ಬಫರ್ ವಲಯದಲ್ಲೇ ಅಕ್ರಮ ಸ್ಫೋಟ, ಸುರಕ್ಷತಾ ನಿಯಮ ಉಲ್ಲಂಘನೆಯೇ ಬೆಂಗಳೂರು ಕ್ವಾರಿ ದುರಂತಕ್ಕೆ ಕಾರಣ..?
ಹೆಚ್ಚು ಕಲ್ಲು ಹೊರತೆಗೆಯುವ ಪೈಪೋಟಿಯಲ್ಲಿ ಕಲ್ಲುಗಣಿ ಮಾಲೀಕರು ಸುರಕ್ಷತಾ ಕ್ರಮಗಳನ್ನು ಕಡೆಗಣಿಸುತ್ತಿದ್ದಾರೆ. ನಿಯಮಾನುಸಾರ ಕಡಿಮೆ ಪ್ರಮಾಣದ ಸ್ಫೋಟಕ ಬಳಸಿ ಹಂತ ಹಂತವಾಗಿ ಸ್ಫೋಟ ನಡೆಸುವ ಬದಲು, ಸಮಯ ಉಳಿಸಲು ಭಾರೀ ಪ್ರಮಾಣದ ಸ್ಫೋಟಕ ಬಳಸಿ ಸ್ಫೋಟ ನಡೆಸುತ್ತಿದ್ದಾರೆ.

ಬೆಂಗಳೂರು: ಬೆಂಗಳೂರ ನಗರದ ಮಾದಾಪಟ್ಟಣ ಸಮೀಪದ ಕ್ವಾರಿಯಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ಅಕ್ರಮ ಸ್ಫೋಟ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಪ್ರಮುಖ ಕಾರಣ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಗಣಿಗಾರಿಕೆ ನಡೆಸುವ ವೇಳೆ ಕಡ್ಡಾಯವಾಗಿ ಪಾಲಿಸಬೇಕಾದ 7.5 ಮೀಟರ್ ಬಫರ್ ವಲಯವನ್ನು ಉಲ್ಲಂಘಿಸಿ ಸ್ಫೋಟ ನಡೆಸಲಾಗಿದೆ. ಇದರಿಂದಲೇ ಏಳು ಕಾರ್ಮಿಕರು ಸಾವನ್ನಪ್ಪಿರಬಹುದು ಎಂದು ಆರೋಪಿಸಿದ್ದಾರೆ.
ಈ ದುರಂತದ ಬೆನ್ನಲ್ಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಬೆಂಗಳೂರಿನ ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 48 ಕಲ್ಲುಗಣಿಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಸ್ಥಳೀಯ ನಿವಾಸಿ ಲಕ್ಷ್ಮೀನಾರಾಯಣ ಮಾತನಾಡಿ, ಗಣಿ ಸುರಕ್ಷತಾ ಮಹಾನಿರ್ದೇಶನಾಲಯ (DGMS) ಮಾರ್ಗಸೂಚಿಗಳ ಪ್ರಕಾರ ಗಣಿಗಾರಿಕೆ ಗುತ್ತಿಗೆ ಪ್ರದೇಶದ ಸುತ್ತ ಕನಿಷ್ಠ 7.5 ಮೀಟರ್ ಬಫರ್ ವಲಯ ಕಡ್ಡಾಯವಾಗಿದ್ದು, ಆ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಅಥವಾ ಸ್ಫೋಟ ನಡೆಸಲು ಅವಕಾಶವಿರುವುದಿಲ್ಲ.
ಆದರೆ, ಪಕ್ಕಪಕ್ಕದಲ್ಲಿದ್ದ ಎರಡು ಕಲ್ಲುಗಣಿಗಳ ಮಾಲೀಕರು ಈ ನಿಯಮವನ್ನು ಉಲ್ಲಂಘಿಸಿ ನಿಷೇಧಿತ ವಲಯದಲ್ಲೇ ಗಣಿಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನಿಯಮಿತ ಪರಿಶೀಲನೆ ನಡೆಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ ಎಂದು ದೂರಿದ್ದಾರೆ.
