ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ: ಷರತ್ತಿನ ಅರಿವಿದೆ, ಮುಂದಾಲೋಚನೆಯಿಂದ ಟೆಂಡರ್ ಆಹ್ವಾನ
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿಯ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು `ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್’ನ (ಬಿಐಎಎಲ್) ಅನುಮತಿ ಬೇಕೆನ್ನುವುದು ನಮ್ಮ ಅರಿವಿನಲ್ಲಿದೆ. ಇದಕ್ಕೆ 2033ರವರೆಗೂ ಕಾಲಾವಕಾಶವಿದೆ. ಹೀಗಾಗಿಯೇ, ದೂರದೃಷ್ಟಿ ಇಟ್ಟುಕೊಂಡು ಈಗಿನಿಂದಲೇ ಉಳಿದ ಕೆಲಸಗಳನ್ನು ನಾವು ಆರಂಭಿಸಿದ್ದೇವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ.
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ದೇವನಹಳ್ಳಿಯ ಸಮೀಪದಲ್ಲಿ ಈಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಕ್ರಿಯವಾಗಿದೆ. ಇದು ಆರಂಭವಾಗುವಾಗಲೇ 2033ರವರೆಗೂ 150 ಕಿ.ಮೀ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಬಾರದೆಂಬ ಷರತ್ತು ಇದೆ. ಏತನ್ಮಧ್ಯೆ ಹೊಸದೆಹಲಿ ಮತ್ತು ನವೀ ಮುಂಬೈಗಳಲ್ಲಿ ಇಂತಹ ಷರತ್ತುಗಳನ್ನು ಸಡಿಲಿಸಿ, ಎರಡನೆಯ ಏರ್ಪೋರ್ಟುಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಸಂದರ್ಭ ನೋಡಿಕೊಂಡು ಬಗೆಹರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಒಂದು ವಿಮಾನ ನಿಲ್ದಾಣ ಬರಬೇಕೆಂದರೆ ಸ್ಥಳದ ಆಯ್ಕೆ, ಅದರ ಪರಿಶೀಲನೆ, ಭೂಸ್ವಾಧೀನ, ಪರಿಹಾರ ವಿತರಣೆ ಮುಂತಾದ ಅಂಶಗಳು ಮುಖ್ಯವಾಗುತ್ತವೆ. ಇವೆಲ್ಲವನ್ನೂ ಮುಗಿಸಿಕೊಳ್ಳಲು ಏನಿಲ್ಲವೆಂದರೂ ಐದಾರು ವರ್ಷಗಳು ಬೇಕಾಗುತ್ತವೆ. ಬಿಐಎಎಲ್ ಅನುಮತಿ ಬೇಕಾಗುವುದು ಇವೆಲ್ಲ ಮುಗಿದ ಮೇಲಷ್ಟೆ. ಹೀಗಾಗಿಯೇ ಈಗ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ(ಕೆಎಸ್ಐಐಡಿಸಿ) ಮೂಲಕ ಸ್ಥಳದ ಅನುಕೂಲ, ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿಯ ಉದ್ದೇಶಕ್ಕಾಗಿ ಟೆಂಡರ್ ಕರೆಯಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲು 5 ತಿಂಗಳ ಕಾಲಾವಕಾಶ ಕೊಡಲಾಗುವುದು. ಇದನ್ನು ಸಿದ್ಧಪಡಿಸುವಾಗ ಪ್ರಯಾಣಿಕರ ದಟ್ಟಣೆ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಇರುವ ಅವಕಾಶ, ಮೂಲಸೌಕರ್ಯ, ಭೌಗೋಳಿಕ ಲಕ್ಷಣಗಳು, ಮಳೆಯ ಪ್ರಮಾಣ, ಒಳಚರಂಡಿ, ಶಬ್ದ ಮಾಲಿನ್ಯ, ತ್ಯಾಜ್ಯ ನಿರ್ವಹಣೆ ಮುಂತಾದ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಇದೇನೇ ಇದ್ದರೂ ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವಿದೆ ಎಂಬುದನ್ನು ಸರಕಾರ ಮನಗಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ ಮತ್ತು ಸೋಮನಹಳ್ಳಿ ಹಾಗೂ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಇರುವ ಮತ್ತೊಂದು ಸ್ಥಳವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ತಂಡ ಪರಿಶೀಲಿಸಿ, ತನ್ನ ವರದಿಯನ್ನು ನಮಗೆ ನೀಡಿದೆ. ಇದಾದ ನಂತರವೇ ಈಗ ಟೆಂಡರ್ ಆಹ್ವಾನಿಸಲಾಗಿದೆ ಎಂದು ಎಂ.ಬಿ. ಪಾಟೀಲ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



