ರಾಜ್ಯ

ಸೆಪ್ಟೆಂಬರ್‌ನಲ್ಲೇ ಸುಡುತ್ತಿದೆ ಬೆಂಗಳೂರು: ದಶಕದ ದಾಖಲೆ ಮುರಿದ ಬಿಸಿಲು; 32.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು..!

ಇನ್ನೊಂದೆಡೆ, ನಗರದ ಹೊರವಲಯದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹವಾಮಾನ ಕೇಂದ್ರದಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಬರೋಬ್ಬರಿ 33.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಸೆಪ್ಟೆಂಬರ್‌ನಲ್ಲೇ ಸುಡುತ್ತಿದೆ ಬೆಂಗಳೂರು: ದಶಕದ ದಾಖಲೆ ಮುರಿದ ಬಿಸಿಲು; 32.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು..!
ಸಂಗ್ರಹ ಚಿತ್ರ
Published On :

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾತಾವರಣ ತಂಪಾಗಿರಬೇಕಾದ ಸೆಪ್ಟೆಂಬರ್ ತಿಂಗಳಲ್ಲೇ ಬಿಸಿಲಿನ ಬೇಗೆ ಜೋರಾಗಿದೆ.

ಶನಿವಾರ (ಸೆಪ್ಟೆಂಬರ್ 12, 2026) ಬೆಂಗಳೂರು ನಗರದ ಹವಾಮಾನ ಕೇಂದ್ರದಲ್ಲಿ ಗರಿಷ್ಠ 32.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಳೆದ ಒಂದು ದಶಕದಲ್ಲೇ ಸೆಪ್ಟೆಂಬರ್ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚಿನ ಉಷ್ಣಾಂಶವಾಗಿದೆ.

ಇನ್ನೊಂದೆಡೆ, ನಗರದ ಹೊರವಲಯದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹವಾಮಾನ ಕೇಂದ್ರದಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಬರೋಬ್ಬರಿ 33.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಹವಾಮಾನ ಇಲಾಖೆಯ ಮಾಹಿತಿಯನ್ನು ಗಮನಿಸಿದರೆ, ಇದು 1951ರ ನಂತರ ಅಂದರೆ ಕಳೆದ 75 ವರ್ಷಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರು ಭಾಗದಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ಉಷ್ಣಾಂಶವಾಗಿದೆ. ಈ ಹಿಂದೆ 1951ರ ಸೆಪ್ಟೆಂಬರ್ 16 ರಂದು ಇಷ್ಟೇ ಪ್ರಮಾಣದ ಗರಿಷ್ಠ ತಾಪಮಾನ ದಾಖಲಾಗಿತ್ತು.

ಕಳೆದ ಒಂದು ವಾರಕ್ಕೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31ರಿಂದ 32 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

ಋತುಮಾನಕ್ಕೆ ಅನುಗುಣವಾಗಿ ಬೀಸಬೇಕಿದ್ದ ನೈಋತ್ಯ ಮಾರುತಗಳ ಬದಲಿಗೆ ಮೇಲ್ಮೈ ಮಟ್ಟದಲ್ಲಿ ವಾಯವ್ಯ ಮಾರುತಗಳು ಬೀಸುತ್ತಿವೆ. ಮೋಡಗಳ ಕೊರತೆ ಹಾಗೂ ದುರ್ಬಲ ಮುಂಗಾರು ಮಳೆಯಿಂದಾಗಿ ತಾಪಮಾನದಲ್ಲಿ ಏರಿಕೆಯಾಗಿದೆ” ಎಂದು ಐಎಂಡಿ ಬೆಂಗಳೂರು ಪ್ರಭಾರ ನಿರ್ದೇಶಕ ಎನ್. ಪುವಿಯರಸನ್ ಹೇಳಿದ್ದಾರೆ.

ಮೇಲ್ಮೈಯಲ್ಲಿ ಬೀಸುತ್ತಿರುವ ಗಾಳಿ ಒಣಗಿದ್ದು, ತೇವಾಂಶವನ್ನು ಹೊಂದಿಲ್ಲ. ಇದರಿಂದ ವಿಶೇಷವಾಗಿ ಕರ್ನಾಟಕದ ದಕ್ಷಿಣ ಭಾಗ ಮತ್ತು ಒಳನಾಡು ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಬಿಸಿಗಾಳಿಯ ಅನುಭವವಾಗುತ್ತಿದ್ದರೂ, ಇದನ್ನು ಸದ್ಯ ಬಿಸಿಗಾಳಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಬಿಸಿಗಾಳಿ ಎಂದು ಘೋಷಿಸಲು ಅಗತ್ಯವಿರುವ ಮಾನದಂಡಗಳು ಇನ್ನೂ ಪೂರೈಸಿಲ್ಲ ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಇಂತಹ ಪರಿಸ್ಥಿತಿ ಅಸಾಮಾನ್ಯವಾಗಿದ್ದು, ಈ ಋತುವಿನಲ್ಲಿ ಬೆಂಗಳೂರು 232 ಮಿಲಿಮೀಟರ್ ಮಳೆ ಕೊರತೆಯನ್ನೂ ದಾಖಲಿಸಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಗರಿಷ್ಠ ತಾಪಮಾನ ದಾಖಲೆಗಳು (ಐಎಂಡಿ ಅಂಕಿ-ಅಂಶ)...

  • 2025ರ ಸೆಪ್ಟೆಂಬರ್ 11ರಂದು — 29.9 ಡಿಗ್ರಿ ಸೆಲ್ಸಿಯಸ್

  • 2024ರ ಸೆಪ್ಟೆಂಬರ್ 21ರಂದು — 31.6 ಡಿಗ್ರಿ ಸೆಲ್ಸಿಯಸ್

  • 2023ರ ಸೆಪ್ಟೆಂಬರ್ 23ರಂದು — 30.8 ಡಿಗ್ರಿ ಸೆಲ್ಸಿಯಸ್

  • 2022ರ ಸೆಪ್ಟೆಂಬರ್ 6ರಂದು — 31 ಡಿಗ್ರಿ ಸೆಲ್ಸಿಯಸ್

  • 2021ರ ಸೆಪ್ಟೆಂಬರ್ 20ರಂದು — 31.3 ಡಿಗ್ರಿ ಸೆಲ್ಸಿಯಸ್

  • 2020ರ ಸೆಪ್ಟೆಂಬರ್ 10ರಂದು — 30.6 ಡಿಗ್ರಿ ಸೆಲ್ಸಿಯಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.