ಪ್ರವಾಸ

ದಸರಾ ರಜೆಗೆ ಎಲ್ಲಿಗೆ ಹೋಗ್ತೀರಾ? ಕರ್ನಾಟಕದಲ್ಲೇ ಇವೆ ನೋಡಲೇಬೇಕಾದ ಸ್ವರ್ಗಸದೃಶ ತಾಣಗಳು!

ನಾಡಹಬ್ಬದ ಸಂಭ್ರಮದಲ್ಲೇ ನಾಡನ್ನು ನೋಡುವ ಸಮಯ ಇದು. ಈ ದಸರಾ ರಜೆಗೆ ಪಾಸ್‌ಪೋರ್ಟ್ ಬೇಡ, ಪ್ಲಾನ್ ಮಾತ್ರ ಸಾಕು. ಅರಮನೆಯಿಂದ ಬೀಚ್ ವರೆಗೆ - ಕರ್ನಾಟಕದ ಮಸ್ತ್ ತಾಣಗಳ ಕುರಿತ ಮಾಹಿತಿ ಇಲ್ಲಿದೆ:

ದಸರಾ ರಜೆಗೆ ಎಲ್ಲಿಗೆ ಹೋಗ್ತೀರಾ? ಕರ್ನಾಟಕದಲ್ಲೇ ಇವೆ ನೋಡಲೇಬೇಕಾದ ಸ್ವರ್ಗಸದೃಶ ತಾಣಗಳು!
ಕರ್ನಾಟಕ: ಒಂದು ರಾಜ್ಯ, ಹಲವು ಜಗತ್ತು — AI Image
Published On :

Dasara Holidays 2026: ದಸರಾ ಬಂದ್ರೆ ಸಾಕು, ಮನಸ್ಸು ಮನೆಯಲ್ಲಿ ಕೂರಲ್ಲ. ಎಲ್ಲೋ ದೂರ ಹೋಗಬೇಕು, ವಿಮಾನ ಹತ್ತಬೇಕು ಅಂತಲ್ಲ... ದೀಪಗಳಿಂದ ಮಿನುಗುವ ಅರಮನೆ, ಮಂಜು ಹೊದ್ದ ಕಾಫಿ ತೋಟ, ಕಲ್ಲಲ್ಲಿ ಕಥೆ ಹೇಳೋ ಹಂಪಿ, ಮೋಡ ಮುಟ್ಟೋ ಮುಳ್ಳಯ್ಯನಗಿರಿ, ಅಲೆಯ ಜೊತೆ ಮಾತಾಡೋ ಗೋಕರ್ಣ - ಇದೆಲ್ಲಾ ನೋಡಲು ಬೇರೆಲ್ಲೂ ಹೋಗಬೇಕಿಲ್ಲ. ನಮ್ಮ ಕರ್ನಾಟಕದಲ್ಲೇ ಇದೆ. ಈ ದಸರಾ ರಜೆಗೆ, ಕರ್ನಾಟಕವನ್ನೇ ಸುತ್ತೋಣ.

1. ಮಡಿಕೇರಿ (ಕೊಡಗು) - ದಕ್ಷಿಣದ ಕಾಶ್ಮೀರ

ಅಬ್ಬೆ ಜಲಪಾತ, ಮಡಿಕೇರಿ
ಅಬ್ಬೆ ಜಲಪಾತ, ಮಡಿಕೇರಿ — Online Desk

ಮಡಿಕೇರಿ ದಸರಾ ರಜೆಗೆ ಕುಟುಂಬದೊಂದಿಗೆ ಭೇಟಿ ನೀಡಲು ಮಡಿಕೇರಿ ಅತ್ಯುತ್ತಮ ಆಯ್ಕೆಯಾಗಿದೆ. ಮುಂಗಾರು ಮಳೆಯ ನಂತರ ಇಲ್ಲಿನ ಹಸಿರು ಮತ್ತು ಮಂಜಿನ ವಾತಾವರಣ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

  • ಪ್ರಮುಖ ಆಕರ್ಷಣೆಗಳು: ರಾಜಾ ಸೀಟ್, ಅಬ್ಬೆ ಜಲಪಾತ, ಮಡಿಕೇರಿ ಕೋಟೆ ಮತ್ತು ಮಂದಾಲಪಟ್ಟಿ ಬೆಟ್ಟಗಳು.

