ರಾಜ್ಯ

ಮದ್ಯ ಸೇವನೆಯಲ್ಲಿ ಕರ್ನಾಟಕ ಟಾಪ್: ದೇಶದ ಸರಾಸರಿಯನ್ನೂ ಮೀರಿದ ತಲಾ ಬಳಕೆ; ವ್ಯಸನ ತಡೆಯಲು ತಜ್ಞರು ನೀಡಿದ ಸಲಹೆಗಳೇನು?

ದೇಶದ ದಕ್ಷಿಣ ಭಾರತದ ಐದು ರಾಜ್ಯಗಳು ಒಟ್ಟಾಗಿ ದೇಶದ ಒಟ್ಟು ಮದ್ಯ ಮಾರಾಟದ ಶೇ.45ರಷ್ಟು ಪಾಲು ಹೊಂದಿದ್ದು, ಕರ್ನಾಟಕವೂ ಈ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ.

ಮದ್ಯ ಸೇವನೆಯಲ್ಲಿ ಕರ್ನಾಟಕ ಟಾಪ್: ದೇಶದ ಸರಾಸರಿಯನ್ನೂ ಮೀರಿದ ತಲಾ ಬಳಕೆ; ವ್ಯಸನ ತಡೆಯಲು ತಜ್ಞರು ನೀಡಿದ ಸಲಹೆಗಳೇನು?
ಸಂಗ್ರಹ ಚಿತ್ರ
Published On :

ಬೆಂಗಳೂರು: ದೇಶದಲ್ಲಿ ತಲಾ ಮದ್ಯ ಸೇವನೆ (Per Capita Alcohol Consumption) ಪ್ರಮಾಣ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಪ್ರಮುಖ ಸ್ಥಾನದಲ್ಲಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5) ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 9.1 ಲೀಟರ್ ಮದ್ಯ ಸೇವಿಸುತ್ತಿದ್ದು, ಇದು ದೇಶದ ಸರಾಸರಿ 6.4 ಲೀಟರ್‌ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಆಸಕ್ತಿಕರ ಸಂಗತಿಯೆಂದರೆ, ರಾಜ್ಯದ ಕೇವಲ ಶೇ.11ರಷ್ಟು ಜನ ಮಾತ್ರ ಮದ್ಯ ಸೇವಿಸುತ್ತಾರೆ. ಆದರೂ, ಮದ್ಯಪಾನ ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸುತ್ತಿರುವುದು ತಜ್ಞರ ಆತಂಕಕ್ಕೆ ಕಾರಣವಾಗಿದೆ.

ತಜ್ಞರ ಪ್ರಕಾರ, ದೇಶದ ದಕ್ಷಿಣ ಭಾರತದ ಐದು ರಾಜ್ಯಗಳು ಒಟ್ಟಾಗಿ ದೇಶದ ಒಟ್ಟು ಮದ್ಯ ಮಾರಾಟದ ಶೇ.45ರಷ್ಟು ಪಾಲು ಹೊಂದಿದ್ದು, ಕರ್ನಾಟಕವೂ ಈ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ.

ಬುಧವಾರ ಬೆಂಗಳೂರಿನಲ್ಲಿ ನಿಮ್ಹಾನ್ಸ್ (NIMHANS) ವತಿಯಿಂದ ಆಯೋಜಿಸಿದ್ದ 'ಮದ್ಯ ಸೇವನೆಯಿಂದಾಗುವ ಹಾನಿ ಕಡಿಮೆ ಮಾಡುವ ಬಹುಪಾಲುದಾರರ ದೃಷ್ಟಿಕೋನ' ಕುರಿತ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಈ ವಿಷಯ ಪ್ರಮುಖ ಚರ್ಚೆಯಾಯಿತು.

ಮದ್ಯ ಸೇವನೆ ಹೆಚ್ಚಲು ಕಾರಣಗಳೇನು?

ತಜ್ಞರ ಅಭಿಪ್ರಾಯದಂತೆ, ಜನರ ಆದಾಯ ಹೆಚ್ಚಾಗಿರುವುದು, ಜೀವನಶೈಲಿಯಲ್ಲಿನ ಬದಲಾವಣೆ, ನಗರೀಕರಣ, ಖರ್ಚು ಮಾಡುವ ವಿಧಾನದಲ್ಲಿನ ಬದಲಾವಣೆ ಹಾಗೂ ಸಾಮಾಜಿಕವಾಗಿ ಮದ್ಯಪಾನವನ್ನು ಒಪ್ಪಿಕೊಳ್ಳುವ ಮನೋಭಾವ ಹೆಚ್ಚುತ್ತಿರುವುದು ಮದ್ಯ ಸೇವನೆ ಹೆಚ್ಚಲು ಪ್ರಮುಖ ಕಾರಣಗಳಾಗಿವೆ.

