15 ಲಕ್ಷ ಸಸಿ ನೆಟ್ಟು Guinness Record: ಮೊದಲು ಸ್ಥಳಕ್ಕೆ ಬಂದು ನೋಡಿ'; 'ಗಿಮಿಕ್' ಎಂದ ವಿಜಯೇಂದ್ರಗೆ BDA-GBA ತಿರುಗೇಟು..!
ಇಂತಹ ಬೃಹತ್ ವೃಕ್ಷಾರೋಪಣ ಕಾರ್ಯಕ್ರಮಗಳಲ್ಲಿ ಶೇ.90ಕ್ಕಿಂತ ಹೆಚ್ಚು ಸಸಿಗಳು ಬದುಕುಳಿದರೆ ಅದನ್ನು ಯಶಸ್ವಿ ಎಂದು ತಜ್ಞರು ಪರಿಗಣಿಸುತ್ತಾರೆ. ನಮ್ಮ ಅಭಿಯಾನದಲ್ಲಿ ನೆಟ್ಟಿರುವ ಸಸಿಗಳ ಬದುಕುಳಿಯುವ ಪ್ರಮಾಣ ಅದಕ್ಕಿಂತ ಹೆಚ್ಚಿದೆ.

ಬೆಂಗಳೂರು: ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 15 ಲಕ್ಷ ಸಸಿಗಳನ್ನು ನೆಟ್ಟು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಬೃಹತ್ ವೃಕ್ಷಾರೋಪಣ ಅಭಿಯಾನ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಅಭಿಯಾನವನ್ನು ಕೇವಲ "ಪ್ರಚಾರದ ಗಿಮಿಕ್" ಎಂದು ಟೀಕಿಸಿದ್ದು, ಇದಕ್ಕೆ ಬೃಹತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬೆಂಗಳೂರು ನಗರ ಆಡಳಿತದ ಅಧಿಕಾರಿಗಳು ತಿರುಗೇಟು ನೀಡಿದ್ದಾರೆ.
ಬಿಡಿಎ ವತಿಯಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಿಯಾವಾಕಿ (Miyawaki) ವಿಧಾನ ಬಳಸಿ 15 ಲಕ್ಷ ಸಸಿಗಳನ್ನು ನೆಡುವ ಅಭಿಯಾನ ನಡೆಸಲಾಗಿತ್ತು. ಈ ಅಭಿಯಾನಕ್ಕೆ ಗಿನ್ನೆಸ್ ವಿಶ್ವ ದಾಖಲೆ ಲಭಿಸಿದ್ದು, ನಗರದಲ್ಲಿ ಹಸಿರು ವಾತಾವರಣ ಹೆಚ್ಚಿಸುವ ಮಹತ್ವದ ಪ್ರಯತ್ನ ಎಂದು ಸರ್ಕಾರ ಬಣ್ಣಿಸಿತ್ತು.
ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ನೆಟ್ಟಿರುವ ಸಸಿಗಳಲ್ಲಿ ಬಹುತೇಕ ಒಣಗಿ ಹೋಗಿದ್ದು, ಸರ್ಕಾರ ಕೇವಲ ದಾಖಲೆಗಾಗಿ ಈ ಕಾರ್ಯಕ್ರಮ ನಡೆಸಿದೆ ಎಂದು ಆರೋಪಿಸಿದ್ದಾರೆ.
ಈ ಆರೋಪಕ್ಕೆ ತಿರುಗೇಟು ನೀಡಿರುವ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, "15 ಲಕ್ಷ ಮರಗಳನ್ನು ನೆಟ್ಟಿದ್ದೇವೆ. ಅವು ಸಂಪೂರ್ಣವಾಗಿ ಬೆಳೆದ ಬಳಿಕ ಬೆಂಗಳೂರಿಗೆ ವರ್ಷಕ್ಕೆ ಸುಮಾರು 15 ಕೋಟಿ ಕೆಜಿ ಆಮ್ಲಜನಕ ಒದಗಿಸುವ ಸಾಮರ್ಥ್ಯ ಹೊಂದಿರಲಿವೆ. ಇದು ಒಬ್ಬ ವ್ಯಕ್ತಿಯ ಸಾಧನೆಯಲ್ಲ; ಸಾವಿರಾರು ಜನರು ಸ್ವಯಂಪ್ರೇರಿತವಾಗಿ ಭಾಗವಹಿಸಿ ನಿರ್ಮಿಸಿದ ವಿಶ್ವದಾಖಲೆ," ಎಂದು ಹೇಳಿದ್ದಾರೆ.