  • ವಿಶೇಷತೆ: ಮಡಿಕೇರಿಯಲ್ಲಿ ನಡೆಯುವ ದಸರಾ ಕರಗ ಮತ್ತು ದಶಮಂಟಪಗಳ ಮೆರವಣಿಗೆ ಮೈಸೂರು ದಸರಾದಷ್ಟೇ ಪ್ರಸಿದ್ಧವಾಗಿದ್ದು, ಸಾಂಸ್ಕೃತಿಕ ವೈಭವವನ್ನು ಕಣ್ಣುಂಬಿಕೊಳ್ಳಬಹುದು.

2. ಮೈಸೂರು - ಸಾಂಸ್ಕೃತಿಕ ನಗರಿ (ದಸರಾ ಸಾಂಸ್ಕೃತಿಕ ವೈಭವ)

ಮೈಸೂರು ಅರಮನೆ, ಮೈಸೂರು
ಮೈಸೂರು ಅರಮನೆ, ಮೈಸೂರು — Online Desk

ದಸರಾ ರಜೆಯ ಪ್ರಸ್ತಾಪ ಬಂದಾಗ ಮೈಸೂರನ್ನು ಬಿಟ್ಟು ಯೋಚಿಸಲು ಸಾಧ್ಯವೇ ಇಲ್ಲ. ಹಬ್ಬದ ದಿನಗಳಲ್ಲಿ ಇಡೀ ನಗರವೇ ವಧುವಿನಂತೆ ಕಂಗೊಳಿಸುತ್ತದೆ.

  • ಪ್ರಮುಖ ಆಕರ್ಷಣೆಗಳು: ವಿದ್ಯುತ್ ದೀಪಗಳಿಂದ ಜಗಮಗಿಸುವ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಕೆಆರ್‌ಎಸ್ ಅಣೆಕಟ್ಟು (ಬೃಂದಾವನ ಗಾರ್ಡನ್), ಮತ್ತು ಮೈಸೂರು ಮೃಗಾಲಯ.

  • ವಿಶೇಷತೆ: ಅರಮನೆಯ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಆಹಾರ ಮೇಳ ಮತ್ತು ವಿಜಯದಶಮಿಯ ಅದ್ದೂರಿ ಜಂಬೂ ಸವಾರಿ ಮೆರವಣಿಗೆಯನ್ನು ಕಣ್ಣುಂಬಿಕೊಳ್ಳಲು ವಿಶ್ವದಾದ್ಯಂತ ಜನ ಸೇರುತ್ತಾರೆ. ಹಬ್ಬದ ನೈಜ ವಾತಾವರಣ ಅನುಭವಿಸಲು ಇದು ಅತ್ಯುತ್ತಮ ಸ್ಥಳ.

ಇದೇ ವೇಳೆ, ದಸರಾ ಸಮಯದಲ್ಲಿ ಸುಲಭವಾಗಿ ಪ್ಲಾನ್ ಮಾಡಬಹುದಾದ ಮತ್ತೊಂದು ಅದ್ಭುತ ತಾಣ ಕಬಿನಿ. ಪ್ರಕೃತಿ ಮತ್ತು ಪ್ರಾಣಿ ಪ್ರಿಯರಿಗೆ ಇದು ಸ್ವರ್ಗಸದೃಶ ಅನುಭವ ನೀಡುತ್ತದೆ. ಅದರಂತೆ, ಇಲ್ಲಿ ನದಿಯ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುತ್ತಾ ಆನೆಗಳ ಹಿಂಡು, ಹುಲಿ, ಚಿರತೆ ಹಾಗೂ ಅಪರೂಪದ ಕಪ್ಪು ಚಿರತೆಯನ್ನು (Black Panther) ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತದೆ.

