ರಾಜ್ಯ

ಕಾರಾಗೃಹಕ್ಕೆ ಹೊರಗಿನಿಂದ ಬರುವ ಆಹಾರ, ಬಟ್ಟೆ, ಇತರ ವಸ್ತುಗಳಿಗೆ ನಿರ್ಬಂಧ: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಕೈದಿಗಳಿಗೆ ಶಾಕ್..!

ಜೈಲಿನ ಡಿಜಿಪಿ ಅಲೋಕ್‌ ಕುಮಾರ್‌ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಕೈದಿಗಳಿಗೆ ಆಹಾರ, ಬಟ್ಟೆ ಮತ್ತು ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕಾರಾಗೃಹಕ್ಕೆ ಹೊರಗಿನಿಂದ ಬರುವ ಆಹಾರ, ಬಟ್ಟೆ, ಇತರ ವಸ್ತುಗಳಿಗೆ ನಿರ್ಬಂಧ: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಕೈದಿಗಳಿಗೆ ಶಾಕ್..!
ಸಂಗ್ರಹ ಚಿತ್ರ
Published On :

ಬೆಂಗಳೂರು: ಪರಪ್ಪನ ಆಗ್ರಹಾರ ಕಾರಾಗೃಹಕ್ಕೆ ಹೊರಗಿನಿಂದ ಬರುವ ಆಹಾರ, ಬಟ್ಟೆ, ಇತರ ವಸ್ತುಗಳಿಗೆ ನಿರ್ಬಂಧ ಹೇರಲಾಗಿದ್ದು, ಅಧಿಕಾರಿಗಳ ಈ ನಿರ್ಧಾರ ಜೈಲಿನಲ್ಲಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಕೈದಿಗಳಿಗೆ ಶಾಕ್ ಕೊಟ್ಟಂತಾಗಿದೆ.

ಜೈಲಿನ ಡಿಜಿಪಿ ಅಲೋಕ್‌ ಕುಮಾರ್‌ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಕೈದಿಗಳಿಗೆ ಆಹಾರ, ಬಟ್ಟೆ ಮತ್ತು ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕೈದಿಗಳಿಗೆ ಜೈಲಿನ ನಿಯಮದ ಪ್ರಕಾರವೇ ಆಹಾರ, ಬಟ್ಟೆ ಮತ್ತು ಹಾಸಿಗೆಗಳನ್ನು ಒದಗಿಸಬೇಕು ಎಂದು ತಿಳಿಸಲಾಗಿದೆ.

ಸಂದರ್ಶನ ಸಮಯದಲ್ಲಿ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳನ್ನು ನೀಡಲು ಅವಕಾಶ ನೀಡಲಾಗಿದೆ. ಆದರೆ, ಅವುಗಳು ನಿರ್ದಿಷ್ಟ ಗ್ರಾಮ್‌ಗಳಲ್ಲಿಯೇ ಇರಬೇಕು ಎನ್ನವ ಷರತ್ತು ವಿಧಿಸಲಾಗಿದೆ.

ಬಾಳೆಹಣ್ಣು, ಸೇಬು, ಮಾವು, ಪೇರಲೆ ಹಾಗೂ ಸಪೋಟ ಹಣ್ಣುಗಳು 2 ಕೆಜಿ ಆಗುವಷ್ಟು ನೀಡಬಹುದು. ಅದಕ್ಕಿಂತ ಹೆಚ್ಚು ಇರುವಂತಿಲ್ಲ. ಒಣ ಹಣ್ಣುಗಳು ಹಾಗೂ ಬೇಕರಿ ತಿಂಡಿಗಳು ಅರ್ಧ ಕೆ.ಜಿ ಮೀರುವಂತಿಲ್ಲ. ಇನ್ನು ಎರಡು ಜೊತೆ ಬಟ್ಟೆ ಹಾಗೂ ಎರಡು ಒಳ ಉಡುಪು ನೀಡಬಹುದು ಎನ್ನಲಾಗಿದೆ. ಇದು ವಿಚಾರಣಾಧೀನ ಕೈದಿಗಳಿಗೆ ಮಾತ್ರ ಅನ್ವಯ. ಇದಕ್ಕಿಂತ ಹೆಚ್ಚಿನ ಬಟ್ಟೆಗಳನ್ನು ನೀಡುವಂತಿಲ್ಲ ಎಂದು ತಿಳಿಸಲಾಗಿದೆ.

ಜೈಲಿನಲ್ಲಿ ಎರಡು ರೀತಿಯ ತಪಾಸಣೆ ಆಗಬೇಕು. ಮೊದಲು ದೈಹಿಕ ತಪಾಸಣೆ ನಂತರ ಸೆಕ್ಯುರಿಟಿ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಅವಶ್ಯಕತೆ ಬಿದ್ದಲ್ಲಿ ಜೈಲಾಧಿಕಾರಿಗಳು ಯಾವುದೇ ರೀತಿಯ ತಪಾಸಣೆ ಕೂಡ ನಡೆಸಬಹದು. ತಕ್ಷಣವೇ ಈ ನಿಯಮಗಳು ಜಾರಿಗೆ ಬರಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

ಕಾರಗೃಹಗಳಲ್ಲಿ ಕೆಲವರಿಗೆ ವಿಶೇಷ ಸವಲತ್ತು ಹಾಗೂ ತಾರತಮ್ಯದ ಆರೋಪಗಳು ಬಂದಿದ್ದವು. ಈ ಬಗ್ಗೆ ಹೈಕೋರ್ಟ್ ನಲ್ಲಿ ರೇಣುಕಾಸ್ವಾಮಿ ಪರ ವಕೀಲರು ಆರೋಪ ಮಾಡಿದ್ದರು.

ಈ ಪ್ರಕರಣದಲ್ಲಿ ಯಾರು ಯಾರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂಬ ಮಾಹಿತಿಯನ್ನೂ ಹೈಕೋರ್ಟ್‌ ಕೇಳಿತ್ತು. ಇದರ ಬೆನ್ನಲ್ಲಿಯೇ ಎಲ್ಲಾ ಜೈಲುಗಳಿಗೂ ಸುತ್ತೋಲೆ ಹೊರಡಿಸಲಾಗಿದೆ. ದರ್ಶನ್ ಗ್ಯಾಂಗ್ ಸೇರಿದಂತೆ ಕಾರಗೃಹದಲ್ಲಿರುವ ಎಲ್ಲಾ ಕೈದಿಗಳಿಗೂ ಈ ಸೂಚನೆ ಅನ್ವಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.