ಫಸ್ಟ್ ಟೈಂ ಕಳ್ಳತನಕ್ಕಿಳಿದು ಯಡವಟ್ಟು: ಸಿಕ್ಕಿ ಬಿದ್ದಾತನಿಗೆ ಬಿತ್ತು ಭರ್ಜರಿ ಗೂಸಾ; 'ಹಲ್ಲೆ' ಎಂದು ಮನೆಯವರ ವಿರುದ್ಧವೇ ದೂರು ಕೊಟ್ಟ ಐನಾತಿ ಕಳ್ಳ..!
ಅಸ್ಗರ್ ಖಾನ್ ಆಟೋ ಚಾಲಕನಾಗಿದ್ದ. ಆತನ ಸ್ನೇಹಿತರು ಕಳ್ಳತನ ಮಾಡಿ ಮಜಾ ಮಾಡುತ್ತಿರುವುದನ್ನು ನೋಡಿ ತಾನು ಕಳ್ಳತನಕ್ಕೆ ಇಳಿಯಲು ನಿರ್ಧರಿಸಿದ್ದ.

ಬೆಂಗಳೂರು: ಕಳ್ಳತನ ಮಾಡಲು ಹೋದಾಗ ನನ್ನ ಮೇಲೆ ದಂಪತಿ ಹಲ್ಲೆ ಮಾಡಿದ್ದಾರೆಂದು ಸ್ವತಃ ಕಳ್ಳನೇ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಚಿತ್ರ ಘಟನೆಯೊಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಮ್ಮ ಮನೆಗೆ ಕಳ್ಳತನ ಮಾಡಲು ಬಂದಾಗ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಮನೆಯ ಮಾಲೀಕರು ದೂರು ನೀಡಿದ್ದು, ಇದಕ್ಕೆ ಪ್ರತಿಯಾಗಿ ಕಳ್ಳತನಕ್ಕೆ ಹೋಗಿದ್ದಾಗ ನನ್ನ ಮೇಲೆಯೇ ಅವರು ಹಲ್ಲೆ ನಡೆಸಿದ್ದಾರೆಂದು ಆರೋಪಿ ಪೊಲೀಸರಿಗೆ ದೂರು ನೀಡಿದ್ದಾನೆ.
ಒಂದೇ ಘಟನೆ ಸಂಬಂಧ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳತನಕ್ಕೆ ಯತ್ನಿಸಿದ ದಂಪತಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಸ್ಗರ್‌ಖಾನ್, ರಜಾಕ್ ಹಾಗೂ ಶ್ಯಾಮ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಅಸ್ಗರ್ ಖಾನ್ ಆಟೋ ಚಾಲಕನಾಗಿದ್ದ. ಆತನ ಸ್ನೇಹಿತರು ಕಳ್ಳತನ ಮಾಡಿ ಮಜಾ ಮಾಡುತ್ತಿರುವುದನ್ನು ನೋಡಿ ತಾನು ಕಳ್ಳತನಕ್ಕೆ ಇಳಿಯಲು ನಿರ್ಧರಿಸಿದ್ದ. ಸ್ನೇಹಿತರೊಂದಿಗೆ ಅಸ್ಗರ್ ಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕದಿಯಲು ಪ್ಲಾನ್ ಮಾಡಿದ್ದ. ಅಂತೆಯೇ ಮೂವರು ಅಪಾರ್ಟ್ಮೆಂಟ್ ಕಾಂಪೌಂಡ್ ಹಾರಿದ್ದಾರೆ. ಕಳ್ಳತನದ ವೇಳೆ ಮನೆಯವರು ಎಚ್ಚೆತ್ತುಕೊಂಡಿದ್ದು ಆರೋಪಿಗಳನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಗಾಬರಿಗೊಂಡ ಅಸ್ಗರ್ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ.
ಗಲಾಟೆ ಜೋರಾದಾಗ ಅಕ್ಕ ಪಕ್ಕದ ನಿವಾಸಿಗಳು ಬಂದಿದ್ದಾರೆ. ಜನ ಸೇರುವುದನ್ನು ನೋಡಿ ಅಸ್ಗರ್ ನ ಸ್ನೇಹಿತರು, ಅಸ್ಗರ್ ನನ್ನು ಬಿಟ್ಟು ಆತನ ಆಟೋದಲ್ಲೇ ಎಸ್ಕೇಪ್ ಆಗಿದ್ದಾರೆ. ಇತ್ತ ಸಿಕ್ಕಿ ಬಿದ್ದ ಅಸ್ಗರ್ ಗೆ ಸಾರ್ವಜನಿಕರು ಬೆಂಡೆತ್ತಿದ್ದಾರೆ. ಬಳಿಕ 112’ ಗೆ ಕರೆ ಮಾಡಿ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಏತನ್ಮಧ್ಯೆ, ಹಲ್ಲೆಯಿಂದ ಚಿಕಿತ್ಸೆ ಪಡೆದ ದಂಪತಿಗಳು, ಭಾನುವಾರ ಬೆಳಿಗ್ಗೆ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಮತ್ತು ಅವರ ಮೇಲೆ ನಡೆದ ಹಲ್ಲೆಯ ಬಗ್ಗೆ ದೂರು ನೀಡಿದ್ದಾರೆ.
ಇದೇ ವೇಳೆ ಅಸ್ಗರ್ ಕೂಡ ತನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆಂದು 'ಅಪರಿಚಿತ ವ್ಯಕ್ತಿಗಳ' ವಿರುದ್ಧ ದೂರು ದಾಖಲಿಸಿದ್ದಾರೆ, ಜೊತೆಗೆ ಅಪರಾಧ ಯತ್ನದಲ್ಲಿ ಭಾಗಿಯಾಗುವಂತೆ ಆಮಿಷವೊಡ್ಡಿದ್ದ ತನ್ನ ಇಬ್ಬರು ಸ್ನೇಹಿತರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.
ವಿಚಾರಣೆ ತನ್ನ ಇಬ್ಬರು ಸ್ನೇಹಿತರ ಬಗ್ಗೆ ಆತ ಮಾಹಿತಿ ನೀಡಿದ್ದು, ಆತನ ಮಾಹಿತಿ ಆಧರಿಸಿ ಪೊಲೀಸರು ಇಬ್ಬರು ಆರೋಪಿಗಳನ್ನೂ ಬಂಧನಕ್ಕೊಳಪಡಿಸಿದ್ದಾರೆ.
ದಂಪತಿಗಳ ದೂರಿನ ಆಧಾರದ ಮೇಲೆ ಅಸ್ಗರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಸ್ಗರ್ ನೀಡಿದ ದೂರಿನ ಆಧಾರದ ಮೇಲೆ ಆತನ ಇಬ್ಬರು ಸ್ನೇಹಿತರಾದ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಆರೋಪಿ ಮೇಲೆ ಹಲ್ಲೆ ನಡೆಸಿದವರ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ದಂಪತಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