3. ಚಿಕ್ಕಮಗಳೂರು - ಕಾಫಿ ನಾಡಿನ ಸೌಂದರ್ಯ

ಮುಳ್ಳಯ್ಯನಗಿರಿ, ಚಿಕ್ಕಮಗಳೂರು
ಮುಳ್ಳಯ್ಯನಗಿರಿ, ಚಿಕ್ಕಮಗಳೂರು — Online Desk

ಚಿಕ್ಕಮಗಳೂರು ಬೆಟ್ಟಗುಡ್ಡಗಳ ಸಾಲು ಮತ್ತು ಕಾಫಿ ತೋಟಗಳ ನಡುವೆ ರಜೆ ಕಳೆಯಲು ಬಯಸುವವರಿಗೆ ಚಿಕ್ಕಮಗಳೂರು ಮಸ್ತಾದ ಸ್ಥಳವಾಗಿದೆ. ಶಾಂತಿಯುತ ವಾತಾವರಣದಲ್ಲಿ ವಿಶ್ರಾಂತಿ ಪಡೆಯಲು ಇದು ಸೂಕ್ತವಾಗಿದೆ.

  • ಪ್ರಮುಖ ಆಕರ್ಷಣೆಗಳು: ಮುಳ್ಳಯ್ಯನಗಿರಿ (ಕರ್ನಾಟಕದ ಅತಿ ಎತ್ತರದ ಶಿಖರ), ಕೆಮ್ಮಣ್ಣುಗುಂಡಿ, ಬಾಬಾಬುಡನ್‌ಗಿರಿ ಮತ್ತು ಹೆಬ್ಬೆ ಜಲಪಾತ.

  • ವಿಶೇಷತೆ: ಚಾರಣ ಪ್ರಿಯರಿಗೆ ಮತ್ತು ಹೋಂಸ್ಟೇಗಳಲ್ಲಿ ಪ್ರಕೃತಿಯ ಸೌಂದರ್ಯ ಆಸ್ವಾದಿಸಲು ಬಯಸುವವರಿಗೆ ಇದು ಸ್ವರ್ಗ.

4. ಹಂಪಿ (ವಿಜಯನಗರ) - ಇತಿಹಾಸದ ಭವ್ಯತೆ

ವಿರೂಪಾಕ್ಷ ದೇವಾಲಯ, ಹಂಪಿ
ವಿರೂಪಾಕ್ಷ ದೇವಾಲಯ, ಹಂಪಿ — Online Desk

ಹಂಪಿ  ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಕ್ಕೆ ಭೇಟಿ ನೀಡಲು ಇಷ್ಟಪಡುವವರು ಯುನೆಸ್ಕೋ ಪರಂಪರೆಯ ತಾಣವಾದ ಹಂಪಿಗೆ ಭೇಟಿ ನೀಡಬಹುದು.

  • ಪ್ರಮುಖ ಆಕರ್ಷಣೆಗಳು: ವಿರೂಪಾಕ್ಷ ದೇವಸ್ಥಾನ, ಕಲ್ಲಿನ ರಥ, ವಿಜಯ ವಿಠಲ ದೇವಸ್ಥಾನ ಮತ್ತು ಉಗ್ರ ನರಸಿಂಹ ಮೂರ್ತಿ.

  • ವಿಶೇಷತೆ: ಅಕ್ಟೋಬರ್ ತಿಂಗಳಿನಲ್ಲಿ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ. ಕಲೆ, ವಾಸ್ತುಶಿಲ್ಪ ಮತ್ತು ಇತಿಹಾಸದ ಬಗ್ಗೆ ಆಸಕ್ತಿಯುಳ್ಳವರಿಗೆ ಇದು ಅತ್ಯುತ್ತಮ ಶೈಕ್ಷಣಿಕ ಪ್ರವಾಸವೂ ಹೌದು.

