ಶಾಸಕರ ಭವನದ ವಾಹನ ದುರ್ಬಳಕೆಗೆ ಬ್ರೇಕ್: ವಿಧಾನಸಭಾ ಕಾರ್ಯಾಲಯದಿಂದ ಕಠಿಣ ರೂಲ್ಸ್; ಬಾಡಿಗೆ ನೇರವಾಗಿ ಶಾಸಕರ ವೇತನದಿಂದಲೇ ವಸೂಲಿ..!
ಇನ್ನು ಮುಂದೆ ಶಾಸಕರು ತಮ್ಮ ವೈಯಕ್ತಿಕ ಸಹಾಯಕರು (ಪಿಎ), ಅತಿಥಿಗಳು ಅಥವಾ ಪರಿಚಯಸ್ಥರ ಬಳಕೆಗಾಗಿ ಶಾಸಕರ ಭವನದ ವಾಹನಗಳನ್ನು ಶಿಫಾರಸು ಮಾಡಲು ಅವಕಾಶ ಇರುವುದಿಲ್ಲ.

ಬೆಂಗಳೂರು: ಶಾಸಕರ ಭವನ (ಎಲ್‌ಎಚ್)ದಲ್ಲಿನ ಸರ್ಕಾರಿ ವಾಹನಗಳ ದುರ್ಬಳಕೆಗೆ ಕಡಿವಾಣ ಹಾಕಲು ವಿಧಾನಸಭೆ ಕಾರ್ಯಾಲಯ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಇನ್ನು ಮುಂದೆ ಶಾಸಕರ ಹೆಸರಿನಲ್ಲಿ ಬಳಸಲಾಗುವ ವಾಹನಗಳ ಬಾಡಿಗೆಯನ್ನು ನೇರವಾಗಿ ಸಂಬಂಧಿತ ಶಾಸಕರ ವೇತನದಿಂದಲೇ ವಸೂಲಿ ಮಾಡಲಾಗುತ್ತದೆ. ಜೊತೆಗೆ, ವೈಯಕ್ತಿಕ ಸಹಾಯಕರು, ಅತಿಥಿಗಳು ಹಾಗೂ ಪರಿಚಯಸ್ಥರ ಬಳಕೆಗಾಗಿ ವಾಹನಗಳನ್ನು ಶಿಫಾರಸು ಮಾಡುವ ಪದ್ಧತಿಗೂ ಬ್ರೇಕ್ ಹಾಕಲಾಗಿದ್ದು, ವಾಹನ ಬಳಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು, ಹಾಲಿ ಹಾಗೂ ಮಾಜಿ ಶಾಸಕರಿಗಾಗಿ ಶಾಸಕರ ಭವನದಲ್ಲಿರುವ ವಾಹನಗಳ ಬಳಕೆಗೆ ಸಂಬಂಧಿಸಿದಂತೆ ಈ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಮಾರ್ಗಸೂಚಿಯಂತೆ ಇನ್ನು ಮುಂದೆ ಶಾಸಕರು ತಮ್ಮ ವೈಯಕ್ತಿಕ ಸಹಾಯಕರು (ಪಿಎ), ಅತಿಥಿಗಳು ಅಥವಾ ಪರಿಚಯಸ್ಥರ ಬಳಕೆಗಾಗಿ ಶಾಸಕರ ಭವನದ ವಾಹನಗಳನ್ನು ಶಿಫಾರಸು ಮಾಡಲು ಅವಕಾಶ ಇರುವುದಿಲ್ಲ.
ಶಾಸಕರ ಭವನದ ವಾಹನಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯೊಳಗೆ ಮಾತ್ರ ಬಳಸಬೇಕು. ತುರ್ತು ಪರಿಸ್ಥಿತಿ ಹೊರತುಪಡಿಸಿ ಬೆಂಗಳೂರಿನ ಹೊರಗೆ ವಾಹನಗಳನ್ನು ಕೊಂಡೊಯ್ಯಲು ಅವಕಾಶ ಇರುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ವಾಹನವನ್ನು ಹೊರ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಬೇಕಾದರೆ ವಿಧಾನಸಭಾಧ್ಯಕ್ಷರ ಪೂರ್ವಾನುಮತಿ ಕಡ್ಡಾಯವಾಗಿದೆ.