ಸ್ಥಳೀಯ ಸಮೀಕ್ಷೆಗಳು ಹಾಗೂ ಅಧ್ಯಯನಗಳ ಪ್ರಕಾರ, ನಗರ ಪ್ರದೇಶದ ಯುವಕರು ಹಾಗೂ ದುಡಿಯುವ ವರ್ಗದವರಲ್ಲಿ 18ರಿಂದ 20 ವರ್ಷದೊಳಗಿನ ವಯಸ್ಸಿನಲ್ಲೇ ಮದ್ಯ ಸೇವನೆ ಆರಂಭವಾಗುತ್ತಿದೆ. ಸ್ನೇಹಿತರ ಒತ್ತಡ ಮತ್ತು ಸಾಮಾಜಿಕ ಕೂಟಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಹದಿಹರೆಯದಲ್ಲೇ ಮದ್ಯ ಸೇವನೆ ಆರೋಗ್ಯಕ್ಕೆ ದೊಡ್ಡ ಅಪಾಯ

ನಿಮ್ಹಾನ್ಸ್‌ನ ಮನೋವೈದ್ಯಕೀಯ ವಿಭಾಗದ ಮಾಜಿ ಮುಖ್ಯಸ್ಥ ಡಾ. ವಿವೇಕ್ ಬೆನಗಲ್ ಮಾತನಾಡಿ, ಮದ್ಯ ಸೇವನೆ ಆರಂಭಿಸುವ ವಯಸ್ಸನ್ನು ಸಾಧ್ಯವಾದಷ್ಟು ಮುಂದೂಡುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪರಿಣಾಮಕಾರಿ ಕ್ರಮ ಎಂದು ಹೇಳಿದ್ದಾರೆ.

15 ಅಥವಾ 16ನೇ ವಯಸ್ಸಿನಲ್ಲೇ ಮದ್ಯ ಸೇವನೆ ಆರಂಭಿಸುವವರಲ್ಲಿ ಮುಂದೆ ಮದ್ಯದ ವ್ಯಸನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚು. 25 ವರ್ಷಗಳ ನಂತರ ಮದ್ಯ ಸೇವನೆ ಆರಂಭಿಸುವವರಿಗಿಂತ ಇವರಲ್ಲಿ ಅಪಾಯ ಹಲವು ಪಟ್ಟು ಹೆಚ್ಚಿರುತ್ತದೆ," ಎಂದು ತಿಳಿಸಿದ್ದಾರೆ.

ಹದಿಹರೆಯದಲ್ಲಿ ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಈ ಅವಧಿಯಲ್ಲಿ ಮದ್ಯ ಸೇವನೆಯು ವ್ಯಸನ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಇತರ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ಸಂಪೂರ್ಣ ನಿಷೇಧ ಪರಿಹಾರವಲ್ಲ

ಮದ್ಯ ನಿಷೇಧವೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಸಂಪೂರ್ಣ ನಿಷೇಧ ಜಾರಿಗೊಳಿಸಿದರೆ ಅಕ್ರಮ ಮದ್ಯ ಮಾರಾಟ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ಮತ್ತಷ್ಟು ಅಪಾಯ ಎದುರಾಗಬಹುದು ಎಂದು ಡಾ. ಬೆನಗಲ್ ಅಭಿಪ್ರಾಯಪಟ್ಟರು.

ತಜ್ಞರ ಶಿಫಾರಸುಗಳೇನು?

  • ಹೆಚ್ಚಿನ ಆಲ್ಕೋಹಾಲ್ ಅಂಶವಿರುವ ಮದ್ಯದ ಮೇಲಿನ ತೆರಿಗೆ ಹೆಚ್ಚಿಸುವುದು.

  • ಮದ್ಯ ಲಭ್ಯತೆಯನ್ನು ನಿಯಂತ್ರಿಸುವುದು.

  • ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.

  • ಸೋಡಾ, ಪ್ಯಾಕೇಜ್ಡ್ ನೀರು, ಸಂಗೀತ ಕಾರ್ಯಕ್ರಮ ಹಾಗೂ ಕ್ರೀಡಾ ಪ್ರಾಯೋಜಕತ್ವದ ಮೂಲಕ ನಡೆಯುವ ಪರೋಕ್ಷ ಮದ್ಯ ಜಾಹೀರಾತುಗಳಿಗೆ ಕಡಿವಾಣ ಹಾಕುವುದು.

  • ಆಸ್ಪತ್ರೆಗಳಲ್ಲಿ ಮದ್ಯ ಸೇವನೆ ಕುರಿತ ನಿಯಮಿತ ತಪಾಸಣೆ ಆರಂಭಿಸುವುದು.

ಸಭೆಯಲ್ಲಿ ಪಾಲ್ಗೊಂಡ ಇತರ ತಜ್ಞರು, ಕೇವಲ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಂದ ಯುವಕರಲ್ಲಿ ಮದ್ಯ ಸೇವನೆ ಕಡಿಮೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಶಾಲೆ-ಕಾಲೇಜುಗಳನ್ನು ಮಾದಕ ವಸ್ತು ಮುಕ್ತ ಆವರಣಗಳನ್ನಾಗಿ ರೂಪಿಸುವುದು, ಪೋಷಕರು ಹಾಗೂ ಶಿಕ್ಷಕರ ಪಾತ್ರವನ್ನು ಬಲಪಡಿಸುವುದು, ಜೀವನ ಕೌಶಲ್ಯ ಶಿಕ್ಷಣ ಮತ್ತು ಸಮಾಲೋಚನಾ ಸೇವೆಗಳನ್ನು ಒದಗಿಸುವುದು ಅಗತ್ಯ ಎಂದು ಹೇಳಿದರು.

ಜೊತೆಗೆ, ಮದ್ಯದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗಿಂತಲೂ ರಸ್ತೆ ಅಪಘಾತಗಳು, ಹಿಂಸಾಚಾರ, ಕುಟುಂಬ ಸಂಬಂಧಗಳ ಹಾನಿ ಹಾಗೂ ಶೈಕ್ಷಣಿಕ ಸಾಧನೆಯ ಮೇಲಿನ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಭಿಯಾನಗಳನ್ನು ನಡೆಸಬೇಕು ಎಂದು ತಜ್ಞರು ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.