5. ದಾಂಡೇಲಿ ಮತ್ತು ಗೋಕರ್ಣ (ಉತ್ತರ ಕನ್ನಡ)

ಶ್ರೀ ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ
ಶ್ರೀ ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ — Online Desk

ಗೋಕರ್ಣ ದಸರಾ ರಜೆಯಲ್ಲಿ ಬೀಚ್‌ಗಳ ಸೌಂದರ್ಯ ಸವಿಯಲು ಗೋಕರ್ಣ ಸೂಕ್ತವಾದ ಜಾಗ. ಇದು ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ತಾಣ ಎರಡರ ಸಮ್ಮಿಶ್ರಣವಾಗಿದೆ. ಇದರೊಂದಿಗೆ, ಪ್ರಕೃತಿ ಮಡಿಲಿನಲ್ಲಿ ಸಾಹಸ ಚಟುವಟಿಕೆಗಳನ್ನು ಆನಂದಿಸಲು ಬಯಸುವರಿಗೆ ದಾಂಡೇಲಿ ಹೇಳಿಮಾಡಿಸಿದ ತಾಣ. ಕಾಳಿ ನದಿಯ ತೀರದಲ್ಲಿರುವ ಈ ದಟ್ಟಾರಣ್ಯವು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ.

  • ಪ್ರಮುಖ ಆಕರ್ಷಣೆಗಳು: ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್ ಮತ್ತು ಶ್ರೀ ಮಹಾಬಲೇಶ್ವರ ದೇವಸ್ಥಾನ, ಸುಪಾ ಅಣೆಕಟ್ಟು.

  • ವಿಶೇಷತೆ: ಗೋವಾದ ಗದ್ದಲದಿಂದ ದೂರವಿದ್ದು, ಪ್ರಶಾಂತವಾದ ಕಡಲತೀರಗಳಲ್ಲಿ ಜಲಕ್ರೀಡೆಗಳು ಮತ್ತು ಸೂರ್ಯಾಸ್ತವನ್ನು ವೀಕ್ಷಿಸಲು ಗೋಕರ್ಣ ಅತ್ಯುತ್ತಮ ಆಯ್ಕೆ. ಜೊತೆಗೆ, ಕಾಳಿ ನದಿಯಲ್ಲಿ ವೈಟ್ ವಾಟರ್ ರಾಫ್ಟಿಂಗ್, ಜಿಪ್‌ಲೈನಿಂಗ್, ಕಯಾಕಿಂಗ್ ಜೊತೆಗೆ ಕಾಡಿನ ಮಧ್ಯೆ ಕ್ಯಾಂಪಿಂಗ್ ಮತ್ತು ಜಂಗಲ್ ಸಫಾರಿಯ ಮಜಾ ಮಾಡಲು ದಾಂಡೇಲಿ ಬೆಸ್ಟ್.

ಇದರೊಂದಿಗೆ, ಧಾರ್ಮಿಕ ಶ್ರದ್ಧೆ ಹಾಗೂ ಕಡಲತೀರದ ರಮಣೀಯ ಪ್ರಕೃತಿ ಸೌಂದರ್ಯ ಎರಡನ್ನೂ ಒಟ್ಟಿಗೆ ಅನುಭವಿಸಲು ಬಯಸುವವರಿಗೆ ಉತ್ತರ ಕನ್ನಡದ ಮುರುಡೇಶ್ವರ ಅತ್ಯಂತ ಸೂಕ್ತವಾದ ತಾಣವಾಗಿದೆ. ಮೂರು ಕಡೆ ಅರಬ್ಬೀ ಸಮುದ್ರದಿಂದ ಸುತ್ತುವರಿದಿರುವ ಈ ಪುಣ್ಯಕ್ಷೇತ್ರವು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುತ್ತದೆ.

6. ಜೋಗ ಜಲಪಾತ (ಶಿವಮೊಗ್ಗ) - ಪ್ರಕೃತಿಯ ವೈಭವ

ಜೋಗ ಜಲಪಾತ, ಶಿವಮೊಗ್ಗ
ಜೋಗ ಜಲಪಾತ, ಶಿವಮೊಗ್ಗ — Online Desk

ಜೋಗ ಜಲಪಾತ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗ ಜಲಪಾತವು ದಸರಾ ಸಮಯದಲ್ಲಿ ಭೋರ್ಗರೆದು ಹರಿಯುತ್ತದೆ. ಶರಾವತಿ ನದಿಯ ಈ ಭವ್ಯ ರೂಪವನ್ನು ನೋಡಲು ಎರಡು ಕಣ್ಣುಗಳು ಸಾಲದು.