ಶಾಸಕರ ಹೆಸರಿನಲ್ಲಿ ಅವರ ವೈಯಕ್ತಿಕ ಸಹಾಯಕರು, ಪಕ್ಷದ ಕಾರ್ಯಕರ್ತರು ಹಾಗೂ ಪರಿಚಯಸ್ಥರು ಶಿಫಾರಸು ಪತ್ರಗಳ ಮೂಲಕ ವಾಹನಗಳನ್ನು ಪಡೆದು ಹೊರ ಜಿಲ್ಲೆಗಳಿಗೆ ಬಳಸುತ್ತಿರುವ ಆರೋಪಗಳು ಕೇಳಿಬಂದಿದ್ದವು.
ಇದರಿಂದ ಶಾಸಕರಿಗೆ ಅಗತ್ಯವಿದ್ದ ಸಂದರ್ಭದಲ್ಲಿ ವಾಹನಗಳ ಕೊರತೆ ಉಂಟಾಗುತ್ತಿತ್ತು ಎಂದು ಕಾರ್ಯಾಲಯ ತಿಳಿಸಿದೆ.
ಮೂಲಗಳ ಪ್ರಕಾರ, ಶಾಸಕರ ಭವನದಲ್ಲಿ ಸಭಾಧ್ಯಕ್ಷರು ಮತ್ತು ಉಪಸಭಾಧ್ಯಕ್ಷರು ಸೇರಿದಂತೆ ಶಾಸಕರಿಗಾಗಿ ಸುಮಾರು 80 ವಾಹನಗಳು ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸದಸ್ಯರಿಗಾಗಿ ಸುಮಾರು 40 ವಾಹನಗಳು ಲಭ್ಯವಿವೆ. ಆದರೆ, ವಾಹನಗಳು ಹಾಗೂ ಚಾಲಕರ ಕೊರತೆಯಿರುವ ಹಿನ್ನೆಲೆಯಲ್ಲಿ ಶಾಸಕರ ಅಗತ್ಯಕ್ಕಾಗಿ ವಾಹನಗಳನ್ನು ಸದಾ ಸಿದ್ಧವಾಗಿಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ತೆರಳುವುದನ್ನು ಹೊರತುಪಡಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಹೊರಗೆ ವಾಹನಗಳನ್ನು ಕಳುಹಿಸಲು ಅನುಮತಿ ಇರುವುದಿಲ್ಲ. ಶಾಸಕರಿಗೆ ಅಗತ್ಯವಿರುವಾಗ ವಾಹನಗಳು ಲಭ್ಯವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಾಹನ ಬಳಕೆಗೆ ಪ್ರತಿ ಕಿಲೋಮೀಟರ್‌ಗೆ ರೂ.8 ರಿಂದ ರೂ.12ರವರೆಗೆ ಶುಲ್ಕ ವಿಧಿಸಲಾಗುತ್ತದೆ. ಹಾಲಿ ಶಾಸಕರಾದರೆ ಈ ಮೊತ್ತವನ್ನು ಅವರ ವೇತನದಿಂದ, ಮಾಜಿ ಶಾಸಕರಾದರೆ ಪಿಂಚಣಿಯಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ.
ಈಗಾಗಲೇ ನಗದುರಹಿತ (ಕ್ಯಾಶ್‌ಲೆಸ್) ವ್ಯವಸ್ಥೆ ಜಾರಿಯಲ್ಲಿದ್ದು, ವಾಹನ ಬಳಕೆಯ ವೆಚ್ಚ ನೇರವಾಗಿ ಸಂಬಂಧಿಸಿದ ಶಾಸಕರ ವೇತನ ಅಥವಾ ಪಿಂಚಣಿಯಿಂದ ಕಡಿತವಾಗಲಿದೆ.
ಇದರಿಂದ ತಮ್ಮ ಹೆಸರಿನಲ್ಲಿ ಯಾರು ವಾಹನ ಬಳಸಿದ್ದಾರೆ ಎಂಬ ಮಾಹಿತಿ ಶಾಸಕರಿಗೆ ಸುಲಭವಾಗಿ ತಿಳಿಯಲಿದೆ ಎಂದು ವಿಧಾನಸಭೆ ಕಾರ್ಯಾಲಯದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



