೆ ಶೇ.20-25ರವರೆಗೆ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಾರ್ಷಿಕ ಹಾಗೂ ಮಾಸಿಕ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಈ ಸೆಪ್ಟೆಂಬರ್‌ನಲ್ಲಿ ಬೇಡಿಕೆ ಸುಮಾರು ಶೇ.30-35ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಇತರ ರಾಜ್ಯಗಳಿಂದ ಅಲ್ಪಾವಧಿ ಮತ್ತು ದೀರ್ಘಾವಧಿ ಆಧಾರದ ಮೇಲೆ ವಿದ್ಯುತ್ ಖರೀದಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ದೇಶಾದ್ಯಂತ, ವಿಶೇಷವಾಗಿ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಉತ್ತರ ರಾಜ್ಯಗಳಲ್ಲೂ ಕಲ್ಲಿದ್ದಲು ಕೊರತೆ ಎದುರಾಗಿದೆ. ವಿಶೇಷವಾಗಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದಲ್ಲಿ ಕಲ್ಲಿದ್ದಲು ಕೊರತೆಯಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