  • ಪ್ರಮುಖ ಆಕರ್ಷಣೆಗಳು: ರಾಜಾ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ಧಾರೆಗಳು.

  • ವಿಶೇಷತೆ: ಮಳೆಗಾಲ ಮುಗಿದ ತಕ್ಷಣವೇ ಈ ಸಮಯ ಇರುವುದರಿಂದ ಜಲಪಾತದ ಸೌಂದರ್ಯ ಪೂರ್ಣ ಪ್ರಮಾಣದಲ್ಲಿರುತ್ತದೆ. ಹತ್ತಿರದಲ್ಲೇ ಇರುವ ಲಿಂಗನಮಕ್ಕಿ ಜಲಾಶಯಕ್ಕೂ ಭೇಟಿ ನೀಡಬಹುದು.

7. ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು (ಬಾಗಲಕೋಟೆ) - ಚಾಲುಕ್ಯರ ಶಿಲ್ಪಕಲಾ ವೈಭವ

ಭೂತನಾಥ ದೇವಸ್ಥಾನ, ಬಾದಾಮಿ, ಬಾಗಲಕೋಟೆ
ಭೂತನಾಥ ದೇವಸ್ಥಾನ, ಬಾದಾಮಿ, ಬಾಗಲಕೋಟೆ — Online Desk

ಇತಿಹಾಸ ಮತ್ತು ಶಿಲ್ಪಕಲೆಯ ಅದ್ಭುತ ಲೋಕವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಉತ್ತರ ಕರ್ನಾಟಕದ ಈ ತಾಣಗಳು ಹೇಳಿಮಾಡಿಸಿದಂತಿವೆ. ಅಕ್ಟೋಬರ್ ತಿಂಗಳ ತಂಪಾದ ವಾತಾವರಣದಲ್ಲಿ ಈ ಐತಿಹಾಸಿಕ ತಾಣಗಳನ್ನು ಸುತ್ತುವುದು ಅತ್ಯಂತ ಆಹ್ಲಾದಕರ ಅನುಭವ ನೀಡುತ್ತದೆ.

  • ಪ್ರಮುಖ ಆಕರ್ಷಣೆಗಳು: ಬಾದಾಮಿ ಗುಹಾ ದೇವಾಲಯಗಳು, ಭೂತನಾಥ ದೇವಾಲಯ ಸಂಕೀರ್ಣ, ಅಗಸ್ತ್ಯ ತೀರ್ಥ ಕೆರೆ ಹಾಗೂ ಪಟ್ಟದಕಲ್ಲಿನ ಯುನೆಸ್ಕೋ ಪಾರಂಪರಿಕ ಸ್ಮಾರಕಗಳು.

  • ವಿಶೇಷತೆ: ಕೆಂಪು ಮರಳುಗಲ್ಲಿನ ಬಂಡೆಗಳನ್ನು ಕೊರೆದು ನಿರ್ಮಿಸಿರುವ ಚಾಲುಕ್ಯರ ಕಾಲದ ಅದ್ಭುತ ವಾಸ್ತುಶಿಲ್ಪ ಹಾಗೂ ಛಾಯಾಗ್ರಹಣ ಪ್ರಿಯರಿಗೆ ಹೇಳಿಮಾಡಿಸಿದ ಜಾಗ.

8. ಉಡುಪಿ ಮತ್ತು ಮಲ್ಪೆ (ಕರಾವಳಿ ಸೌಂದರ್ಯ)

ಶ್ರೀ ಕೃಷ್ಣ ಮಠ, ಉಡುಪಿ
ಶ್ರೀ ಕೃಷ್ಣ ಮಠ, ಉಡುಪಿ — Online Desk

ಧಾರ್ಮಿಕ ಶ್ರದ್ಧೆ ಹಾಗೂ ಕಡಲತೀರದ ಮಜಾ ಎರಡನ್ನೂ ಒಟ್ಟಿಗೆ ಅನುಭವಿಸಲು ಉಡುಪಿ ಅತ್ಯುತ್ತಮ ಆಯ್ಕೆ. ಕುಟುಂಬ ಸಮೇತ ರಜೆ ಕಳೆಯಲು ಇದು ಹೇಳಿಮಾಡಿಸಿದ ಸ್ಥಳ.

