ರಾಜ್ಯ

'ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದೆವು... ಆದರೆ, ಮಗನನ್ನೇ ಕಳೆದುಕೊಂಡೆವು': ಕ್ವಾರಿ ದುರಂತದ ಬಳಿಕ ಕುಟುಂಬಸ್ಥರ ಆಕ್ರಂದನ

ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದೆವು. ಕಲ್ಲುಗಣಿಯಲ್ಲಿ ಕೆಲಸ ಸಿಕ್ಕಿತ್ತು. ಆದರೆ, ಈಗ ನಮ್ಮ ಮಗನನ್ನೇ ಕಳೆದುಕೊಂಡಿದ್ದೇವೆ. ಮುಂದೆ ಏನು ಮಾಡಬೇಕೋ ಗೊತ್ತಾಗುತ್ತಿಲ್ಲ.

'ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದೆವು... ಆದರೆ, ಮಗನನ್ನೇ ಕಳೆದುಕೊಂಡೆವು': ಕ್ವಾರಿ ದುರಂತದ ಬಳಿಕ ಕುಟುಂಬಸ್ಥರ ಆಕ್ರಂದನ
ದುರಂತದ ನಂತರ ಮೃತ ಕಾರ್ಮಿಕ ರಾಮು ಅವರ ತಾಯಿ ರೋಧಿಸುತ್ತಿರುವುದು.
Published On :

ಬೆಂಗಳೂರು: ಬೆಂಗಳೂರಿನ ಕಲ್ಲುಗಣಿಯಲ್ಲಿ ಸಂಭವಿಸಿದ ಭೀಕರ ದುರಂತ ಏಳು ಕಾರ್ಮಿಕರ ಜೀವವನ್ನು ಬಲಿ ಪಡೆದಿದ್ದು, ಇದರ ಬೆನ್ನಲ್ಲೇ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ದುಡಿದು ಜೀವನ ಕಟ್ಟಿಕೊಳ್ಳುವ ಕನಸಿನೊಂದಿಗೆ ಬೆಂಗಳೂರಿಗೆ ಬಂದಿದ್ದ ಕುಟುಂಬಗಳು ಇದೀಗ ತಮ್ಮ ಆತ್ಮೀಯರನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಮುಳುಗಿವೆ.

ಯಾದಗಿರಿ ಮೂಲದ ಟ್ರ್ಯಾಕ್ಟರ್ ಚಾಲಕ ರಾಮು ದುರಂತದಲ್ಲಿ ಮೃತಪಟ್ಟವರಲ್ಲಿ ಒಬ್ಬರಾಗಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿ ದುಃಖ ತಡೆಯಲಾರದೆ, "ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದೆವು. ಕಲ್ಲುಗಣಿಯಲ್ಲಿ ಕೆಲಸ ಸಿಕ್ಕಿತ್ತು. ಆದರೆ, ಈಗ ನಮ್ಮ ಮಗನನ್ನೇ ಕಳೆದುಕೊಂಡಿದ್ದೇವೆ. ಮುಂದೆ ಏನು ಮಾಡಬೇಕೋ ಗೊತ್ತಾಗುತ್ತಿಲ್ಲ" ಎಂದು ಕಣ್ಣೀರಿಟ್ಟರು.

"ಗುರುವಾರ ಬೆಳಗ್ಗೆ ಸುಮಾರು 6 ಗಂಟೆಗೆ ರಾಮು ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಕೆಲವೇ ಗಂಟೆಗಳಲ್ಲಿ ಅಪಘಾತವಾಗಿದೆ ಎಂದು ಕರೆ ಬಂತು. ಈಗ ಅವನ ಹೆಂಡತಿಗೆ ಏನು ಹೇಳಲಿ ಎಂಬುದೇ ತಿಳಿಯುತ್ತಿಲ್ಲ" ಎಂದು ಗೋಳಾಡಿದರು.

