'ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ': ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ; ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
ರಾಜ್ಯದಲ್ಲಿ ತೀವ್ರ ಮಳೆ ಕೊರತೆ, ಕುಡಿಯುವ ನೀರಿನ ಬಿಕ್ಕಟ್ಟು ಹಾಗೂ ಕೃಷಿ ವಲಯದಲ್ಲಿ ಉಂಟಾಗಿರುವ ಸಂಕಷ್ಟವನ್ನು ಉಲ್ಲೇಖಿಸಿ, ಬರ ಪರಿಸ್ಥಿತಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಿ ವಿಶೇಷ ಆರ್ಥಿಕ ನೆರವು ನೀಡುವಂತೆ..

ಬೆಂಗಳೂರು: ಬರ ಪರಿಸ್ಥಿತಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಿ ವಿಶೇಷ ಆರ್ಥಿಕ ನೆರವು ನೀಡುವಂತೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಮಳೆ ಕೊರತೆ, ಕುಡಿಯುವ ನೀರಿನ ಬಿಕ್ಕಟ್ಟು ಹಾಗೂ ಕೃಷಿ ವಲಯದಲ್ಲಿ ಉಂಟಾಗಿರುವ ಸಂಕಷ್ಟವನ್ನು ಉಲ್ಲೇಖಿಸಿ, ಬರ ಪರಿಸ್ಥಿತಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಿ ವಿಶೇಷ ಆರ್ಥಿಕ ನೆರವು ನೀಡುವಂತೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X)ನಲ್ಲಿ ಮಾಹಿತಿ ಹಂಚಿಕೊಂಡಿರುವ ಪರಮೇಶ್ವರ್, 'ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಶೇ.42ರಷ್ಟು ಹಾಗೂ ಜುಲೈನಲ್ಲಿ ಇದುವರೆಗೆ ಶೇ.34ರಷ್ಟು ಮಳೆ ಕೊರತೆ ದಾಖಲಾಗಿದೆ. ಈ ಮಳೆ ಕೊರತೆಯಿಂದ ಬೆಳೆಗಳಿಗೆ ಭಾರೀ ಹಾನಿಯಾಗಿದ್ದು, ಅಂತರ್ಜಲ ಮಟ್ಟ ಕುಸಿತ, ಜಲಾಶಯಗಳಿಗೆ ನೀರಿನ ಹರಿವು ಕಡಿಮೆಯಾಗಿರುವುದು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ ಎಂದು ಅವರು ಹೇಳಿದ್ದಾರೆ.
"ಕರ್ನಾಟಕದಲ್ಲಿ ತೀವ್ರ ಮಳೆ ಕೊರತೆ, ಕುಡಿಯುವ ನೀರಿನ ಬಿಕ್ಕಟ್ಟು ಹಾಗೂ ಕೃಷಿ ಮತ್ತು ಗ್ರಾಮೀಣ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಉಂಟಾಗಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ನೆರವು ಕೋರಿ ಪತ್ರ ಬರೆದಿದ್ದೇನೆ" ಎಂದು ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯದ ಹಲವು ಪ್ರದೇಶಗಳಲ್ಲಿ ಬಿತ್ತನೆಯಾದ ಬೆಳೆಗಳಲ್ಲಿ ಸುಮಾರು ಶೇ.80ರಷ್ಟು ನಷ್ಟ ಸಂಭವಿಸಿದೆ ಎಂದು ಅವರು ಉಲ್ಲೇಖಿಸಿದ್ದು, ರೈತರು ಮತ್ತು ಗ್ರಾಮೀಣ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಲಾಶಯಗಳಿಗೆ ನೀರಿನ ಹರಿವು ಕಡಿಮೆಯಾಗಿರುವುದರಿಂದ ಹಾಗೂ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿನ ಭದ್ರತೆಗೂ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.
