Kempegowda International Airport: ಹೊಸ ದಾಖಲೆ; ಜನವರಿ 24 ಒಂದೇ ದಿನ 1.4 ಲಕ್ಷ ಪ್ರಯಾಣಿಕರ ಸಂಚಾರ..!
ಜನವರಿ 24ರಂದು ಕೆಐಎ ಒಂದೇ ದಿನದಲ್ಲಿ ಸುಮಾರು 1.4 ಲಕ್ಷ ಪ್ರಯಾಣಿಕರ ಸಂಚಾರ ದಾಖಲಿಸಿದ್ದು, ಇದು ಇದೂವರೆಗೆ ಕಂಡುಬಂದ ಅತ್ಯಧಿಕ ಏಕದಿನ ಪ್ರಯಾಣಿಕರ ಸಂಖ್ಯೆಯಾಗಿದೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಜನವರಿ ಕೊನೆಯ ವಾರಾಂತ್ಯದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಮೂಲಕ ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರ ಸಂಚಾರದಲ್ಲಿ ದಾಖಲೆ ನಿರ್ಮಾಣವಾಗಿದೆ.
ಜನವರಿ 24ರಂದು ಕೆಐಎ ಒಂದೇ ದಿನದಲ್ಲಿ ಸುಮಾರು 1.4 ಲಕ್ಷ ಪ್ರಯಾಣಿಕರ ಸಂಚಾರ ದಾಖಲಿಸಿದ್ದು, ಇದು ಇದೂವರೆಗೆ ಕಂಡುಬಂದ ಅತ್ಯಧಿಕ ಏಕದಿನ ಪ್ರಯಾಣಿಕರ ಸಂಖ್ಯೆಯಾಗಿದೆ.
ಈ ಸಂಖ್ಯೆಯಲ್ಲಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರು, ಬೆಂಗಳೂರು ನಗರಕ್ಕೆ ಆಗಮಿಸಿದವರು ಮತ್ತು ಹೊರಟವರು—ಎಲ್ಲರೂ ಸೇರಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಕೆಐಎಯಲ್ಲಿ ಸರಾಸರಿ ದಿನಕ್ಕೆ ಸುಮಾರು 1.2 ಲಕ್ಷ ಪ್ರಯಾಣಿಕರ ಸಂಚಾರ ಇರುತ್ತದೆ. ಈ ಮಟ್ಟದ ಪ್ರಯಾಣಿಕರ ದಟ್ಟಣೆ ಅಪರೂಪದ ಸಂಗತಿ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜನವರಿ 20ರಿಂದ 30ರವರೆಗೆ ವಿಮಾನ ನಿಲ್ದಾಣ ಹೈ ಅಲರ್ಟ್‌ನಲ್ಲಿತ್ತು.
ಈ ಸಂದರ್ಭ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ವಿಮಾನ ನಿಲ್ದಾಣ ಆಡಳಿತ ಮತ್ತು ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಗೆ ಇದು ದೊಡ್ಡ ಸವಾಲಾಗಿತ್ತು. ಆದರೂ, ಸಮನ್ವಯಿತ ತಂಡ ಕಾರ್ಯದ ಮೂಲಕ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿವರಗಳ ಪ್ರಕಾರ, ಜನವರಿ 24ರಂದು ಟರ್ಮಿನಲ್–1 (T1) ಮೂಲಕ 83,494 ಪ್ರಯಾಣಿಕರು ಸಂಚರಿಸಿದ್ದರೆ, ಟರ್ಮಿನಲ್–2 (T2) ಮೂಲಕ 55,593 ಪ್ರಯಾಣಿಕರು ಪ್ರಯಾಣಿಸಿದ್ದಾರೆಂದು ತಿಳಿದುಬಂದಿದೆ.
ಈ ಭಾರೀ ಸಂಚಾರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಡಿಜಿ ಯಾತ್ರಾ (Digi Yatra) ಮಹತ್ವದ ಪಾತ್ರ ವಹಿಸಿದೆ. “ಟರ್ಮಿನಲ್–1ನಲ್ಲಿ ಪ್ರಯಾಣಿಕರ ಬಹುಪಾಲು ಡಿಜಿ ಯಾತ್ರಾ ವ್ಯವಸ್ಥೆಯ ಮೂಲಕ ಸಾಗಿದರು. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಈ ಡಿಜಿಟಲ್ ಉಪಕ್ರಮವನ್ನು ಬಳಸಿಕೊಂಡು, ಸುಮಾರು 40ರಿಂದ 50 ಶೇಕಡಾ ಪ್ರಯಾಣಿಕರು ವೇಗವಾಗಿ ಮತ್ತು ಸುಗಮವಾಗಿ ವಿಮಾನ ನಿಲ್ದಾಣದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಐಎಸ್‌ಎಫ್ ಸಿಬ್ಬಂದಿ, ವಿಮಾನ ನಿಲ್ದಾಣ ಆಡಳಿತ ಹಾಗೂ ವಿಮಾನಯಾನ ಕಂಪನಿಗಳ ನಡುವೆ ಉತ್ತಮ ಸಮನ್ವಯ ಮತ್ತು ವೃತ್ತಿಪರತೆ ಇದ್ದುದರಿಂದ, ಗಣರಾಜ್ಯೋತ್ಸವದ ಹೈ ಅಲರ್ಟ್ ನಡುವೆಯೂ ಪ್ರಯಾಣಿಕರ ಸಂಚಾರ ನಿರ್ವಹಣೆ ಯಶಸ್ವಿಯಾಯಿತು ಎಂದು ಹೇಳಿದ್ದಾರೆ.
ಕೆಐಎಯಲ್ಲಿ ಕಂಡುಬಂದ ಈ ದಾಖಲೆ ಮಟ್ಟದ ಸಂಚಾರ, ಬೆಂಗಳೂರು ದೇಶದ ಪ್ರಮುಖ ವಿಮಾನಯಾನ ಕೇಂದ್ರವಾಗಿ ಬೆಳೆಯುತ್ತಿರುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