ಮೃತರ ಮತ್ತೊಬ್ಬ ಸಂಬಂಧಿ ಮಾತನಾಡಿ, "ಇಂತಹ ಘಟನೆಗಳು ನಡೆದರೆ ನಾವು ಹೇಗೆ ಬದುಕಬೇಕು? ಬೇರೆ ಊರಿನಿಂದ ಉತ್ತಮ ಜೀವನಕ್ಕಾಗಿ ಇಲ್ಲಿ ಬಂದಿದ್ದೇವೆ. ದಿನಕ್ಕೆ ಸುಮಾರು ರೂ.800 ಕೂಲಿಗೆ ದುಡಿಯುತ್ತಿದ್ದೇವೆ. ಈಗ ಈ ದುರಂತದಿಂದ ಎಲ್ಲ ಕಾರ್ಮಿಕರೂ ಭಯಭೀತರಾಗಿದ್ದಾರೆ" ಎಂದು ನೋವು ಹಂಚಿಕೊಂಡರು.

ದುರಂತ ಸಂಭವಿಸಿದ ವೇಳೆ ಸ್ಥಳದಿಂದ ಸುಮಾರು 10 ಮೀಟರ್ ದೂರದಲ್ಲಿ ಕಲ್ಲುಗಳನ್ನು ಲೋಡ್ ಮಾಡುತ್ತಿದ್ದ ಭೂ ಅಗೆತ ಯಂತ್ರ (ಅರ್ಥ್‌ಮೂವರ್) ಚಾಲಕ ವಿನೋದ್ ಕೂಡ ಭೀಕರ ಘಟನೆಯ ಬಗ್ಗೆ ವಿವರಿಸಿದರು.

"ಹಠಾತ್ತನೆ ದೊಡ್ಡ ಸದ್ದು ಕೇಳಿಸಿತು. ಬೃಹತ್ ಬಂಡೆಗಳು ಕುಸಿದುಬಿದ್ದವು. ನನ್ನ ಯಂತ್ರದ ಮೇಲೆ ಯಾವುದೇ ಕಲ್ಲು ಬೀಳಲಿಲ್ಲ. ಆದರೆ, ಬಂಡೆಗಳ ಸಮೀಪ ನಿಂತಿದ್ದ ಕಾರ್ಮಿಕರು ಕ್ಷಣಾರ್ಧದಲ್ಲೇ ಅವುಗಳಡಿ ಸಿಲುಕಿ ನಜ್ಜುಗುಜ್ಜಾದರು. ಅವರನ್ನು ರಕ್ಷಿಸುವ ಅವಕಾಶವೇ ಇರಲಿಲ್ಲ" ಎಂದು ಹೇಳಿದರು.

"ಕೆಲವರು ಪ್ರಾಣ ಉಳಿಸಿಕೊಳ್ಳಲು ಓಡಿ, ಬಂಡೆಗಳಿಂದ ತಪ್ಪಿಸಿಕೊಳ್ಳಲು ಜಿಗಿದರು. ಈ ವೇಳೆ ಅವರ ಕೈ, ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ. ತಮ್ಮ ಕಣ್ಣೆದುರೇ ಸಹೋದ್ಯೋಗಿಗಳು ಬಂಡೆಗಳಡಿ ಸಿಲುಕಿದ್ದ ದೃಶ್ಯ ಇನ್ನೂ ಮನಸ್ಸಿನಿಂದ ಮಾಸುತ್ತಿಲ್ಲ" ಎಂದು ವಿನೋದ್ ಬೇಸರ ವ್ಯಕ್ತಪಡಿಸಿದರು.

ಈ ದುರಂತವು ಕೇವಲ ಏಳು ಜೀವಗಳನ್ನು ಕಸಿದುಕೊಂಡಷ್ಟೇ ಅಲ್ಲ, ದುಡಿದು ಬದುಕು ಕಟ್ಟಿಕೊಳ್ಳಲು ಬಂದಿದ್ದ ಹಲವು ಕುಟುಂಬಗಳ ಭವಿಷ್ಯವನ್ನೇ ಕತ್ತಲಲ್ಲಿ ತಳ್ಳಿದೆ. ಇದೀಗ ಮೃತರ ಕುಟುಂಬಗಳು ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.