ಬರ ಪರಿಹಾರ ನಿಯಮಗಳಲ್ಲಿ ಬದಲಾವಣೆಗೆ ಆಗ್ರಹ
ಬರ ಪರಿಹಾರ ವ್ಯವಸ್ಥೆಯನ್ನು ಆಧುನೀಕರಿಸುವಂತೆ ಕೇಂದ್ರ ಸರ್ಕಾರವನ್ನು ಪರಮೇಶ್ವರ್ ಒತ್ತಾಯಿಸಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರ ಗುರುತಿಸುವಿಕೆಗೆ 2015-16ರ ಕೃಷಿ ಜನಗಣತಿ ಮಾಹಿತಿಯ ಬದಲಾಗಿ, ಕರ್ನಾಟಕ ಸರ್ಕಾರದ ನವೀಕರಿಸಿದ FRUITS ಡೇಟಾಬೇಸ್ ಅನ್ನು ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅದೇ ರೀತಿ, ಎಸ್‌ಡಿಆರ್‌ಎಫ್ (SDRF), ಎನ್‌ಡಿಆರ್‌ಎಫ್ (NDRF) ಮಾರ್ಗಸೂಚಿಗಳು ಹಾಗೂ 2020ರ ಬರ ಕೈಪಿಡಿಯಲ್ಲಿರುವ ಬೆಳೆ ನಷ್ಟ ಪರಿಹಾರ ಮಾನದಂಡಗಳನ್ನು ಏಕರೂಪಗೊಳಿಸುವ ಮೂಲಕ ರೈತರಿಗೆ ತ್ವರಿತ ಮತ್ತು ನ್ಯಾಯಸಮ್ಮತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆ ಕೊರತೆಯನ್ನೇ ಬರ ಘೋಷಣೆಗೆ ಮಾನದಂಡ ಮಾಡಿ
ಇದೇ ವೇಳೆ ಬಿತ್ತನೆ ಅವಧಿಯಲ್ಲಿ ಶೇ.20ರಿಂದ ಶೇ.59ರವರೆಗಿನ ಮಳೆ ಕೊರತೆಯನ್ನೂ ಬರ ಘೋಷಣೆಯ ಮಾನದಂಡವಾಗಿ ಪರಿಗಣಿಸಬೇಕು ಎಂದು ಪರಮೇಶ್ವರ್ ಸಲಹೆ ನೀಡಿದ್ದಾರೆ. ಪ್ರಸ್ತುತ ಇರುವಂತೆ ಕೇವಲ ಋತುಮಾನದ ಒಟ್ಟು ಮಳೆ ಪ್ರಮಾಣವನ್ನು ಮಾತ್ರ ಆಧಾರವಾಗಿಟ್ಟುಕೊಳ್ಳದೆ, ಮಳೆ ಕೊರತೆಯನ್ನೂ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಇದಲ್ಲದೆ, ಸ್ಥಳೀಯ ಕೃಷಿ ಹಾಗೂ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಒಣ ಅವಧಿ' (Dry Spell) ಎಂಬ ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಎಂದು ಅವರು ತಿಳಿಸಿದ್ದಾರೆ. ಬೆಳೆ ಬಿತ್ತನೆ ಪೂರ್ಣಗೊಳ್ಳುವವರೆಗೆ ಕಾಯದೆ, ಆರಂಭಿಕ ಹಂತದಲ್ಲಿಯೇ ರಾಜ್ಯ ಸರ್ಕಾರಗಳಿಗೆ ಬರ ಘೋಷಿಸುವ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
'ರಾಷ್ಟ್ರೀಯ ವಿಪತ್ತು' ಘೋಷಣೆಗೆ ಒತ್ತಾಯ
"ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ, ರಾಜ್ಯದ ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಅಥವಾ ಅದಕ್ಕೆ ಸಮಾನವಾದ ವಿಶೇಷ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡಬೇಕು" ಎಂದು ಪರಮೇಶ್ವರ್ ಪತ್ರದಲ್ಲಿ ಮನವಿ ಮಾಡಿದ್ದಾರೆ. ರೈತರ ಹಿತಾಸಕ್ತಿ, ಗ್ರಾಮೀಣ ಜನರ ಜೀವನೋಪಾಯ ಹಾಗೂ ರಾಜ್ಯದ ಕುಡಿಯುವ ನೀರಿನ ಭದ್ರತೆಯನ್ನು ಕಾಪಾಡಲು ಕೇಂದ್ರ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸುವುದು ಅತ್ಯಗತ್ಯ ಎಂದು ಪರಮೇಶ್ವರ್ ಒತ್ತಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