  • ಪ್ರಮುಖ ಆಕರ್ಷಣೆಗಳು: ಉಡುಪಿ ಶ್ರೀಕೃಷ್ಣ ಮಠ, ಮಲ್ಪೆ ಬೀಚ್, ಸೇಂಟ್ ಮೇರಿಸ್ ಐಲ್ಯಾಂಡ್, ಕಾಪು ಲೈಟ್‌ಹೌಸ್ ಬೀಚ್ ಮತ್ತು ಡೆಲ್ಟಾ ಬೀಚ್.

  • ವಿಶೇಷತೆ: ಮಲ್ಪೆ ಬೀಚ್‌ನಲ್ಲಿ ವಾಟರ್ ಸ್ಪೋರ್ಟ್ಸ್, ಸಮುದ್ರದ ಮಧ್ಯೆ ಇರುವ ವಿಶಿಷ್ಟ ಶಿಲಾರಚನೆಗಳ ಸೇಂಟ್ ಮೇರಿಸ್ ದ್ವೀಪ ಹಾಗೂ ಕರಾವಳಿಯ ರುಚಿಕರ ಊಟದ ಸವಿಯನ್ನು ಆನಂದಿಸಬಹುದು.

9. ಬಿಳಿಗಿರಿರಂಗನ ಬೆಟ್ಟ / ಬಿಆರ್‌ಟಿ ವನ್ಯಧಾಮ (ಚಾಮರಾಜನಗರ)

ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ಚಾಮರಾಜನಗರ
ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ಚಾಮರಾಜನಗರ — Online Desk

ಪಶ್ಚಿಮ ಘಟ್ಟ ಮತ್ತು ಪೂರ್ವ ಘಟ್ಟಗಳು ಸಂಧಿಸುವ ಈ ಸುಂದರ ಗಿರಿಧಾಮವು ಪ್ರಶಾಂತ ವಾತಾವರಣವನ್ನು ಬಯಸುವ ಪ್ರವಾಸಿಗರಿಗೆ ಅತ್ಯುತ್ತಮ ಆಯ್ಕೆ.

  • ಪ್ರಮುಖ ಆಕರ್ಷಣೆಗಳು: ಬೆಟ್ಟದ ತುದಿಯಲ್ಲಿರುವ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ, ಕೆ.ಗುಡಿ ಜಂಗಲ್ ಲಾಡ್ಜಸ್ ಮತ್ತು ವನ್ಯಜೀವಿ ಸಫಾರಿ.

  • ವಿಶೇಷತೆ: ಹಚ್ಚಹಸಿರಿನ ಬೆಟ್ಟಗುಡ್ಡಗಳ ವಿಹಂಗಮ ನೋಟದ ಜೊತೆಗೆ ತಂಪಾದ ತಂಗಾಳಿ ಮತ್ತು ಕಾಡಿನ ಸಫಾರಿ ಅನುಭವ.

ಟ್ರಾವೆಲ್ ಟಿಪ್ಸ್

  • ದಸರಾ ಸಮಯದಲ್ಲಿ ಮೈಸೂರು ಮತ್ತು ಕೊಡಗಿನಲ್ಲಿ ಹೋಟೆಲ್ ಬೆಲೆ ಜಾಸ್ತಿ ಇರುತ್ತದೆ, ಮೊದಲೇ ಬುಕ್ ಮಾಡಿ. ಕೆಎಸ್ಆರ್ಟಿಸಿ ಅಂಬಾರಿ ಉತ್ಸವ ವಿಶೇಷ ಪ್ಯಾಕೇಜ್ ಕೂಡ ಕೊಡುತ್ತದೆ.

  • ಸ್ವಂತ ಕಾರಿನಲ್ಲಿ ಹೋಗುವವರು ಬೆಳಿಗ್ಗೆ ಬೇಗ ಹೊರಡಿ.

  • 19 ದಿನ ರಜೆ ಇದೆ, ಒಂದೇ ಜಾಗಕ್ಕೆ ಹೋಗದೆ 2-3 ಜಾಗಗಳನ್ನು ಕವರ್ ಮಾಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.