ಮರಗಳ ನಿರ್ವಹಣೆಗೆ ಅಗತ್ಯ ನೀರಾವರಿ ವ್ಯವಸ್ಥೆ ಮಾಡಲಾಗುತ್ತಿದ್ದು, ಮಿಯಾವಾಕಿ ವಿಧಾನದಲ್ಲಿ ನೆಟ್ಟಿರುವುದರಿಂದ ಮರಗಳು ಹೆಚ್ಚು ವೇಗವಾಗಿ ಮತ್ತು ದಟ್ಟವಾಗಿ ಬೆಳೆಯಲಿವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿ.ವೈ. ವಿಜಯೇಂದ್ರ ಅವರು ಮೊದಲು ಸಸಿ ನೆಟ್ಟ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಿ ಬಳಿಕ ಟೀಕೆ ಮಾಡಲಿ ಎಂದು ಆಹ್ವಾನ ನೀಡಿದ್ದಾರೆ.
ಇದೇ ವೇಳೆ ಬೆಂಗಳೂರು ನಗರ ಆಯುಕ್ತ ಕ್ಯಾಪ್ಟನ್ ಮನಿವಣ್ಣನ್ ಅವರು ಕೂಡ ಬಿಜೆಪಿ ಆರೋಪವನ್ನು ತಳ್ಳಿಹಾಕಿದರು.
"ಇಂತಹ ಬೃಹತ್ ವೃಕ್ಷಾರೋಪಣ ಕಾರ್ಯಕ್ರಮಗಳಲ್ಲಿ ಶೇ.90ಕ್ಕಿಂತ ಹೆಚ್ಚು ಸಸಿಗಳು ಬದುಕುಳಿದರೆ ಅದನ್ನು ಯಶಸ್ವಿ ಎಂದು ತಜ್ಞರು ಪರಿಗಣಿಸುತ್ತಾರೆ. ನಮ್ಮ ಅಭಿಯಾನದಲ್ಲಿ ನೆಟ್ಟಿರುವ ಸಸಿಗಳ ಬದುಕುಳಿಯುವ ಪ್ರಮಾಣ ಅದಕ್ಕಿಂತ ಹೆಚ್ಚಿದೆ. ಸ್ಥಳಕ್ಕೆ ಭೇಟಿ ನೀಡದೇ ಇಂತಹ ಆರೋಪ ಮಾಡುವುದು ಬೇಸರದ ಸಂಗತಿ," ಎಂದು ಹೇಳಿದ್ದಾರೆ.
ಈ ನಡುವೆ ವೃಕ್ಷಾರೋಪಣ ಅಭಿಯಾನವು ಸಾರ್ವಜನಿಕರ ಸಹಭಾಗಿತ್ವ, ವೈಜ್ಞಾನಿಕ ವಿಧಾನ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ನಡೆಸಲಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಸಮರ್ಥಿಸಿಕೊಂಡಿದೆ.
ಯಾವುದೇ ಬೃಹತ್ ಪ್ರಮಾಣದ ವೃಕ್ಷಾರೋಪಣೆಯಲ್ಲಿ ಕೆಲ ಸಸಿಗಳು ಒಣಗುವುದು ಸಹಜವಾದರೂ, ಒಟ್ಟಾರೆ ಬದುಕುಳಿಯುವ ಪ್ರಮಾಣ ತಜ್ಞರು ನಿಗದಿಪಡಿಸಿರುವ ಮಾನದಂಡಕ್ಕಿಂತ ಹೆಚ್ಚಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