ಗ್ರಾಮದ ಮತ್ತೊಬ್ಬ ನಿವಾಸಿ ಮಾತನಾಡಿ, ಹೆಚ್ಚು ಕಲ್ಲು ಹೊರತೆಗೆಯುವ ಪೈಪೋಟಿಯಲ್ಲಿ ಕಲ್ಲುಗಣಿ ಮಾಲೀಕರು ಸುರಕ್ಷತಾ ಕ್ರಮಗಳನ್ನು ಕಡೆಗಣಿಸುತ್ತಿದ್ದಾರೆ. ನಿಯಮಾನುಸಾರ ಕಡಿಮೆ ಪ್ರಮಾಣದ ಸ್ಫೋಟಕ ಬಳಸಿ ಹಂತ ಹಂತವಾಗಿ ಸ್ಫೋಟ ನಡೆಸುವ ಬದಲು, ಸಮಯ ಉಳಿಸಲು ಭಾರೀ ಪ್ರಮಾಣದ ಸ್ಫೋಟಕ ಬಳಸಿ ಸ್ಫೋಟ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಅಧಿಕಾರಿಗಳು ಪರಿಶೀಲನೆ ವೇಳೆ ದಾಖಲೆಗಳನ್ನು ಮಾತ್ರ ಪರಿಶೀಲಿಸುತ್ತಿದ್ದು, ಸ್ಥಳದಲ್ಲಿ ಸುರಕ್ಷತಾ ಕ್ರಮಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಸಮರ್ಪಕವಾಗಿ ಪರಿಶೀಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿ ರಾಮಯ್ಯ ಅವರು ಮಾತನಾಡಿ, ಮೇಲ್ಭಾಗದಲ್ಲಿದ್ದ ಕಲ್ಲುಗಣಿಯ ಬಫರ್ ವಲಯದಲ್ಲಿ ಬುಧವಾರ ರಾತ್ರಿ ಅಥವಾ ಅದಕ್ಕೂ ಮುನ್ನ ಸ್ಫೋಟ ನಡೆದಿರುವ ಸಾಧ್ಯತೆ ಇದೆ. ಘಟನಾ ಸ್ಥಳದಲ್ಲಿ ಸ್ಫೋಟಕಗಳ ತಂತಿಗಳು ಪತ್ತೆಯಾಗಿದ್ದು, ಬಂಡೆಗಳು ಮೊದಲೇ ಒಡೆದ ಸ್ಥಿತಿಯಲ್ಲಿದ್ದವು ಎಂದು ತಿಳಿಸಿದ್ದಾರೆ.
ಕಾರ್ಮಿಕರಿಗೆ ಅಗತ್ಯವಾದ ಸುರಕ್ಷತಾ ಸಾಧನಗಳಾದ ಹೆಲ್ಮೆಟ್, ಕೈಗವಸು, ಸುರಕ್ಷತಾ ಬೂಟು ಸೇರಿದಂತೆ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು ಒದಗಿಸಲಾಗಿರಲಿಲ್ಲ ಎಂದು ಲಕ್ಷ್ಮೀನಾರಾಯಣ ಅವರು ಆರೋಪಿಸಿದ್ದಾರೆ.
ದಿನಗೂಲಿಯನ್ನೇ ನಂಬಿರುವ ಅನೇಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭಯದಿಂದ ಸುರಕ್ಷತಾ ಸಾಧನಗಳನ್ನು ಕೇಳಲು ಸಹ ಹಿಂಜರಿಯುತ್ತಿದ್ದರು ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಜಿಲ್ಲಾ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಅವರು, ದುರಂತದ ಬಳಿಕ ಜಿಲ್ಲೆಯಲ್ಲಿರುವ 48 ಕಲ್ಲುಗಣಿಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
"ಎಲ್ಲಾ ಕ್ವಾರಿ ಮಾಲೀಕರೊಂದಿಗೆ ಸಭೆ ನಡೆಸಿ ಗಣಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗುವುದು. ಸುಮಾರು 15 ದಿನಗಳ ಹಿಂದೆಯೇ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ ಈ ದುರಂತ ಸಂಭವಿಸಿದೆ. ಎರಡೂ ಕಲ್ಲುಗಣಿಗಳ ಮಾಲೀಕರ ಬಳಿ ಮಾನ್ಯ ಪರವಾನಗಿ ಇತ್ತು" ಎಂದು ಹೇಳಿದ್ದಾರೆ.
ಈ ಆರೋಪಗಳ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದ್ದು, ಸುರಕ್ಷತಾ ನಿಯಮಗಳ ಉಲ್ಲಂಘನೆ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



